ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವವರು ಒಂದು ಕಡೆಯಾದರೆ ಪಟಾಕಿ ಹೊಗೆಯಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಹಲವಾರು ರೀತಿಯ ತೊಂದರೆ ಎದುರಿಸುವವರು ಇನ್ನೊಂದೆಡೆ. ಹಾಗಾಗಿಯೇ COVID-19ನಂಥ ಕಡುಕಷ್ಟದ ಸಂದರ್ಭದಲ್ಲಾದರೂ ಪಟಾಕಿ ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಜೊತೆಗೆ ರಾಜ್ಯ ಸರ್ಕಾರವೂ ಪಟಾಕಿ ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆದರೆ ಅಷ್ಟು ಸುಲಭದಲ್ಲಿ ಪಟಾಕಿ ನಿಷೇಧ (Firecrackers Ban) ಸಾಧ್ಯವೇ ಎಂಬ ಪ್ರಶ್ನೆ ಇದ್ದೇ ಇದೆ.
ಸಾರ್ವಜನಿಕರಲ್ಲಿ ಪಟಾಕಿ (Firecrackers) ಯನ್ನು ನಿಷೇಧಿಸಬೇಕೆಂಬ ಒತ್ತಡ ಮೊದಲಿನಿಂದಲೂ ಇದೆ. ಆದರೆ ಈ ಬಾರಿ COVID-19 ಕಾರಣಕ್ಕೆ ಆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚು ಹೊಗೆ ಸೂಸುವ, ಮಾಲಿನ್ಯ ಹೆಚ್ಚಾಗುವ ಪಟಾಕಿಗಳನ್ನು ನಿರ್ಬಂಧ ಹೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಹರಿಯಾಣದಲ್ಲಿ ಆಮದು ಮಾಡಿದ ಪಟಾಕಿ ಸಂಗ್ರಹ, ಮಾರಾಟ ಕಾನೂನುಬಾಹಿರ
ಹೆಚ್ಚು ಹೊಗೆ ಸೂಸುವ ಪಟಾಕಿಗಳನ್ನು ನಿರ್ಬಂಧಿಸುವ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿಯಿಂದ ಪರಿಸರ ಮಾಲಿನ್ಯ ನಿಯಂತ್ರಣ ವರದಿ ಕೇಳಿದ್ದು, ವರದಿ ಈಗ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿ ನೀಡಿರುವ ಪರಿಸರ ಮಾಲಿನ್ಯ ನಿಯಂತ್ರಣ ವರದಿಯು COVID-19 ಇನ್ನೂ ಕೂಡ ನಿಯಂತ್ರಣಕ್ಕೆ ಬಂದಿಲ್ಲದಿರುವುದರಿಂದ ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿದರೆ ಹೆಚ್ಚಿನ ಪ್ರಮಾಣದ ದುಷ್ಪರಿಣಾಮಗಳನ್ನು ಆಹ್ವಾನಿಸಿದಂತಾಗುತ್ತದೆ. ಪಟಾಕಿ ಸೂಸುವ ಹೊಗೆಯಿಂದ ಆರೋಗ್ಯದ ಮೇಲೆ ತೀವ್ರ ರೀತಿಯ ದುಷ್ಪರಿಣಾಮ ಆಗಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹೊಗೆ ಸೂಸುವ, ಹೆಚ್ಚು ಮಾಲಿನ್ಯ ಸೃಷ್ಟಿಸುವ ಪಟಾಕಿಗಳನ್ನು ನಿರ್ಬಂಧಿಸುವುದೇ ಸೂಕ್ತ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ಮಹಾಮಾರಿ ಕರೋನಾಗೆ ಆಯುರ್ವೇದ ಮದ್ದು
ಪಟಾಕಿ ಹಚ್ಚಿದರೆ ಅದರ ಧೂಳು ಮತ್ತು ಹೊಗೆಯಿಂದ COVID-19 ರೋಗಿಗಳ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ. ಇದು ಕೊರೋನಾ ವೈರಸ್ ಇನ್ನಷ್ಟು ತೀವ್ರವಾಗಿ ಹರಡಲು ಕಾರಣವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಪ್ರತಿದಿನವೂ ಕೊರೋನಾಕ್ಕೆ ತುತ್ತಾಗುತ್ತಿರುವವರ, ಅದರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈಗ ಪಟಾಕಿ ಸಿಡಿಸಲು ಅವಕಾಶ ನೀಡಿದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಟಾಕಿ ಖರೀದಿಸಲು ಜನ ಒಂದೆಡೆ ಸೇರುತ್ತಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ. ಇದರಿಂದಲೂ ಸಮಸ್ಯೆ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ವರದಿ ಸರ್ಕಾರದ ಕೈ ಸೇರಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ. COVID-19 ಕಾರಣಕ್ಕೆ ಈಗಾಗಲೇ ರಾಜಸ್ಥಾನ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಪಟಾಕಿ ನಿರ್ಬಂಧಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪಟಾಕಿ ನಿರ್ಬಂಧಿಸುಬ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.