ಬೆಂಗಳೂರು: ಕಾರ್ಮಿಕರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳ ಲಾಬಿ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಕೆಲವೇ ಕೆಲವು ದಕ್ಷ ಐಎಎಸ್ ಅಧಿಕಾರಿಗಳ ಪೈಕಿ ಮಣಿವಣನ್ ಹೆಸರು ಮುಂಚೂಣಿಯಲ್ಲಿತ್ತು. ಅದರಲ್ಲೂ ಕೊರೊನಾ ಮತ್ತು ಲಾಕ್ಡೌನ್ ನಂತಹ ಕಡುಕಷ್ಟದ ಸಂದರ್ಭದಲ್ಲಿ ಮಣಿವಣ್ಣನ್ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು. ಆದರೆ ರಾಜ್ಯ ಸರ್ಕಾರ ಏಕಾಏಕಿ ಮಣಿವಣ್ಣನ್ ಅವರನ್ನು ಕಾರ್ಮಿಕರ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿದೆ. ಇದರ ಹಿಂದೆ ಕೈಗಾರಿಕೋದ್ಯಮಿಗಳ ದೊಡ್ಡ ಲಾಬಿ ನಡೆದಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಕುಟುಂಬ ನಿರ್ವಹಣೆ ತೊಂದರೆ ಆಗಿದೆ ಎಂದು 732 ಕಾರ್ಮಿಕರು ಮಣಿವಣ್ಣನ್ ಅವರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಲು ಅಗತ್ಯ ಮಾಹಿತಿ ಸಂಗ್ರಹಿಸಿ, ನೊಟೀಸ್ ಸಿದ್ದಪಡಿಸಿ ಎಂದು ಮಣಿವಣ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಮಾಹಿತಿ ಕೈಗಾರಿಕೋದ್ಯಮಿಗಳಿಗೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸೂಪರ್ ಸಿಎಂ ಎಂದೇ ಹೇಳಲಾಗುತ್ತಿರುವ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಮೂಲಕ ಮಣಿವಣ್ಣನ್ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕೊರೋನಾ ಸಂದರ್ಭದಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ಕೊಡಲೇಬೇಕೆಂದು ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ನಿಗದಿತ ಸಂಬಳ ನೀಡಲೇಬೇಕೆಂದು ನೋಟೀಸ್ ನೀಡುವಂತೆ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ರೀತಿ ನೋಟಿಸ್ ನೀಡಲು ಮುಂದಾಗಿದ್ದ ಮಾಹಿತಿ ಪಡೆದ ಕೈಗಾರಿಕೋದ್ಯಮಿಗಳ ಸಂಘಟನೆಗಳು, ಈಗಾಗಲೇ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ನಾವು ಕೋಟ್ಯಾಂತರ ರೂಪಾಯಿ ನಷ್ಟ ಅನುಭಿಸುತ್ತಿದ್ದೇವೆ. ಈಗ ನೌಕರರನ್ನು ಕಡಿತ ಮಾಡದಿದ್ದರೆ ಮತ್ತು ಸಂಬಳ ಕಡಿತ ಮಾಡದಿದ್ದರೆ ಉಳಿಗಾಲವಿಲ್ಲ. ಮಣಿವಣ್ಣನ್ ಕಾರ್ಮಿಕ ಪರ ನಿಲ್ಲುವ ವ್ಯಕ್ತಿತ್ವದವರಾಗಿದ್ದಾರೆ. ಆದುದರಿಂದ ಅವರನ್ನು ವರ್ಗಾಯಿಸುವಂತೆ ಲಾಬಿ ಮಾಡಿದ್ದಾರೆ ಎನ್ನಲಾಗಿದೆ.
ನಾವೇ ನೇರವಾಗಿ ಕಾರ್ಮಿಕರ ಜೊತೆ ಮಾತುಕತೆ
ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೆ ಮಣಿವಣ್ಣನ್ ಆಸ್ಪದ ಕೊಡುತ್ತಿಲ್ಲ. ಇದೇ ಪರಿಸ್ಥಿತಿ ಎದುರಾದರೆ ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಕೈಗಾರಿಕೋದ್ಯಮಿಗಳ ಸಂಘಟನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಡ ತಂದಿದೆ. ಅವರ ಒತ್ತಡಕ್ಕೆ ಮಣಿದಿರುವ ಯಡಿಯೂರಪ್ಪ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಗೊಳಿಸಿ ಅವರ ಜಾಗಕ್ಕೆ ಮಹೇಶ್ವರ ರಾವ್ ಅವರನ್ನು ನೇಮಕ ಮಾಡಿದೆ.
ವಿಶೇಷ ಎಂದರೆ ಕೈಗಾರಿಕೆಗಳ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಹೇಶ್ವರ ರಾವ್ ಅವರಿಗೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಮಣಿವಣ್ಣನ್ ಅವರಿಗೆ ಎಲ್ಲಿಗೆ ವರ್ಗಾ ಮಾಡಲಾಗಿದೆ ಎಂಬುದನ್ನು ಕೂಡ ತಿಳಿಸಿಲ್ಲ. ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆ ಮಹೇಶ್ವರ್ ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಿರುವ ಮಣಿವಣ್ಣನ್, ಮುಂದಿನ ಆದೇಶಕ್ಕಾಗಿ ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
Yesterday at 9 PM, I have handed over charge of both depts (Labour & DIPR). Thank YOU for the guidance and support! Please extend the same to my successor.
I look forward to new challenges. I can be contacted thru the Telegram messenger https://t.co/oLbpn3Q6jb
🙏🏻
— Captain Manivannan (@mani1972ias) May 12, 2020