ವೈದ್ಯರ ಸಲಹಾ ಚೀಟಿ ಇದ್ದಲ್ಲಿ ಮಾತ್ರ ಔಷಧಿ ವಿತರಣೆಗೆ ಆದೇಶ

ವೈದ್ಯರ ಸಲಹೆ ಇಲ್ಲದೆ ಸ್ವಯಂ ಔಷಧಿ ತೆಗೆದುಕೊಳ್ಳುವುದರಿಂದ ಯಾವುದೇ ಸೋಂಕು ಇದ್ದರೂ ಸಹ ತಿಳಿಯುವುದಿಲ್ಲ.

Last Updated : Apr 18, 2020, 07:25 AM IST
ವೈದ್ಯರ ಸಲಹಾ ಚೀಟಿ ಇದ್ದಲ್ಲಿ ಮಾತ್ರ ಔಷಧಿ ವಿತರಣೆಗೆ ಆದೇಶ title=

ಮಡಿಕೇರಿ : ಕೊರೋನಾವೈರಸ್ ಕೋವಿಡ್-19 (Covid-19) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಗ್ರಾಹಕರು  ಜ್ವರ, ಶೀತ/ ನೆಗಡಿ, ಕಫ, ಗಂಟಲು ನೋವು, ಶೀತ ಜ್ವರ, ಮೈ ಕೈ ನೋವು ಇಂತಹ ಲಕ್ಷಣಗಳುಳ್ಳ ಕಾರಣದ ನಿಮಿತ್ತ ಔಷಧಿಗಳನ್ನು ಖರೀದಿಸಲು ಆಗಮಿಸಿದಲ್ಲಿ ಎಲ್ಲಾ ಔಷಧ ಮಾರಾಟಗಾರರು ಕಡ್ಡಾಯವಾಗಿ ಈ ಔಷಧಗಳನ್ನು ಸೇವಿಸಲು ವೈದ್ಯರು ಕಳೆದ ಒಂದು ವಾರದ ಅವಧಿಯೊಳಗೆ ನೀಡಿರುವ ಔಷಧ ಸಲಹಾ ಚೀಟಿ ಇದ್ದಲ್ಲಿ ಮಾತ್ರ ವಿತರಿಸಲು ಆದೇಶಿಸಲಾಗಿದೆ. 

ಹಲವು ಮಂದಿ ಸಾಮಾನ್ಯ ಅನಾರೋಗ್ಯದ ಕಾರಣಗಳಿಗಾಗಿ ಅಂದರೆ ಜ್ವರ, ಶೀತ/ ನೆಗಡಿ, ಕಫ, ಗಂಟಲು ನೋವು, ಶೀತ ಜ್ವರದೊಂದಿಗೆ ಮೈ ಕೈ ನೋವು ಮುಂತಾದ ಕಾರಣಗಳಿಗಾಗಿ ಸ್ವ ಅರಿವಿನ ಮೇರೆಗೆ ಸ್ಥಳೀಯ ಔಷಧಾಲಯಗಳಿಂದ ಔಷಧಿಗಳನ್ನು ಖರೀದಿಸಿ ಸೇವಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತವಾಗಿರುವುದಿಲ್ಲ ಹಾಗೂ ಕೊರೊನಾ ಸೋಂಕು ಹರಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಸ್ವಯಂ ಆಗಿ ಔಷಧಿ ಖರೀದಿಸಿ ಸೇವಿಸುವುದು ತೀರಾ ಆತಂಕಕಾರಿಯಾದ ವಿಚಾರವಾಗಿದೆ. 

ಅಲ್ಲದೆ ವೈದ್ಯರ ಸಲಹೆ ಇಲ್ಲದೆ ಸ್ವಯಂ ಔಷಧಿ ತೆಗೆದುಕೊಳ್ಳುವುದರಿಂದ ಯಾವುದೇ ಸೋಂಕು ಇದ್ದರೂ ಸಹ ತಿಳಿಯುವುದಿಲ್ಲ. ಕೊಡಗು ಜಿಲ್ಲೆಯಲ್ಲಿ ಕೊರೋನಾವೈರಸ್ (Coronavirus) ಕೋವಿಡ್-19 ನಿಗ್ರಹ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಹಲವು ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದ್ದು, ಇದರ ಒಂದು ಭಾಗವಾಗಿ ಸಾರ್ವಜನಿಕರು ತಮ್ಮ ಅನಾರೋಗ್ಯದ ವಿಚಾರವಾಗಿ ವೈದ್ಯರ ಸಲಹೆ ಮತ್ತು ಶಿಫಾರಸ್ಸು ಇಲ್ಲದೆ ಸ್ವಯಂ ಔಷಧಿ ತೆಗೆದುಕೊಳ್ಳುವುದನ್ನು ತಡೆಯುವುದು ಅಗತ್ಯವಾಗಿದೆ.

ಹೀಗಾಗಿ ವೈದ್ಯರ ಸಲಹಾ ಚೀಟಿ ಇದ್ದಲ್ಲಿ ಮಾತ್ರ ಔಷಧಿ ವಿತರಣೆ ಮಾಡುವಂತೆ ಆದೇಶ ಹೊರಡಿಸಲಾಗಿದ್ದು ಈ ಆದೇಶವನ್ನು ಕಡ್ಡಾಯವಾಗಿ ಎಲ್ಲಾ ಔಷಧ ಮಾರಾಟಗಾರರು ಹಾಗೂ ವಿತರಕರು ಪಾಲಿಸಲು ಹಾಗೂ ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರು ಇದನ್ನು ಮೇಲುಸ್ತುವಾರಿ ನಡೆಸಿ ಖಾತ್ರಿಪಡಿಸಿಕೊಳ್ಳಲು ಸಹ ಸೂಚಿಸಲಾಗಿದೆ. ಅಲ್ಲದೆ ಸಾರ್ವಜನಿಕರು ಟೆಲಿ ಮೆಡಿಷನ್ ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ಈ ಸೇವೆಯ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಡಳಿತ ಕೋರಲಾಗಿದೆ.

Trending News