ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯು ಅಕ್ಟೋಬರ್ 28 ರಂದು ಜರುಗಲಿದೆ. ಚುನಾವಣೆಗಳಿಗಾಗಿ ಭಾರತ ಚುನಾವಣಾ ಆಯೋಗ ಆದೇಶಿಸಿದಂತೆ ಮತದಾನಕ್ಕಾಗಿ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ (ಎಪಿಕ್) ಹೊಂದಿರುವ ಮತದಾರರು ಮತದಾನದ ಸಮಯದಲ್ಲಿ ಹಾಜರಪಡಿಸಬೇಕಾಗುತ್ತದೆ.
ಮತದಾರ ಭಾವಚಿತ್ರವುಳ್ಳ ಗುರುತಿನ ಚೀಟಿ ಹೊಂದಿರದ ಮತದಾರರು ಈ 9 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಿಮ್ಮಹೆಸರು ಇದೆಯೇ ? ಎಂದು ತಿಳಿದುಕೊಳ್ಳಲು ಹೀಗೆ ಮಾಡಿ..!
9 ದಾಖಲೆಗಳು: ಆಧಾರ ಕಾರ್ಡ, ವಾಹನ ಚಾಲನಾ ಪರವಾನಿಗೆ, ಆದಾಯ ತೆರಿಗೆ ಗುರುತಿನ ಚೀಟಿ, ಭಾರತೀಯ ಪಾಸ್‍ಪೋರ್ಟ, ರಾಜ್ಯ, ಕೇಂದ್ರ ಸರಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಸಂಬಂಧಪಟ್ಟ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರಗಳ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತದಾರರಿಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ನೀಡಲಾದ ಸೇವಾ ಗುರುತಿನ ಚೀಟಿಗಳು, ವಿಶ್ವ ವಿದ್ಯಾಲಯದಿಂದ ನೀಡಲಾದ ಪದವಿ, ಡಿಪ್ಲೋಮೋ ಪ್ರಮಾಣ ಪತ್ರದ ಮೂಲ ಪ್ರತಿ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪ್ರಮಾಣ ಪತ್ರದ ಮೂಲಪ್ರತಿ.
ಈ ಮೇಲಿನ ಯಾವುದಾದರೂ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ. ಮತದಾನವು ಅಕ್ಟೋಬರ್ 28 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ನಡೆಯಲಿದೆ, ಮತಗಟ್ಟೆಗೆ ಬರುವಾಗ ಪ್ರತಿಯೊಬ್ಬರೂ ಮಾಸ್ಕ ಧರಿಸಿ ಬರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.