ರಾಜ್ಯದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಜಿಲ್ಲೆ ಜಿಲ್ಲೆಗಳಲ್ಲಿ ಹಾರಾಡಿತು ತ್ರಿವರ್ಣ ಧ್ವಜ

ಇನ್ನು ಚಿಕ್ಕಬಳ್ಳಾಪುರ ನಗರದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಜಿಲ್ಲಾ ಪೊಲೀಸರಿಂದ ದ್ವಜವಂದನೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್. ಎಂ.ನಾಗರಾಜ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Written by - Bhavishya Shetty | Last Updated : Aug 15, 2022, 10:27 AM IST
    • ದೇಶದೆಲ್ಲೆಡೆ ಇಂದು ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ
    • ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋಹಣ ಮಾಡಿದರು
    • ತುಮಕೂರಿನಲ್ಲಿಯೂ ಗೃಹ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದ್ದಾರೆ
ರಾಜ್ಯದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಜಿಲ್ಲೆ ಜಿಲ್ಲೆಗಳಲ್ಲಿ ಹಾರಾಡಿತು ತ್ರಿವರ್ಣ ಧ್ವಜ title=
Karnataka Latest News

ದೇಶದೆಲ್ಲೆಡೆ ಇಂದು ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 75 ವರ್ಷ ಪೂರ್ಣಗೊಂಡಿದೆ. ಈ ಸಂಭ್ರಮವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಮುಂಜಾನೆಯೇ ಧ್ವಜಾರೋಹಣವನ್ನು ಮಾಡಲಾಗಿದ್ದು, ಸಿಹಿ ಹಂಚಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ. ಇನ್ನು ಜಿಲ್ಲೆಗಳಲ್ಲಿ ಯಾವ ರೀತಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು ಎಂಬುದನ್ನು ನೋಡೋಣ.

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋಹಣ ಮಾಡಿದರು. ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಗಿದೆ. ಧ್ವಜಾರೋಹಣ ನೆರೆವೆರಿಸಿದ ಬಳಿಕ  ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಪಥ ಸಂಚಲನದ ಮೂಲಕ ತುಕಡಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಂಸದೆ ಸುಮಲತಾ ಅಂಬರೀಶ್, ಎಂ.ಶ್ರೀನಿವಾಸ್, ಡಿಸಿ ಅಶ್ವಥಿ, ಎಸ್ಪಿ ಎನ್.ಯತೀಶ್, ನಗರಸಭೆ ಅಧ್ಯಕ್ಷ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: Breaking News: ಸ್ವಾತಂತ್ರ್ಯ ದಿನಾಚರಣೆಯಂದೇ ಬಿಜೆಪಿಯ 2 ಗುಂಪಿನ ಕಾರ್ಯಕರ್ತರ ನಡುವೆ ಮಾರಾಮಾರಿ?!

ಇನ್ನು ಚಿಕ್ಕಬಳ್ಳಾಪುರ ನಗರದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಜಿಲ್ಲಾ ಪೊಲೀಸರಿಂದ ದ್ವಜವಂದನೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್. ಎಂ.ನಾಗರಾಜ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ತುಮಕೂರಿನಲ್ಲಿಯೂ ಗೃಹ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮೇಯರ್ ಕೃಷ್ಣಪ್ಪ, ಡಿಸಿ ವೈ.ಎಸ್.ಪಾಟೀಲ್‌, ಎಸ್ಪಿ ರಾಹುಲ್ ಕುಮಾರ್ ಶಹಪೂರ್‌ ವಾಡ್ , ಸಿಇಓ ವಿದ್ಯಾಕುಮಾರಿ‌ ಭಾಗಿಯಾಗಿದ್ದರು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ.

ಧಾರವಾಡದಲ್ಲಿಯೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಉಸ್ತುವಾರಿ ಹಾಲಪ್ಪ ಆಚಾರ್ ಧ್ವಜಾರೋಹಣ ನೆರವೇರಿಸಿದ್ದಾರೆ. ಧಾರವಾಡದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಧ್ವಜಾರೋಹಣ ಸಮಾರಂಭ ನೆರವೇರಿದ್ದು, ಶಾಸಕ ಅರವಿಂದ್ ಬೆಲ್ಲದ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಹು-ಧಾ ನಗರ ಪೊಲೀಸ್ ಕಮಿಷನರ್ ಲಾಬೂರಾಮ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇನ್ನೊಂದೆಡೆ ಬೆಳಗಾವಿ, ಡಿಸಿ ಕಚೇರಿ, ಐಜಿಪಿ ಹಾಗೂ ಎಸ್ಪಿ ಕಚೇರಿಯಲ್ಲಿಯೂ ಧ್ವಜಾರೋಹಣ ಸಂಭ್ರಮ ಮನೆ ಮಾಡಿತ್ತು. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಐಜಿಪಿ ಕಚೇರಿ ಮುಂಭಾಗದಲ್ಲಿ ಐಜಿಪಿ ಸತೀಶ್ ಕುಮಾರ್ ಮತ್ತು ಎಸ್‍ಪಿ ಕಚೇರಿ ಆವರಣದಲ್ಲಿ ಡಾ.ಸಂಜೀವ ಪಾಟೀಲ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಇನ್ನು ಇದೇ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಆ ಬಳಿಕ ಮಕ್ಕಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಹಿ ವಿತರಣೆ ಮಾಡಿದರು.

ದೇಶಾದ್ಯಂತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸರಿಂದ ವಿನೂನತವಾಗಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಯಿತು. ರಾಷ್ಟ್ರ ಧ್ವಜ ಹಿಡಿದು ಪೊಲೀಸ್ ಸಿಬ್ಬಂದಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ. ಇನ್ನು ಈ ಎಲ್ಲಾ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಾಯಚೂರು ಎಸ್ ಪಿ ನಿಖಿಲ್.ಬಿ ನೇತೃತ್ವದಲ್ಲಿ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಮಾಡಲಾಯಿತು.

75ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನಡೆಸಲಾಯಿತು. ಚೆನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣರವರು ಧ್ವಜಾರೋಹಣ ನೆರವೇರಿಸಿದರು. ಇನ್ನು ಈ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು.

ದಾವಣಗೆರೆಯಲ್ಲಿ ಮಧ್ಯರಾತ್ರಿಯಲ್ಲಿಯೇ ಗ್ರಾಮಸ್ಥರಿಂದ 75ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗಿದೆ. 75 ಕೆಜಿಯ ಬೃಹತ್ ಕೇಕ್ ಕತ್ತರಿಸಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಆಚರಿಸಲಾದ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ರೇಣುಕಾಚಾರ್ಯ ಭಾಗಿಯಾಗಿದ್ದರು. ಇನ್ನು ಇದೇ ಸಂದರ್ಭದಲ್ಲಿ ತ್ರಿವರ್ಣ ಧ್ವಜದ ಹಾರ ಹಾಕಿ ಶಾಸಕ ರೇಣುಕಾಚಾರ್ಯಗೆ ಗ್ರಾಮಸ್ಥರು ಸನ್ಮಾನ ಮಾಡಿದರು.

ದೇಶಾದ್ಯಂತ 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷಣ್ ಸವದಿ ಸಮ್ಮುಖದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಹಲವು ವಾದ್ಯ ಕಲಾ ತಂಡಗಳು ಭಾಗಿಯಾಗಿವೆ. ಉತ್ತರ ಪ್ರಾಂತ್ಯ ಆರ್ ಎಸ್ ಎಸ್ ಮುಖಂಡ ಅರವಿಂದ್ ರಾವ್ ದೇಶಪಾಂಡೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸೇರಿ ಅನೇಕರು ಈ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಇನ್ನು ಬೆಂಗಳೂರಿನಲ್ಲಿಯೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಕಳೆಗಟ್ಟಿದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ್ದಾರೆ. ಕೋವಿಡ್ ಕಡಿಮೆಯಾದ ನಂತರ ಅದ್ದೂರಿಯಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿ ತೆರದ ಜೀಪ್‌ನಲ್ಲಿ ಪರೇಡ್ ಪರಿವೀಕ್ಷಣೆ ಮಾಡಿದರು. ಆ ನಂತರ ರಾಜ್ಯಕ್ಕೆ ಸ್ವಾತಂತ್ರೋತ್ಸವದ ಸಂದೇಶ ಸಾರಿದ್ದಾರೆ. ಕೆಎಸ್ಆರ್ಪಿ, ಸಿಎಆರ್ಪಿಎಫ್, ಬಿಎಸ್ಎಫ್, ಸಿಎಆರ್, ಪೊಲೀಸ್ ಟ್ರಾಫಿಕ್, ಮಹಿಳಾ ಟ್ರಾಫಿಕ್, ಹೋಮ್ ಗಾರ್ಡ್ ಅಗ್ನಿಶಾಮಕ, ಶ್ವಾನದಳ ಸೇರಿದಂತೆ ಮತ್ತು ಬ್ಯಾಂಡ್ ನ ಒಟ್ಟು ೩೬ ತುಕಡಿಗಳಲ್ಲಿ ಸುಮಾರು 1200 ಮಂದಿ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ.

ಗಾಯಕ ಕಿಕ್ಕಿರೇ ಕೃಷ್ಣಮೂರ್ತಿ ತಂಡದಿಂದ ನಾಡಗೀತೆ ಮತ್ತು ರೈತಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಸುಮಾರು 800 ಮಕ್ಕಳಿಂದ ಅಮೃತ ಮಹೋತ್ಸವದ ಭಾರತದ ಸಂಭ್ರಮ ನೃತ್ಯ ಪ್ರದರ್ಶನ ನಡೆಯಿತು.

ಇನ್ನೊಂದೆಡೆ ವಿಜಯನಗರದಲ್ಲಿಯೂ ಸಚಿವ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಿದ್ದಾರೆ. 150 ಅಡಿ ಎತ್ತರದ ಧ್ವಜ ಸ್ಥಂಭವನ್ನು  ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಸಂಸದ ದೇವೆಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಮಾತಾಂಗ ಶ್ರೀಗಳು ಸೇರಿ ಅನೇಕರು ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ವಿವಿಧ ತುಕಡಿಗಳಿಗಳ ಪರಿವೀಕ್ಷಣೆ ಮಾಡಿದರು. ಮೂವತ್ತಕ್ಕೂ ಹೆಚ್ಚು ತುಕಡಿಗಳಿಂದ ಸಚಿವರಿಗೆ ಪತಸಂಚಲನೆ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಡಿಎಆರ್, ಮಹಿಳಾ ಪೊಲೀಸ್ ತುಕಡಿ, ಗೃಹರಕ್ಷಕ ದಳ, ಎನ್ ಸಿಸಿ, ಶಾಲಾ ಮಕ್ಕಳ ತುಕಡಿಗಳಿಗಳಿಂದ ಪತಸಂಚಲನ ನಡೆಯಿತು.

ಇದನ್ನೂ ಓದಿ: “ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಹೀಗಿರಲಿದೆ”… ಕೆಂಪುಕೋಟೆಯಲ್ಲಿ ಪ್ರಧಾನಿ ಮಾತು

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಸಲಾಗಿದ್ದು, ಬಳಿಕ ರಾಷ್ಟ್ರಗೀತೆ, ನಾಡಗೀತೆಯನ್ನು ಹಾಡಿ ಗೌರವ ಸೂಚಿಸಲಾಯಿತು.  ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News