Karnataka Budget 2024: 2024-25 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಪೌರಾಡಳಿತ ಇಲಾಖೆಯ ಘೋಷಣೆಗಳು

Karnataka Budget 2024: ರಾಜ್ಯ ಬಜೆಟ್ ಇಂದು ಮಂಡಣೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಆಯವ್ಯಯ ಮಂಡನೆ ಮಾಡಿದ್ದಾರೆ. ಇದರಲ್ಲಿ ಪೌರಾಡಳಿತ ಇಲಾಖೆಯ ಘೋಷಣೆಗಳು ಈ ರೀತಿ ಇವೆ.

Written by - Bhavishya Shetty | Last Updated : Feb 16, 2024, 01:20 PM IST
    • ಸಿಎಂ ಸಿದ್ದರಾಮಯ್ಯರಿಂದ ಆಯವ್ಯಯ ಮಂಡನೆ
    • ರಾಜ್ಯ ಬಜೆಟ್ ನಲ್ಲಿ ಪೌರಾಡಳಿತ ಇಲಾಖೆಯ ಘೋಷಣೆಗಳು
    • ಬೆಂಗಳೂರಿನ ಮೇಲಿನ ಒತ್ತಡವನ್ನು ತಗ್ಗಿಸಲು ಸರ್ಕಾರದಿಂದ ವಿವಿಧ ಯೋಜನೆಗಳು
Karnataka Budget 2024: 2024-25 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಪೌರಾಡಳಿತ ಇಲಾಖೆಯ ಘೋಷಣೆಗಳು title=
Karnataka budget 2024

Latest news on Karnataka state budget 2024: ರಾಜ್ಯ ಬಜೆಟ್ ಇಂದು ಮಂಡಣೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಆಯವ್ಯಯ ಮಂಡನೆ ಮಾಡಿದ್ದಾರೆ. ಇದರಲ್ಲಿ ಪೌರಾಡಳಿತ ಇಲಾಖೆಯ ಘೋಷಣೆಗಳು ಈ ರೀತಿ ಇವೆ.

ಇದನ್ನೂ ಓದಿ:  ರಾಜ್ಯ ಬಜೆಟ್ ಲೆಕ್ಕಾಚಾರದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಿಕ್ಕ ಪಾಲು ಎಷ್ಟು?

ಪೌರಾಡಳಿತ

1. ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಸುಸ್ಥಿರವಾದ ಮೂಲಸೌಕರ್ಯಗಳನ್ನು ಒಳಗೊಂಡ ಮತ್ತು ಉದ್ಯೋಗಾವಕಾಶಗಳನ್ನು ಸೃಜಿಸುವಂತೆ ಆಕರ್ಷಕ ನಗರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬೆಂಗಳೂರಿನ ಮೇಲಿನ ಒತ್ತಡವನ್ನು ತಗ್ಗಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಲಿದೆ.

• ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ. ಗಳನ್ನು ಒದಗಿಸಲಾಗುವುದು.

•ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೆ.ಜಿ.ಎಫ್‌, ತುಮಕೂರಿನ ವಸಂತನರಸಾಪುರ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು

•ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ (Satellite Townships) ಅಭಿವೃದ್ಧಿಪಡಿಸಲಾಗುವುದು

•ಬೆಂಗಳೂರಿನ BIEC ನಿಂದ ತುಮಕೂರುವರೆಗೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆಗಳನ್ನು ಪ್ರಾರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.

2. ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಿಂಗ್‌ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಪೆರಿಫೆರಲ್‌ ರಿಂಗ್‌ ರಸ್ತೆಯನ್ನು ಪಿಪಿಪಿ ಅಥವಾ ಟೌನ್‌ ಪ್ಲಾನಿಂಗ್‌ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.

3. ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು 4,615 ಕೋಟಿ ರೂ. ಗಳಾಗಿದೆ. ಕಳೆದ ವರ್ಷ ಈ ಉದ್ದೇಶಕ್ಕಾಗಿ ನಾವು 320 ಕೋಟಿ ರೂ. ಅನುದಾನ ಒದಗಿಸಿದ್ದು, ಈ ವರ್ಷ 200 ಕೋಟಿ ರೂ. ಒದಗಿಸಿ, 7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದೇವೆ.

4. ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ದ್ರವ ಹಾಗೂ ಘನ ತ್ಯಾಜ್ಯ ಸಂಸ್ಕರಣೆಗೆ ಕೇಂದ್ರ ಸರ್ಕಾರದ ಪಾಲು 2,185 ಕೋಟಿ ರೂ.ಗಳನ್ನು ಒಳಗೊಂಡಂತೆ 5,072 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಜಲ ಮೂಲಗಳನ್ನು ಮಲಿನಗೊಳಿಸುವ ದ್ರವ ತ್ಯಾಜ್ಯಗಳ ಸಂಸ್ಕರಣೆ, ಲೆಗೆಸಿ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡುವ ಮೂಲಕ ನಗರಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡಲು ಒತ್ತು ನೀಡಲಾಗುವುದು.

5. ಸ್ಥಳೀಯ ಸಂಸ್ಥೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಂಟಿ ಸಹಭಾಗಿತ್ವದ ಯೋಜನೆಯಾದ ಅಮೃತ್‌ 2.0 ಅಡಿಯಲ್ಲಿ, 539 ಕೋಟಿ ರೂ. ಮೊತ್ತದಲ್ಲಿ ಕೆರೆ ಹಾಗೂ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಾಗುವುದು.

6. ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು, ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು.

7. ಆಸ್ತಿ ತೆರಿಗೆ ಮತ್ತು ಇನ್ನಿತರೆ ಶುಲ್ಕಗಳನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟಲು 3ಡಿ ಡ್ರೋನ್‌ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್‌ ಮತ್ತು ಮರು ಮೌಲ್ಯಮಾಪನವನ್ನು ಕೈಗೊಳ್ಳಲಾಗುವುದು.

8. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಸಮರ್ಪಕವಾಗಿ ವಸೂಲು ಮಾಡಲು, ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯಲಾಗುವುದು.

9. ನೇರಪಾವತಿಯಡಿ ಕೆಲಸ ನಿರ್ವಹಿಸುತ್ತಿರುವ 24,005 ಪೌರಕಾರ್ಮಿಕರನ್ನು ಈಗಾಗಲೇ ಖಾಯಂಗೊಳಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.  ನೇರಪಾವತಿಯಡಿಯಲ್ಲಿ ಬಾಕಿ ಉಳಿದಿರುವ ಪೌರಕಾರ್ಮಿಕರಿಗೂ ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮವಹಿಸಲಾಗುವುದು.

10. ಸಮರ್ಪಕ ಹಾಗೂ ಯೋಜಿತ ನಗರೀಕರಣಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಎಲ್ಲಾ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳನ್ನಾಗಿ ಉನ್ನತೀಕರಿಸಲು ಕ್ರಮಕೈಗೊಳ್ಳಲಾಗುವುದು.

11. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡಲಾಗುವುದು.

12. ಮೈಸೂರಿನ ಪ್ರಖ್ಯಾತ ಲ್ಯಾನ್ಸ್‌ಡೌನ್‌ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು.

ಇಂಧನ

13. ಗೃಹ ವಿದ್ಯುತ್‌ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನು ಜುಲೈ 1 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.

ಈ ಯೋಜನೆಯಡಿ 1.65 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದು, ಅಂದಾಜು 5 ಕೋಟಿಯಷ್ಟು ಜನರು ಉಚಿತ ವಿದ್ಯುತ್‌ ಸೌಲಭ್ಯ ಪಡೆಯುತ್ತಿದ್ದಾರೆ.

14. ಇದರೊಂದಿಗೆ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಮೊದಲಾದ ಯೋಜನೆಗಳ ಫಲಾನುಭವಿಗಳನ್ನೂ ಸಹ ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ, 48 ಯುನಿಟ್‌ ಒಳಗಿನ ಸರಾಸರಿ ಬಳಕೆಗೆ ಶೇ.10ರಷ್ಟು ಹೆಚ್ಚುವರಿ ವಿದ್ಯುತ್‌ ಬದಲಿಗೆ 10 ಯುನಿಟ್‌ಗಳಷ್ಟು ಹೆಚ್ಚುವರಿ ವಿದ್ಯುತ್‌ ಒದಗಿಸಲು ತೀರ್ಮಾನಿಸಲಾಗಿದೆ.

15. ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಮುಂದಿನ 7 ವರ್ಷಗಳಲ್ಲಿ ಇಂಧನ ವಲಯಕ್ಕೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವ ಮೂಲಕ ವಿದ್ಯುತ್‌ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು‌ 32,000 ಮೆಗಾವ್ಯಾಟ್‌ ನಿಂದ 60,000 ಮೆಗಾವ್ಯಾಟ್ ಗಳಿಗೆ ಹೆಚ್ಚಿಸಲಾಗುವುದು.

16. ರಾಜ್ಯವು ಉತ್ಪಾದಿಸುತ್ತಿರುವ ವಿದ್ಯುತ್ತಿನ ಶೇ.63 ರಷ್ಟು ಇಂಧನವು ನವೀಕರಿಸಬಹುದಾದ ಇಂಧನದಿಂದ ಆಗಿರುತ್ತದೆ.  ನಮ್ಮ ಸರ್ಕಾರದ ಸಕಾರಾತ್ಮಕ ನೀತಿಗಳಿಂದ ಈ ವಲಯದಲ್ಲಿ ಸಾವಿರಾರು ಕೋಟಿ ರೂ. ಖಾಸಗಿ ಹೂಡಿಕೆಯನ್ನು ಮಾಡಲಾಗುತ್ತಿದೆ. ಈ ನೀತಿಗಳನ್ನು ಇನ್ನಷ್ಟು ಹೂಡಿಕೆದಾರರ ಸ್ನೇಹಿಯನ್ನಾಗಿ ಮಾಡಲು ಕ್ರಮವಹಿಸಲಾಗುವುದು.

17. ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು PM-KUSUM Component-B ಯೋಜನೆಯಡಿ 1,174 ಕೋಟಿ ರೂ. ಅಂದಾಜು ವೆಚ್ಚದಲ್ಲಿ 40,000 ಜಾಲ ಮುಕ್ತ (Off Grid) ಸೋಲಾರ್ ಪಂಪ್ ಸೆಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.30ರಷ್ಟಿದ್ದು, ರಾಜ್ಯ ಸರ್ಕಾರದ ವತಿಯಿಂದ ನೀಡುವ ಸಹಾಯಧನವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ.

18. ಕರ್ನಾಟಕ ವಿದ್ಯುತ್‌ ನಿಗಮವು Tehri Hydro Development Corporation India Limited (THDCIL) ಸಹಯೋಗದೊಂದಿಗೆ ತೇಲುವ (Floating) ಸೌರ ಹಾಗೂ ಭೂಸ್ಥಾಪಿತ (Ground mounted) ಸೌರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

19. ಕೃಷಿ ಪಂಪ್‌ಸೆಟ್‌ ಫೀಡರ್‌ ಸೌರೀಕರಣ ಯೋಜನೆ ಹಂತ-I ಅಡಿಯಲ್ಲಿ 1,320 ಮೆಗಾ ವ್ಯಾಟ್‌ ವಿಕೇಂದ್ರೀಕೃತ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಇದರಿಂದ 3.37 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇದಲ್ಲದೆ, ಹಂತ-II ಅಡಿಯಲ್ಲಿ 1,192 ಮೆಗಾ ವ್ಯಾಟ್‌ ಸೌರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ 4.30 ಲಕ್ಷ ಐ.ಪಿ. ಸೆಟ್‌ಗಳನ್ನು ಸೌರೀಕರಣಗೊಳಿಸಲು  ಉದ್ದೇಶಿಸಲಾಗಿದೆ.

20. ಗ್ರೀನ್‌ ಹೈಡ್ರೋಜನ್‌ ಭವಿಷ್ಯದ ಇಂಧನ. ಖಾಸಗಿ ಬಂಡವಾಳವನ್ನು ಈ ವಲಯಕ್ಕೆ ಆಕರ್ಷಿಸಲು 300 ಕಿಲೋ ವ್ಯಾಟ್‌ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಸ್ಥಾವರವನ್ನು ಪ್ರಾಯೋಗಿಕವಾಗಿ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ MNRE ನಿಧಿಯಿಂದ ಸ್ವಯಂ-ಸುಸ್ಥಿರ ಘಟಕದ ಆಧಾರದ ಮೇಲೆ KREDL ವತಿಯಿಂದ ಅನುಷ್ಠಾನಗೊಳಿಸಲಾಗುವುದು ಮತ್ತು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸಲಾಗುವುದು.

21. KREDL ನಿಂದ ಪ್ರತೀ ಎಸ್ಕಾಂ ವ್ಯಾಪ್ತಿಯ ಆಯ್ದ ಒಂದು ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋಗ್ರಿಡ್ ವ್ಯವಸ್ಥೆಯ (Microgrid) ಮೂಲಕ ಬ್ಯಾಟರಿ ಶೇಖರಣೆಯನ್ನು ಹೊಂದಿದ 500 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ಘಟಕದ ಸ್ಥಾಪನೆಯ ಮೂಲಕ ಸದರಿ ಗ್ರಾಮಗಳನ್ನು ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡಲು ಉದ್ದೇಶಿಸಿದೆ.

22. ನವೀಕರಿಸಬಹುದಾದ ಇಂಧನವನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದಿಸಿ ಬೇಡಿಕೆ ಹೆಚ್ಚಿರುವ ಕೇಂದ್ರಗಳು ಮತ್ತು ಗ್ರೀನ್ ಹೈಡ್ರೋಜನ್ ಹಬ್‌ಗಳಿಗೆ ರವಾನಿಸಲು 765 kV ಯ Ultra High Voltage (UHV) ಟ್ರಾನ್ಸ್‌ಮಿಷನ್ ಮಾರ್ಗಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು.

23. ಪ್ರಸರಣ ಮಾರ್ಗಗಳ ನಿರ್ವಹಣೆಯಲ್ಲಿ ನಿಗದಿತ ಸ್ಥಗಿತಗಳು ಹಾಗೂ ದೀರ್ಘಾವಧಿಯ ಸ್ಥಗಿತಗಳನ್ನು ತಪ್ಪಿಸಲು 66 kV ಮತ್ತು 110 kV ಮೊಬೈಲ್/ ವಾಹನ ಮೇಲಿರಿಸಿರುವ ಸಬ್‌ಸ್ಟೇಷನ್‌ಗಳನ್ನು ಖರೀದಿಸಲಾಗುವುದು.

24. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳ ಬೆಳವಣಿಗೆಯಿಂದಾಗಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ನೀಗಿಸಲು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಬ್‌ಸ್ಟೇಷನ್‌ಗಳನ್ನು ಉನ್ನತೀಕರಿಸಲಾಗುವುದು.

25. ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು 2,500 EV Charging ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಅಲ್ಲದೇ, ವಿದ್ಯುತ್‌ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ರೂ. ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಇದನ್ನೂ ಓದಿ: Karnataka Budget 2024: ಖಾಲಿ ಇರುವ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ ಘೋಷಣೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News