ಕರ್ನಾಟಕಕ್ಕೆ ಮಿಷನ್ ಸರ್ಕಾರ ಬೇಕೇ, ಕಮಿಷನ್ ಸರ್ಕಾರ ಬೇಕೇ? - ಮೋದಿ ಪ್ರಶ್ನೆ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಬೃಹತ್ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

Last Updated : Feb 19, 2018, 06:00 PM IST
  • ಕೇಂದ್ರ ಸರ್ಕಾರ ಬಡವರ ಉದ್ಧಾರಕ್ಕಾಗಿ ಕೊಡುತ್ತಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಬಳಸುತ್ತಲೇ ಇಲ್ಲ.
  • ಮೈಸೂರಿಗಾಗಿ ನಾಗೇನಹಳ್ಳಿಯಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಸ್ಯಾಟೆಲೈಟ್ ರೈಲ್ವೆ ನಿಲ್ದಾಣ ನಿರ್ಮಾಣ ಯೋಜನೆ.
  • 2027 ಸ್ವಾತಂತ್ರದ 75 ನೇ ವರ್ಷಾಚರಣೆ ಹೊತ್ತಿಗೆ ದೇಶದ ಎಲ್ಲಾ ಕುಟುಂಬಗಳಿಗೂ ಮನೆ ಇರಲೇಬೇಕು ಎಂಬ ಕನಸನ್ನು ಬಿಜೆಪಿ ಕಂಡಿದೆ.
ಕರ್ನಾಟಕಕ್ಕೆ ಮಿಷನ್ ಸರ್ಕಾರ ಬೇಕೇ, ಕಮಿಷನ್ ಸರ್ಕಾರ ಬೇಕೇ? - ಮೋದಿ ಪ್ರಶ್ನೆ  title=

ಮೈಸೂರು : ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ಬೇಕೆ ಅಥವಾ ಮಿಷನ್ (ಯೋಜನೆ) ಇರುವ ಸರ್ಕಾರ ಬೇಕಾ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. 

2 ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಮೋದಿ ಅವರು, ಸೋಮವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ, ಸಿದ್ದರಾಮಯ್ಯ ಸರ್ಕಾರದ ಕಾರ್ಯಗಳನ್ನು ಟೀಕಿಸಿದರು. 

50 ವರ್ಷಗಳಿಗಿಂತಲೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ದೇಶದ ಅಭಿವೃದ್ಧಿ ಮಾಡದೆ, ಕೇವಲ ನಮ್ಮನ್ನು ಟೀಕೆ ಮಾಡುವಲ್ಲಿ ಸಮಯ ವ್ಯರ್ಥ ಮಾಡುತ್ತಾ ರಾಜಕೀಯ ಮಾಡುತ್ತಿದೆ ಎಂದ ಮೋದಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವರೆಗೂ ರಾಜ್ಯ ನಾಶವಾಗುವುದು ಖಂಡಿತ ಎಂದರು. 

10 ಪರ್ಸೆಂಟ್'ಗೂ ಹೆಚ್ಚು ಕಮಿಷನ್ ಪಡೆಯುವ ಸರ್ಕಾರ 
ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಾಗ ಕೆಲವರು ಬೇಸರ ಮಾಡಿಕೊಂಡರು, ನನ್ನ ಬಗ್ಗೆ ಕೋಪಗೊಂಡರು. ಆದರೆ, ಬಹಳಷ್ಟು ಮಂದಿ ಇದು 10 ಪರ್ಸೆಂಟ್ ಕಮಿಷನ್ ಸರ್ಕಾರವಲ್ಲ, ಇದು ಇನ್ನೂ ಹೆಚ್ಚು ಕಮಿಷನ್ ಪಡೆಯುವ ಸರ್ಕಾರ ಎಂದು ಪ್ರತಿಕ್ರಿಯಿಸಿದರು ಎನ್ನುತ್ತಾ ವ್ಯಂಗ್ಯವಾಡಿದ ಮೋದಿ, ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ಬೇಕೆ ಅಥವಾ ಮಿಷನ್ (ಯೋಜನೆ) ಇರುವ ಸರ್ಕಾರ ಬೇಕೆ ಎಂದು ಜನತೆಯನ್ನು ಪ್ರಶ್ನಿಸಿದರು. 

ಕೇಂದ್ರದ ಅನುದಾನ ಬಳಸದ ರಾಜ್ಯ ಸರ್ಕಾರ 
ಕೇಂದ್ರ ಸರ್ಕಾರ ಬಡವರ ಉದ್ಧಾರಕ್ಕಾಗಿ ಕೊಡುತ್ತಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಬಳಸುತ್ತಲೇ ಇಲ್ಲ, ಅವರು ತಮ್ಮ ಹೈಕಮಾಂಡ್‌ ಅನ್ನು ಕ್ಷೇಮವಾಗಿ ಇಡಲು ಅದನ್ನು ಬಳಸುತ್ತಿದೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಇಲ್ಲಿನ ಜನರ ಜೀವನದ, ಜನರ ಭಾವನೆಗಳ ಮೇಲೆ ಗೌರವೇ ಇಲ್ಲ. ಹೀಗಿರುವಾಗ ಒಂದು ರಾಜ್ಯ ಹೀಗೆ ನಡೆಯಲು ಸಾಧ್ಯವಿಲ್ಲ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ : ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ : ಪ್ರಧಾನಿ ಮೋದಿ

ದೇಶದಲ್ಲಿ ಉದ್ಯೋಗಸೃಷ್ಟಿಯಾಗಿದೆ
ಕೇಂದ್ರ ಸರ್ಕಾರ ಉದ್ಯೋಗಸೃಷ್ಟಿಯಲ್ಲಿ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಮೋದಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ಯುವಕರಿಗೆ ಸಹಾಯ ಮಾಡಿದ್ದು, 10 ಕೋಟಿ ಯುವಜನತೆ ಈ ಯೋಜನೆಯ ಲಾಭ ಪಡೆದಿದ್ದಾರೆ. 3 ಕೋಟಿಗೂ ಹೆಚ್ಚು ನವೋದ್ಯಮಿಗಳು ದೇಶದಲ್ಲಿದ್ದು, ಯುವಜನತೆಗೆ ಉದ್ಯೋಗ ದೊರಕಿಸಲಾಗಿದೆ ಎಂದು ಹೇಳಿದರು. 

ಮೈಸೂರಿನಲ್ಲಿ ವಿಶ್ವದರ್ಜೆಯ ಸ್ಯಾಟೆಲೈಟ್ ರೈಲ್ವೆ ನಿಲ್ದಾಣ
ರೈಲ್ವೆ ಆಧುನೀಕರಣ, ತಂತ್ರಜ್ಞಾನ ಉನ್ನತೀಕರಣ, ರೈಲ್ವೆಗೆ ಹೆಚ್ಚು ವೇಗ, ರೈಲ್ವೆ ಹಳಿಗಳ ಹೆಚ್ಚಳ ಸೇರಿದಂತೆ ಹಲವಾರು ಕಾರ್ಯಗಳನ್ನು ಕೇಂದ್ರ ಸರ್ಕಾರ ಕೈಗೆತ್ತುಕೊಂಡಿದ್ದು, ಕರ್ನಾಟಕದಲ್ಲಿ ಮೊದಲಿಗಿಂತಲೂ ರೈಲ್ವೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಆಗಿದೆ ಎಂದು ಅಭಿಪ್ರಾಯಪಟ್ಟ ಮೋದಿ,
ಮೈಸೂರಿಗಾಗಿ ನಾಗೇನಹಳ್ಳಿಯಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಸ್ಯಾಟೆಲೈಟ್ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. 

ಇದನ್ನೂ ಓದಿ : ಮೈಸೂರು-ಬೆಂಗಳೂರು ದ್ವಿಮುಖ ವಿದ್ಯುತ್ ರೈಲು ಮಾರ್ಗಕ್ಕೆ ಮೋದಿ ಚಾಲನೆ

ಬಿಜೆಪಿಗೆ ದೇಶದವನ್ನು ಹೊರತುಪಡಿಸಿ ಮತ್ಯಾವುದರ ಮೇಲೂ ವ್ಯಾಮೋಹ ಇಲ್ಲ
ಈ ಹಿಂದಿನ ಸರ್ಕಾರಗಳಿಂದ ಸಂಸತ್ತಿನಲ್ಲಿ ಕೇವಲ ಘೋಷಣೆಗಳಾಗಿಯೇ ಉಳಿದಿದ್ದ 1500 ಕ್ಕೂ ಹೆಚ್ಚು ಘೋಷಣೆಗಳನ್ನು ಬಿಜೆಪಿ ಕಾರ್ಯಗತಗೊಳಿಸಿದೆ ಎಂದು ಹೇಳಿದ ಮೋದಿ 'ಪ್ರತಿ ಬಾರಿ ಸುಳ್ಳು ಹೇಳೋಣ, ಪ್ರತಿ ಬಾರಿ ಸುಳ್ಳು ಹೇಳೋಣ ಎಂದು ಕೆಲವರು ಅಂದುಕೊಂಡಿದ್ದಾರೆ' ಆದರೆ ಅವರನ್ನು ದೇಶ ನಂಬುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

2027 ಸ್ವಾತಂತ್ರದ 75 ನೇ ವರ್ಷಾಚರಣೆ ಹೊತ್ತಿಗೆ ದೇಶದ ಎಲ್ಲಾ ಕುಟುಂಬಗಳಿಗೂ ಮನೆ ಇರಲೇಬೇಕು ಎಂಬ ಕನಸನ್ನು ಬಿಜೆಪಿ ಕಂಡಿದೆ. ಬಿಜೆಪಿಗೆ ದೇಶವನ್ನು ಹೊರತುಪಡಿಸಿ ಎನ್ನಾವುದರ ಮೇಲೂ ವ್ಯಾಮೋಹ ಇಲ್ಲ ಎಂದ ಮೋದಿ, ದೇಶದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತ್ ಕುಮಾರ್ ಸೇರಿದಂತೆ ಇತರ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Trending News