ಸಿಗದ ಡಿಸಿಎಂ ಪಟ್ಟದ ಬಗ್ಗೆ ಸಚಿವ ಶ್ರೀರಾಮುಲು ಮಾತುಗಳಿವು!

ಸಂಪುಟದಲ್ಲಿ ಯಾರ್ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

Written by - Yashaswini V | Last Updated : Feb 4, 2020, 07:46 AM IST
ಸಿಗದ ಡಿಸಿಎಂ ಪಟ್ಟದ ಬಗ್ಗೆ ಸಚಿವ ಶ್ರೀರಾಮುಲು ಮಾತುಗಳಿವು! title=
File Image

ಮೈಸೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವ ಸರ್ಕಾರದ ಸಚಿವ ಸಂಪುಟದ ವಿಸ್ತರಣೆ(Cabinet Expansion) ಫೆಬ್ರವರಿ 6 ರಂದು ನಡೆಯಲಿದೆ. ಏತನ್ಮಧ್ಯೆ ಈಗಿರುವ ಉಪಮುಖ್ಯಮಂತ್ರಿಗಳನ್ನು ಹೊರತು ಪಡಿಸಿ ಬೇರೆಯವರಿಗೆ ಸದ್ಯಕ್ಕೆ ನೂತನ ಡಿಸಿಎಂ ಸೇರ್ಪಡೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yeddyurappa) ಸ್ಪಷ್ಟಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಿರುವ ಸಚಿವ ಬಿ. ಶ್ರೀರಾಮುಲು(B Sriramulu) ಸ್ವತಃ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಡಿಸಿಎಂ ಸ್ಥಾನ ಕೇಳಿ ಪಕ್ಷಕ್ಕೆ ಹಾಗೂ ಸಿಎಂಗೆ ಮುಜುಗರ ತರೋಲ್ಲ ಎಂಬ ಮಾತುಗಳನ್ನಾಡಿದ್ದಾರೆ.

ಹೌದು, ತಮ್ಮ ಪುತ್ರಿಯ ವಿವಾಹ ಕಾರ್ಯಕ್ರಮಕ್ಕೆ ರಾಜವಂಶಸ್ಥರನ್ನು ಆಹ್ವಾನಿಸಲು ಸೋಮವಾರ ಮೈಸೂರಿಗೆ ಭೇಟಿ ನೀಡಿದ್ದ ಶ್ರೀರಾಮುಲು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಯಾರ್ಯಾರು ಸಚಿವರಾಗುತ್ತಾರೆ ಎಂಬುದು ಈಗಾಗಲೇ ಅವರಿಗೆ ಗೊತ್ತಾಗಿದೆ. ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಾನು ಚರ್ಚಿಸುವುದಿಲ್ಲ. ಡಿಸಿಎಂ ಹುದ್ದೆ ಕೇಳಿ ಪಕ್ಷಕ್ಕೆ ಹಾಗೂ ಮುಖಂಡರಿಗೆ ಮುಜುಗರ ತರುವಂತಹ ಕೆಲಸವನ್ನು ನಾನು ಮಾಡೋದಿಲ್ಲ ಎಂದು ಹೇಳಿದರು.

ನಾನು ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತ ಎಂದ ಶ್ರೀರಾಮುಲು, ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅದಕ್ಕೆ ಬದ್ದನಾಗಿ ನಾನು ಇರಲಿದ್ದೇನೆ ಎಂದವರು ತಿಳಿಸಿದರು.

ವಾಸ್ತವವಾಗಿ 2018ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಕಟ್ಟಲಾಗುತ್ತದೆ ಎಂದು ಬಲವಾಗಿ ನಂಬಲಾಗಿತ್ತು. ಆದಾಗ್ಯೂ, ಎಲ್ಲರ ನಂಬಿಕೆ ಹುಸಿಯಾಗಿ, ರಾಮುಲು ಹೊರತು ಪಡಿಸಿ ಮೂವರಿಗೆ ಡಿಸಿಎಂ ಪಟ್ಟ ಕಟ್ಟಲಾಯಿತು. ಅದರಲ್ಲೂ ಆಶ್ಚರ್ಯಕರ ರೀತಿಯಲ್ಲಿ ಶಾಸಕರೇ ಅಲ್ಲದ ಲಕ್ಷ್ಮಣ್ ಸವದಿ ಅವರಿಗೆ ಮಣೆ ಹಾಕಲಾಯಿತು. ಇಷ್ಟೆಲ್ಲದರ ಹೊರತಾಗಿಯೂ ಸಂಪುಟ ವಿಸ್ತರಣೆ ವೇಳೆ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯಬಹುದೇನೋ ಎಂಬ ನಿರೀಕ್ಷೆಯಿತ್ತು. ಈಗ ಆ ಬಾಗಿಲು ಕೂಡ ಮುಚ್ಚಿದಂತಾಗಿದೆ.

Trending News