ನವದೆಹಲಿ: ಕುಮಾರಸ್ವಾಮಿ ಸರ್ಕಾರ ಬೀಳಲು ರೇವಣ್ಣ ಕಾರಣ, ಕುಡಿಯಲು ನೀರು ಕೊಡದ ದೇವೇಗೌಡರ ಕುಟುಂಬಕ್ಕೆ ಗಂಗೆ ಶಾಪ ತಟ್ಟಿದೆ ಎಂದು ಸಂಸದ ಜಿ.ಎಸ್. ಬಸವರಾಜು ಆರೋಪಿಸಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು, ತುಮಕೂರು ಜನರಿಗೆ ಕುಡಿಯುವ ನೀರು ಬಿಡಲಿಲ್ಲ. ನೀರು ಬಿಡದ ರೇವಣ್ಣ ಮತ್ತು ದೇವೇಗೌಡರಿಗೆ ಗಂಗೆ ಶಾಪ ತಟ್ಟಿದೆ. ಇದನ್ನೆಲ್ಲ ನೋಡಿಕೊಂಡು ಸುಮ್ಮನಿದ್ದ ಕುಮಾರಸ್ವಾಮಿಗೂ ಅದರ ಪರಿಣಾಮ ಬೀರಿದೆ ಎಂದು ಹೆಚ್‌ಡಿಡಿ ಕುಟುಂಬದ ವಿರುದ್ಧ ಸಂಸದ ಜಿ.ಎಸ್ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರನ್ನು ಸೋಲಿಸುವ ಶಕ್ತಿ ನನಗಿರಲಿಲ್ಲ:
ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸುವ ಶಕ್ತಿ ನಂಗಿರಲಿಲ್ಲ. ಆದರೆ, ಗಂಗೆ ಶಾಪದಿಂದ ತುಮಕೂರಿನಲ್ಲಿ ದೇವೇಗೌಡರು ಸೋತರು. ರೇವಣ್ಣ ಅವರಿಂದ ಕುಮಾರಸ್ವಾಮಿ ಸರ್ಕಾರ ಪತನವಾಯಿತು. ಗಂಗೆಯ ಶಾಪದಿಂದಲೇ ಇದೇಲ್ಲ ಆಗಿದೆ ಎಂದು ಸಂಸದ ಜಿ.ಎಸ್. ಬಸವರಾಜ್ ಪುನರುಚ್ಚರಿಸಿದರು.
ನೂತನ ಯಡಿಯೂರಪ್ಪ ಸರ್ಕಾರಕ್ಕೆ ಸ್ವಾಗತ:
ರಾಜ್ಯದಲ್ಲಿ 14 ತಿಂಗಳ ನರಕವನ್ನು ನಾವು ನೋಡಿದ್ದೇವೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದೆ ಇರುವಂತ ಪರಿಸ್ಥಿತಿಯನ್ನು ಕಂಡಿದ್ದೇವೆ. ಮೈತ್ರಿ ಸರ್ಕಾರದ ಕಾರ್ಯವೈಖರಿಯಿಂದ ಬೇಸರಗೊಂಡಿದ್ದ ಅತೃಪ್ತ ಶಾಸಕರು ಪಕ್ಷ ಬಿಟ್ಟು ರಾಜೀನಾಮೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನವಾಗಿದೆ. ಪ್ರಥಮವಾಗಿ ಕರ್ನಾಟಕ ರಾಜ್ಯದ ಜನತೆ ತೀರ್ಪು ಕೊಟ್ಟಿರುವವುದು ಸಾಭೀತಾಗಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ನೂತನ ಬಿಜೆಪಿ ಸರ್ಕಾರ ಶೀಘ್ರವೇ ಅಧಿಕಾರಕ್ಕೆ ಬರಲಿದೆ. ನೂತನ ಯಡಿಯೂರಪ್ಪ ಸರ್ಕಾರಕ್ಕೆ ಸ್ವಾಗತ ಎಂದು ಹೇಳಿದರು.
ಕೇಂದ್ರ-ರಾಜ್ಯ ಸರ್ಕಾರದ ಸಹೋಯೋಗದೊಂದಿಗೆ ರಾಜ್ಯದಲ್ಲಿ ಅಭಿವೃದ್ಧಿ:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಜನೆಯಿಂದ ರಾಜ್ಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯಲಾಗುವುದು. ನೀರಾವರಿ, ರಸ್ತೆ ಸಾರಿಗೆ, ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ಸೋಲಾರ್, ಪವನ ಶಕ್ತಿ ಮೂಲಕ ಪರಿಸರಕ್ಕೆ ಹಾನಿಮಾಡದ ರೀತಿಯಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಹಾಗೂ ಶಾಸಕರು ಕೂಡಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಜಿ. ಎಸ್. ಬಸವರಾಜು ತಿಳಿಸಿದರು.