ಕಾಲಭೈರವೇಶ್ವರ ದೇವಾಲಯ ಬಾಲಗಂಗಾಧರನಾಥ ಸ್ವಾಮೀಜಿಯವರ ಕನಸಾಗಿತ್ತು: ಸಿಎಂ ಹೆಚ್​ಡಿಕೆ

125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ಧರ್ಮ ಜಾಗೃತಿ ಮೂಡಿಸಿದ್ದರು. ಧರ್ಮ ಜೀವನ ಪಥ. ಜಾತಿ-ಪಂಥದ ಎಲ್ಲೆ ಮೀರಿದ್ದು ಎಂಬ ವಿಶಾಲ ತತ್ವವನ್ನು ಸಾರಿದರು. ಈಗ ಇಲ್ಲಿ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇವಾಲಯವೂ ಸಹ ಕನ್ನಡಿಗರಿಗೆ ಒಂದು ಶ್ರದ್ಧಾ ಕೇಂದ್ರವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

Last Updated : Jul 1, 2019, 10:18 AM IST
ಕಾಲಭೈರವೇಶ್ವರ ದೇವಾಲಯ ಬಾಲಗಂಗಾಧರನಾಥ ಸ್ವಾಮೀಜಿಯವರ ಕನಸಾಗಿತ್ತು: ಸಿಎಂ ಹೆಚ್​ಡಿಕೆ title=

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೂನ್ 30 ರಂದು ಬೆಳಿಗ್ಗೆ ಅಮೆರಿಕಾದ ನ್ಯೂಜೆಸಿಯ ಸೋಮರ್ಸೆಟ್ ಎಂಬಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಕಾಲಭೈರವೇಶ್ವರ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ಧರ್ಮ ಜಾಗೃತಿ ಮೂಡಿಸಿದ್ದರು. ಧರ್ಮ ಜೀವನ ಪಥ. ಜಾತಿ-ಪಂಥದ ಎಲ್ಲೆ ಮೀರಿದ್ದು ಎಂಬ ವಿಶಾಲ ತತ್ವವನ್ನು ಸಾರಿದರು. ಈಗ ಇಲ್ಲಿ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇವಾಲಯವೂ ಸಹ ಕನ್ನಡಿಗರಿಗೆ ಒಂದು ಶ್ರದ್ಧಾ ಕೇಂದ್ರವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದರು.

ಹಿಂದಿನ ಪೀಠಾಧ್ಯಕ್ಷರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ವಿಶ್ವಮಾನ್ಯತೆ ದೊರಕಿಸಲು 50 ವರ್ಷಗಳ ಕಾಲ ಶ್ರಮಿಸಿದ್ದರು. ಈ ದೇವಾಲಯ ನಿರ್ಮಾಣ ಅವರ ಕನಸಾಗಿತ್ತು. ಅದು ಇಂದು ನನಸಾಗುತ್ತಿರುವುದು ಸಂತೋಷದ ಸಂಗತಿ ಎಂದು ಮುಖ್ಯಮಂತ್ರಿಗಳು ನುಡಿದರು.

ಆದಿಚುಂಚನಗಿರಿಯಲ್ಲಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ನನ್ನ ಕೈಯಿಂದ ಚಾಲನೆ ನೀಡಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು. ಈಗ ಈ ದೇವಾಲಯದ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ದೊರೆತಿರುವುದು ಗೌರವದ ವಿಷಯ ಎಂದು ಅವರು ತಿಳಿಸಿದರು.

ಈ ದೇವಾಲಯವು ಕನ್ನಡಿಗರು ಒಂದಾಗಲು, ತಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು, ಆಚರಿಸಲು ಒಂದು ವೇದಿಕೆಯನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು, ಮುಖ್ಯಮಂತ್ರಿಯವರು ತಮ್ಮ ಎಲ್ಲ ಕೆಲಸದ ಒತ್ತಡದ ನಡುವೆಯೂ ಒಂದು ಒಳ್ಳೆಯ ಕಾರ್ಯಕ್ಕಾಗಿ ಅಮೆರಿಕಾಕ್ಕೆ ಆಗಮಿಸಿದ್ದಾರೆ. ಯಾರೇ ಕುಹಕವಾಡಿದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ, ಮೈಸೂರಿನ ಸಚ್ಚಿದಾನಂದ ಗಣಪತಿ ಸ್ವಾಮೀಜಿಯವರು ಮುಖ್ಯಮಂತ್ರಿಯವರ ಸರಳತೆ, ಅಂತಃಕರಣವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮತ್ತು ಅಮೆರಿಕಾದ ಕನ್ನಡಿಗರು ಭಾಗವಹಿಸಿದ್ದರು.

Trending News