ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಬೇಕಿದ್ದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಐವರು, ಕಾಂಗ್ರೆಸ್‌ನಿಂದ ನಾಲ್ವರು ಹಾಗೂ ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದ್ದು, ಇಂದು ಸಂಜೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಬಿಜೆಪಿಯಿಂದ ಎಸ್. ರುದ್ರೇಗೌಡ, ಕೆ.ಪಿ. ನಂಜುಂಡಿ, ಎನ್. ರವಿಕುಮಾರ, ತೇಜಸ್ವಿನಿ ಗೌಡ ಹಾಗೂ ರಘುನಾಥ್ ಮಲ್ಕಾಪುರೆ, ಕಾಂಗ್ರೆಸ್‌ನಿಂದ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಹರೀಶ್ ಕುಮಾರ್ ಹಾಗೂ ಅರವಿಂದ ಕುಮಾರ್ ಅರಳಿ ಹಾಗೂ ಜೆಡಿಎಸ್‌ನಿಂದ ಬಿ.ಎಂ. ಫರೂಕ್ ಮತ್ತು ಧರ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂರೂ ಪಕ್ಷಗಳು ವಿಧಾನಸಭೆಯಲ್ಲಿ ತಮ್ಮ ಸಂಖ್ಯಾಬಲ ಆಧರಿಸಿ ಅಷ್ಟೇ ಸಂಖ್ಯೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯ ಹಾದಿ ಸುಗಮವಾಯಿತು. ನಾಮಪತ್ರ ವಾಪಾಸ್ ಪಡೆಯಲು ಇಂದು ಕೊನೆಯ ದಿನಾಂಕವಾಗಿದ್ದು, ಯಾರೂ ಹಿಂದೆ ಸರಿಯದಿದ್ದರೆ ಎಲ್ಲಾ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಇಂದು ಸಂಜೆಯೇ ಪ್ರಕಟಿಸುವ ನಿರೀಕ್ಷೆಯಿದೆ.