ಬೆಂಗಳೂರು: ರಾಜ್ಯದಲ್ಲೆಡೆ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆ ಪ್ರಚಾರದ ಆರ್ಭಟ ಜೋರಾಗಿದ್ದು. ಗ್ರಾಮ ಪಂಚಾಯತ್ ಅಭ್ಯರ್ಥಿಗಳೆಲ್ಲರೂ ಸಹಿತ ಈ ಬಾರಿ ತಮ್ಮ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಆ ಮೂಲಕ ಅಭ್ಯರ್ಥಿಗಳು ಮತದಾರರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇದರ ಜೊತೆಗೆ ಈ ಬಾರಿ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಕೂಡ ಅಭ್ಯರ್ಥಿಗಳು ತಮ್ಮ ಗ್ರಾಮಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ತಮ್ಮ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಣಾಳಿಕೆಯ ಮೂಲಕ ಘೋಷಿಸುತ್ತಿದ್ದಾರೆ.ಇದರಲ್ಲಿ ಈಗ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ 10 ಜನ ಸಮಾನ ಮನಸ್ಕರ ತಂಡವು ರೂಪಿಸಿದ 'ನಮ್ಮ ಗ್ರಾಮಕ್ಕೆ ನಮ್ಮ ವಚನ' ಎನ್ನುವ ಪ್ರಣಾಳಿಕೆ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: Gram Panchayat Election: ಮೊದಲ ಹಂತದ ಚುನಾವಣೆಯ ಮತದಾನ ಆರಂಭ
ಇದರಲ್ಲಿ ಪ್ರಮುಖವಾಗಿ ನಿರುದ್ಯೋಗಿ ಯುವಕರಿಗೆ ಕರಕುಶಲ ಕೆಲಸಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡುವುದು, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ತರುವುದು ಮತ್ತು ಅದನ್ನು ರೈತರ ಸಂಬಂಧಿ ಕೆಲಸಗಳಿಗೆ ಬಳಸಿಕೊಳ್ಳುವುದು.ಇ- ಪಂಚಾಯತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿ ಮಾಡುವುದು.ಹಾಗೂ ಸರ್ಕಾರೇತರ ಸಂಸ್ಥೆಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯನ್ನು ಗ್ರಾಮದ ಅಭಿವೃದ್ದಿಗಾಗಿ ಬಳಸಿಕೊಳ್ಳುವುದು, ಯಾವುದೇ ಭ್ರಷ್ಟಾಚಾರವಿಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಇಂತಹ ಇನ್ನು ಅನೇಕ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈಗ ಪ್ರಣಾಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಹಾಲಿ ಗ್ರಾ.ಪಂ ಸದಸ್ಯ ಬಸವರಾಜ ಮಂತೂರ 'ಈ ಹಿಂದಿನಿಂದಲೂ ನಾವು ಇಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಗ್ರಾಮದ ಕುರಿತಾಗಿ ಒಂದು ಸಮಗ್ರ ಅಭಿವೃದ್ದಿ ಕಣ್ಣೋಟ ನೀಡುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ. ಅಷ್ಟೇ ಅಲ್ಲದೆ ನಾವು ಅಧಿಕಾರಕ್ಕೆ ಬಂದಾಗ ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವ ಪ್ರಯತ್ನ ಮಾಡಿದ್ದೇವೆ.ಹಣ, ತೊಳ್ಬಲದ ರಾಜಕೀಯವನ್ನು ನಾವು ಮಾಡುತ್ತಿಲ್ಲ, ಬದಲಾಗಿ ಕಳೆದೆರಡು ದಶಕಗಳಿಂದ ಗ್ರಾಮದಲ್ಲಿ ಜನಪರ ಕಾಳಜಿಯ ಕೆಲಸಗಳನ್ನು ಮಾಡುತ್ತಿದ್ದೇವೆ ಇಂತಹ ಕೆಲಸಗಳಿಂದಲೇ ಜನರು ನಮ್ಮನ್ನು ಮತ್ತೊಮ್ಮೆ ಚುನಾಯಿಸಲಿದ್ದಾರೆ' ಎನ್ನುವ ಭರವಸೆಯನ್ನು ಅವರು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳಿಂದ ಚುನಾವಣೆ ಪ್ರಚಾರಕ್ಕೆ 'ಹೈಟೆಕ್ ಟಚ್'..!
ಇನ್ನೊಂದೆಡೆಗೆ ಗ್ರಾಮ ಪಂಚಾಯತಿಯಲ್ಲಿ ಇಂತಹ ಚುನಾವಣಾ ಪ್ರಣಾಳಿಕೆಗಳು ವಾಸ್ತವದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಲು ಸಾಧ್ಯ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಹಿರೇಮಠ ' ಈ ಹಿಂದೆ ನಮ್ಮಆಡಳಿತದಲ್ಲಿ ಪಂಚಾಯತಿ ವತಿಯಿಂದ 8 ಎಕರೆ ಜಮೀನನ್ನು ಖರೀದಿಸಿ150 ಆಶ್ರಯ ಮನೆಗಳನ್ನು ಹಂಚಿದ್ದು, ನೀರಿನ ಸಂಪಗಳನ್ನು ನಿರ್ಮಾಣ ಮಾಡಿದ್ದು, ಕೃಷಿ ಹೊಂಡಗಳನ್ನು ನಮ್ಮ ಅವಧಿಯಲ್ಲಿ ಹೆಚ್ಚಾಗಿ ಕಟ್ಟಿಸಿದ್ದು. ಅಷ್ಟೇ ಅಲ್ಲದೆ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ನಡೆಸಲು ಪಂಚಾಯತಿಗೆ ನೆರವಾಗಿದ್ದು. ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ಇಡೀ ಗದಗ ಜಿಲ್ಲೆಯಲ್ಲಿಯೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿದ್ದೆಲ್ಲವೂ ನಮ್ಮ ಈ ಹಿಂದಿನ ಪ್ರಣಾಳಿಕೆಯ ಕಾರ್ಯಕ್ರಮಗಳಿಂದಲೇ ಎಂದು ಹೇಳುತ್ತಾರೆ.