ಕಾರ್ಮಿಕರೇ ನಿಜವಾದ ದೇಶ ನಿರ್ಮಾಪಕರೆಂದು ನಿರೂಪಿಸುವ ಹೋರಾಟಕ್ಕೆ MASA ಕರೆ

ಮೂರು ವರ್ಷಗಳ ಕಾಲ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಎಲ್ಲಾ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ವ್ಯವಹಾರಗಳಿಗೆ ವಿನಾಯಿತಿ ನೀಡುವ ಸುಗ್ರೀವಾಜ್ಞೆಯನ್ನು ಉತ್ತರ ಪ್ರದೇಶ ಸರ್ಕಾರ ಅನುಮೋದಿಸಿದೆ.   

Last Updated : May 11, 2020, 02:37 PM IST
ಕಾರ್ಮಿಕರೇ ನಿಜವಾದ ದೇಶ ನಿರ್ಮಾಪಕರೆಂದು ನಿರೂಪಿಸುವ ಹೋರಾಟಕ್ಕೆ MASA ಕರೆ title=

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ನೆಪದಲ್ಲಿ ಕಾರ್ಮಿಕ ವರ್ಗ ತಲೆಮಾರುಗಳಿಂದ ಕಠಿಣ ಹೋರಾಟಗಳಿಂದ ಗಳಿಸಿದ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲು/ಅಮಾನತುಗೊಳಿಸಲು ವಿವಿಧ ರಾಜ್ಯ ಸರ್ಕಾರಗಳು ಹೊರಡಿಸಿದ ಆದೇಶಗಳನ್ನು ಮಜ್ದೂರ ಅಧಿಕಾರ ಸಂಘರ್ಷ ಅಭಿಯಾನ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI), ಕರ್ನಾಟಕ ಶ್ರಾಮಿಕ ಶಕ್ತಿ ಮತ್ತು ಜನಾಧಿಕಾರ ಸಂಘಟನೆ ಕೋಲಾರ ಸಂಘಟನೆಗಳು (MASA) ಖಂಡಿಸಿವೆ.

ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿರುವ ಸಂಘಟನೆಗಳು, ಮೂರು ವರ್ಷಗಳ ಕಾಲ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಎಲ್ಲಾ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ವ್ಯವಹಾರಗಳಿಗೆ ವಿನಾಯಿತಿ ನೀಡುವ ಸುಗ್ರೀವಾಜ್ಞೆಯನ್ನು ಉತ್ತರ ಪ್ರದೇಶ ಸರ್ಕಾರ ಅನುಮೋದಿಸಿದೆ. ಇನ್ನು ಮುಂದೆ ಅನ್ವಯವಾಗದ ಕಾನೂನುಗಳೆಂದರೆ, ಕನಿಷ್ಠ ವೇತನ ಕಾಯ್ದೆ, ಕಾರ್ಮಿಕ ಸಂಘಗಳ ಕಾಯ್ದೆ, ಕೈಗಾರಿಕಾ ವಿವಾದಗಳ ಕಾಯ್ದೆ, ಕಾರ್ಖಾನೆಗಳ ಕಾಯ್ದೆ, ಗುತ್ತಿಗೆ ಕಾರ್ಮಿಕ ಕಾಯ್ದೆ, ಬೋನಸ್ ಪಾವತಿ ಕಾಯ್ದೆ , ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ, ಕಾರ್ಯನಿರತ ಪತ್ರಕರ್ತರ ಕಾಯ್ದೆ, ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳು ಸೇರಿವೆ. ಯುಪಿ ಸರಕಾರದ ಸುಗ್ರೀವಾಜ್ಞೆಯು ಈಗ ಕೇಂದ್ರ ಸರ್ಕಾರದ ಅನುಮೋದನೆಗೆ ಹೊರಟಿದೆ ಎಂದು ಹೇಳಿವೆ.

ಮಧ್ಯಪ್ರದೇಶದ ಬಿಜೆಪಿ ಸರಕಾರವು ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 25 ಹೊರತುಪಡಿಸಿ ಎಲ್ಲಾ ನಿಬಂಧನೆಗಳನ್ನು ಸಡಿಲಿಸಿದೆ. ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗಳವರೆಗೆ ವಿಸ್ತರಿಸಲಾಗಿದೆ.‌ 50 ಕ್ಕಿಂತ ಕಡಿಮೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗಳನ್ನು ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿನ ಅಗತ್ಯ ಪರಿಶೀಲನೆಯಿಂದ ಹೊರಗಿಡಲಾಗಿದೆ, ಕೈಗಾರಿಕೆಗಳಲ್ಲಿ 100ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಕಾರ್ಖಾನೆಗಳಿಗೆ, ಮಧ್ಯಪ್ರದೇಶ ಕೈಗಾರಿಕಾ ಉದ್ಯೋಗ (ಶಾಶ್ವತ ಆದೇಶ) ಕಾಯ್ದೆಯ ನಿಬಂಧನೆಗಳಿಂದ ವಿನಾಯಿತಿ ನೀಡಲಾಗಿದೆ. ಕಾರ್ಮಿಕ ಕಾನೂನುಗಳ ಅಡಿಯಲ್ಲಿ ವಿವಿಧ ರೆಜಿಸ್ಟರ್‌ಗಳ ಬದಲು ಒಂದೇ ರಿಜಿಸ್ಟರ್ ಅನ್ನು ನಿರ್ವಹಿಸಲು ಮತ್ತು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  ಫ್ಯಾಕ್ಟರಿ ಕಾಯಿದೆಯಡಿ, ಕಾರ್ಖಾನೆಗಳಿಗೆ ಮೂರು ತಿಂಗಳ ಅವಧಿಗೆ ನಡೆಸಲಾಗುತ್ತಿದ್ದ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು MASA ಹೇಳಿವೆ.

ಹಾಗೆಯೆ,ಕನಿಷ್ಠ 1,200 ದಿನಗಳವರೆಗೆ ಕಾಖಾ೯ನೆಯೊಂದು  ಕಾರ್ಯನಿರ್ವಹಿಸಿದರೆ ,ಕಾರ್ಮಿಕ ಕಾನೂನುಗಳ ನಿಬಂಧನೆಗಳಿಂದ ವಿನಾಯಿತಿ ನೀಡಲು ಚಿಂತನೆ ನಡೆದಿದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಘೋಷಿಸಿದ್ದಾರೆ. ಮಹಾರಾಷ್ಟ್ರ ಸರಕಾರವು ಕಾರ್ಖಾನೆಗಳ ಕಾಯ್ದೆಯ ಸೆಕ್ಷನ್ 51,52,54,56 ರಿಂದ  ವಿನಾಯಿತಿ ಘೋಷಿಸಿದೆ. ಕೆಲಸದ ಸಮಯವನ್ನು ದಿನಕ್ಕೆ 8ರ ಬದಲು 12 ಗಂಟೆಗಳವರೆಗೆ ವಿಸ್ತರಿಸಲು ಅನುಮತಿ ನೀಡಿದೆ. ಪ್ರತಿಯೊಂದು  ಕೈಗಾರಿಕೆಗಳಲ್ಲಿ ಸ್ಥಿರ ಅವಧಿಯ ಉದ್ಯೋಗವನ್ನು (fixed  term employment )ತರಲು ಮುಂದಾಗಿದೆ. ಕಾರ್ಖಾನೆಗಳ ಕಾಯ್ದೆಯ ಪ್ರಕಾರ  ಕನಿಷ್ಠ ಸಂಖ್ಯೆಯ ಕಾರ್ಮಿಕರ ಹೆಚ್ಚಳವನ್ನು 10 ರಿಂದ 20 ಕ್ಕೆ (ವಿದ್ಯುತ್ ಚಾಲಿತ) ಮತ್ತು 20 ರಿಂದ 40 (ವಿದ್ಯುತ್ ಇಲ್ಲದ) ಕ್ಕೆ ಅಸ್ಸಾಂ ಸರ್ಕಾರ ಅನುಮತಿ ನೀಡಿದೆ.  ಗುತ್ತಿಗೆ ಕಾರ್ಮಿಕ ಕಾಯ್ದೆಯ ಅನುಷ್ಠಾನಕ್ಕಾಗಿ ಇರಬೇಕಾದ ಕನಿಷ್ಠ ಸಂಖ್ಯೆಯ ಕಾರ್ಮಿಕರ ಹೆಚ್ಚಳವನ್ನು 20 ರ ಬದಲು 50 ಕ್ಕೆ ಹೆಚ್ಚಿಸಲು ಮತ್ತು ಶಿಫ್ಟ್ ಸಮಯವನ್ನು 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸಲು  ಅನುಮೋದನೆ ನೀಡಿದೆ ಎಂದು ಹೇಳಿವೆ.

ಇತರ ರಾಜ್ಯಗಳಾದ ರಾಜಸ್ಥಾನ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ಸರಕಾರಗಳೂ, ಕಳೆದ ತಿಂಗಳಿನಿಂದ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದಿವೆ.ಇಲ್ಲಿಯೂ  ಕೆಲಸದ ಸಮಯವನ್ನು ದಿನಕ್ಕೆ 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಈ ಬದಲಾವಣೆಗಳ ಉದ್ದೇಶವು ಸಾಂಕ್ರಾಮಿಕ ರೋಗದ ಇಡೀ ವೆಚ್ಚ ಮತ್ತು ಬಿಕ್ಕಟ್ಟನ್ನು ಕಾರ್ಮಿಕ ವರ್ಗಕ್ಕೆ ವರ್ಗಾಯಿಸುವುದಾಗಿದೆ.ಅತ್ತಬಂಡವಾಳಶಾಹಿಗಳ ಹಿತಾಸಕ್ತಿ ಮತ್ತು ಲಾಭಗಳನ್ನು ಕಾಪಾಡುವುದು, ಇತ್ತ ಕಾರ್ಮಿಕ ವಿರೋಧಿ ಕಾರ್ಮಿಕ ಕಾನೂನುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಕೊರನಾ ಬಿಕ್ಕಟ್ಟನ್ನು ಸಂಪೂರ್ಣವಾಗಿ ದುಬ೯ಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು MASA ತಿಳಿಸಿವೆ.

ಸಂಸತ್ತನ್ನು ಸಂಪೂರ್ಣ ಬೈಪಾಸ್ ಮಾಡಲಾಗಿದೆ. ಇದು ಭಾರಿ ಪ್ರಮಾಣದ ಉದ್ಯೋಗ ನಷ್ಟವನ್ನು ಹೆಚ್ಚಿಸುತ್ತದೆ.ಉದ್ಯೋಗ ಭದ್ರತೆಯನ್ನು ರದ್ದುಗೊಳಿಸುತ್ತದೆ. ಕೈಗಾರಿಕಾ ಸುರಕ್ಷತೆಯನ್ನು ದುರ್ಬಲಗೊಳಿಸುತ್ತದೆ.  ಕೈಗಾರಿಕಾ ಅಪಘಾತಗಳನ್ನು ಮಿತಿಮೀರಿ ಹೆಚ್ಚಿಸುತ್ತದೆ. ಕಾನೂನು ಸುರಕ್ಷತೆ ಮುಂದಿಟ್ಟುಕೊಂಡು ಅತೀ ದೊಡ್ಡ  ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ಹೊರಹಾಕುತ್ತದೆ. ಉತ್ಪಾದನೆಯಲ್ಲಿ ನೂತನ ಜೀತಕಾರ್ಮಿಕರ ಅಭ್ಯಾಸವನ್ನು ಪರಿಣಾಮಕಾರಿಯಾಗಿ ಮರಳಿ ತರುತ್ತದೆ ಎಂದು ಅಭಿಪ್ರಾಯಪಟ್ಟಿವೆ. ಇದರೊಂದಿಗೆ ಕೆಲ ಹಕ್ಕೊತ್ತಾಯಗಳನ್ನು MASA ಮಂಡಿಸಿವೆ.
COVID-19 ಬಿಕ್ಕಟ್ಟಿನ ನೆಪದಲ್ಲಿ ಕಾರ್ಮಿಕ ವಿರೋಧಿ ಕ್ರಮಗಳನ್ನು ಅನುಮತಿಸುವ ವಿವಿಧ ರಾಜ್ಯ ಸರ್ಕಾರಗಳು, ಎಲ್ಲಾ ಸುಗ್ರೀವಾಜ್ಞೆಗಳನ್ನು / ಆದೇಶಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು MASA ಆಗ್ರಹಿಸಿದೆ.

ಬಿಕ್ಕಟ್ಟಿನ ಈ ಘಟ್ಟದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಮುಂದಾಗ ಬೇಕೆಂದು ಒತ್ತಾಯಿಸಿದೆ.

ಸುರಕ್ಷಿತ ಉದ್ಯೋಗಗಳು ಮತ್ತು ಎಲ್ಲರಿಗೂ ಪೂರ್ಣ ವೇತನ, ಸಾರ್ವತ್ರಿಕ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ, ವಲಸೆ ಕಾರ್ಮಿಕರ ಹಕ್ಕುಗಳಿಗಾಗಿ ಪ್ರತ್ಯೇಕ ಶಾಸನ ಮತ್ತು ಅವರು ಉಚಿತವಾಗಿ ಮನೆಗೆ ಹಿಂದಿರುಗುವಂತೆ ಸರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು MASA ಒತ್ತಾಯಿಸಿದೆ.

ಶತಮಾನದ ಸವಾಲನ್ನು ಸ್ವೀಕರಿಸೋಣ. ಕಾರ್ಮಿಕರೇ ನಿಜವಾದ ದೇಶ ನಿರ್ಮಾಪಕರೆಂದು ಮತ್ತೊಮ್ಮೆ ನಿರೂಪಿಸೋಣ. ಕಾರ್ಪೂರೇಟ್ ಕೇಸರಿ ಫ್ಯಾಸಿಸ್ಟ್ ಶಕ್ತಿಗಳನ್ನು ಕಿತ್ತೆಸೆಯುವತನಕ ವಿರಮಿಸದೆ ಹೋರಾಡೋಣ ಎಂದು ಮಜ್ದೂರ ಅಧಿಕಾರ ಸಂಘರ್ಷ ಅಭಿಯಾನ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI), ಕನಾ೯ಟಕ ಶ್ರಾಮಿಕ ಶಕ್ತಿ, ಜನಾಧಿಕಾರ ಸಂಘಟನೆ ಕೋಲಾರ ಕರೆ ನೀಡಿವೆ.
 

Trending News