ಪ್ರಜಾಧ್ವನಿ 2 ಯಾತ್ರೆಯಲ್ಲಿ ಮೊದಲಿಗೆ ಕರ್ನಾಟಕ ಜನರಿಗೆ ನಮಸ್ಕಾರ ಎಂದು ತಮ್ಮ ಮಾತು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಈ ದೇಶದಲ್ಲಿ ಇರುವ ಅಸಮಾನತೆ ಹೋಗಲಾಡಿಸುವುದೇ ನಮ್ಮ ಗುರಿ. ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆ. ರೈತರ ಸಾಲಮನ್ನಾ ಮಾಡುತ್ತೇವೆ. ದೇಶದ ಬಡ ಮಹಿಳೆಯರಿಗೆ 1 ಲಕ್ಷ ಕೊಡುತ್ತೇವೆ. ನಮಗೆ ಸಮಾನವಾದ, ಅಸಮಾನತೆ ಇಲ್ಲದ, ಶೋಷಣೆ ಇಲ್ಲದ ಭಾರತ ಬೇಕು ಎಂದು ಕೂಗಿ ಹೇಳಿದರು.
ಮೋದಿಯವರೇ ನೀವು ಕೋಟಿ ಕೋಟಿ ಹಣವನ್ನು ಅದಾನಿ, ಅಂಬಾನಿಗೆ ನೀಡುತ್ತಿದ್ದೀರಿ. ಆದರೆ ನಾವು ಕೋಟಿ ಕೋಟಿ ಹಣವನ್ನು ದೇಶದ ಮಹಿಳೆಯರಿಗೆ ಕೊಡುತ್ತೇವೆ. ಈ ದೇಶದ ಬಡ ಮಹಿಳೆಯರ ಖಾತೆಗೆ ತಿಂಗಳಿಗೆ 8,500 ಸಾವಿರ ಅಂದರೆ ವರ್ಷಕ್ಕೆ 1 ಲಕ್ಷ ಕೊಡುತ್ತೇವೆ. ಜಾತಿ ಗಣತಿ (Caste Census) ಮಾಡುತ್ತೇವೆ. ನಮ್ಮದು ಕ್ರಾಂತಿಕಾರಕ ಹೆಜ್ಜೆ.
ರೈತರ ಸಾಲಮನ್ನಾ (farmers loan waiver) ಮಾಡಿದಾಗ ರೈತರನ್ನು ಹಾಳು ಮಾಡುತ್ತಿದ್ದೀರಿ ಎಂದು ಬಿಜೆಪಿ ಹೇಳಿತು. ಮಾನ್ಯ ಮೋದಿಯವರೇ ಶ್ರೀಮಂತರ ಸಾಲಮನ್ನಾ ಮಾಡಿದರೆ ದೇಶ ಹಾಳಾಗಲಿಲ್ಲವೇ? ಈ ದೇಶದ ಮಾಧ್ಯಮಗಳು ದಿನದ 24 ಗಂಟೆಯೂ ಮೋದಿಯ ಮುಖ ತೋರಿಸುತ್ತಾರೆ. ಕ್ರಿಕೆಟ್ ಆಟಗಾರರನ್ನು ತೋರಿಸುತ್ತಾರೆ ಹೊರತು ಬಡವರ, ರೈತರ, ಕಾರ್ಮಿಕರ, ಮುಖ ತೋರಿಸುವುದಿಲ್ಲ.
ನಾವು ಜಾತಿಗಣತಿ ಮಾಡುತ್ತೇವೆ ಎಂದರೆ ಮೋದಿ ಅವರು ಬಾಯಿಯೇ ಬಿಡುವುದಿಲ್ಲ. ಮೋದಿಯವರೇ ನೀವು ಜಾತಿಗಣತಿ ಪರವಾಗಿ ಇದ್ದಿರೋ ಅಥವಾ ವಿರುದ್ಧವಾಗಿ ಇದ್ದಿರೋ ಹೇಳಿ. ನಾನು ಚಿಕ್ಕವನಾಗಿದ್ಧಾಗ ಇಂದಿರಾಗಾಂಧಿ ಅವರ ಜೊತೆ ಕೆಜಿಎಫ್ ಚಿನ್ನದ ಗಣಿಗೆ ಬಂದಿದ್ದೆ. ಗಣಿಯ ಸುರಂಗದ ಒಳಗೆ ಹೋಗಿ ಅಲ್ಲಿನ ಕಾರ್ಮಿಕರನ್ನು ಮಾತನಾಡಿಸಿದ್ದೆ. ಚಿನ್ನದ ಇಟ್ಟಿಗೆ ನೋಡಿದಾಗ ಶ್ರಮದ ಸಂಪತ್ತು ಇಲ್ಲಿದೆ ಎನಿಸಿತು. ಅದೇ ಕಾರ್ಮಿಕರು ಈಗ ವ್ಯವಸಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ- ಗ್ಯಾರಂಟಿಗಳನ್ನು ಮುಟ್ಟೋದು ಬಿಜೆಪಿ- ದಳದ ಹಣೆಯಲ್ಲಿ ಬರೆದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು!
ನಾನು ಇಂದಿರಾಗಾಂಧಿ (Indira Gandhi) ಅವರಿಂದ ರಾಜಕೀಯ ಕಲಿತಿದ್ದೇನೆ. ನಾನು ಚಿಕ್ಕವನಾಗಿದ್ದಾಗ ಅವರು ಹೇಳುತ್ತಿದ್ದ ಮಾತುಗಳು ಅರ್ಥವಾಗುತ್ತಿರಲಿಲ್ಲ. ಆದರೆ ಅವರು ನನ್ನನ್ನು ರಾಜಕೀಯಕ್ಕೆ ತಯಾರು ಮಾಡುತ್ತಿದ್ದರು. ಕೆಲವರು ರಾಜಕೀಯ ಎಂದರೆ ಚದುರಂಗದ ಆಟ ಎಂದುಕೊಂಡಿದ್ದಾರೆ. ಆದರೆ ಅಜ್ಜಿ ಇಂದಿರಾ ಗಾಂಧಿ ಅವರು ಹೇಳಿದರು. ನಾಯಕನಾದವನು ಸಮಾಜದಲ್ಲಿ ತಾರತಮ್ಯಗಳನ್ನು ಹುಡುಕಿ ಬಗೆಹರಿಸಬೇಕು ಎಂದು ಪಾಠ ಹೇಳಿಕೊಟ್ಟರು.
ನೀವು ಸಮಾಜದಲ್ಲಿ ಇರುವ ತಾರತಮ್ಯಗಳನ್ನು ಪ್ರಶ್ನೆ ಮಾಡಿದಾಗ ನಿಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ನಿಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಎಂದರೆ ನೀವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದೀರಿ ಎಂದರ್ಥ. ಯಾವತ್ತು ಭಯ ಪಡಬಾರದು, ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬಾರದು.
ದೆಹಲಿಯಲ್ಲಿ ಕುಳಿತಿರುವ ಸರ್ಕಾರ ಅಸಮಾನತೆಯನ್ನು ದೇಶದ ತುಂಬಾ ಹರಡುತ್ತಿದೆ. ದೇಶದ 22 ಉದ್ಯಮಿಗಳ 17 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. 22 ಜನ ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಹಣದಲ್ಲಿ ನರೇಗಾ ಯೋಜನೆಯನ್ನು 25 ವರ್ಷಗಳ ಕಾಲ ನಡೆಸಬಹುದು.
ನಮ್ಮ ಕಾಂಗ್ರೆಸ್ ಸರ್ಕಾರ ಕೆಂದ್ರದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿತ್ತು. ಈದೇಶದ ಕೋಟ್ಯಂತರ ರೈತರ ಬದುಕನ್ನು ಕಟ್ಟಿದ್ದು ಕಾಂಗ್ರೆಸ್ ಸರ್ಕಾರ. ಮೋದಿ ಅವರು ತಮ್ಮ ಸ್ನೇಹಿತರ ಸಾಲಮನ್ನಾ ಮಾಡಿರುವ ಹಣದಲ್ಲಿ ಈ ದೇಶದ ರೈತರ ಸಾಲವನ್ನು ಮುಂದಿನ 25 ವರ್ಷಗಳ ಕಾಲ ಮನ್ನಾ ಮಾಡಬಹುದು. ಅಷ್ಟು ಹಣವನ್ನು ತಮ್ಮ ಸ್ನೇಹಿತರಿಗೆ ಕೊಟ್ಟಿದ್ದಾರೆ. ಮೋದಿಯವರೇ ನೀವು ನಿಮ್ಮ 22 ಜನ ಸ್ನೇಹಿತರಿಗೆ ಮಾಡಿರುವ ಸಹಾಯ, ಈ ದೇಶದ ರೈತರಿಗೆ ಮಾಡಿರುವ ಅಪಮಾನ. ರೈತರು ಸಾಲಮನ್ನಾ ಮಾಡಿ ಎಂದು ಮನವಿ ಮಾಡಿದರೆ ಒಂದೇ ಒಂದು ಮಾತು ನಿಮ್ಮ ಬಾಯಿಂದ ಬರಲಿಲ್ಲ.
ಇದನ್ನೂ ಓದಿ- ಮಂಡ್ಯ ಜನಸಾಗರಕ್ಕೆ ಶ್ರೀರಾಮನವಮಿ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ದೇಶದ 22 ಜನರ ಹತ್ರ ಇರುವ ಹಣ ದೇಶದ 70 ಕೋಟಿ ಜನರ ಬಳಿ ಇದೆ. ಈ ದೇಶದ 22 ಜನರ ಬಳಿ ನಮ್ಮ ಕಲ್ಪನೆಗೂ ಮೀರಿದ ಹಣ ಇದೆ. ಅದಾನಿ, ಅಂಬಾನಿ ಈ ಭೂಮಿ ನಮಗೆ ಬೇಕು ಎಂದರೆ ಪ್ರಧಾನಿ ಮೋದಿ ರೈತನ ಭೂಮಿಯನ್ನು ಕಿತ್ತು ಅವರಿಗೆ ಕೊಡುತ್ತಾರೆ.
ಮುಂಬೈ ಏರ್ಪೋರ್ಟ್ ಮಾಲಿಕನ ಮೇಲೆ ಸಿಬಿಐ ಕೇಸ್ ಹಾಕಿಸಿ ಅದನ್ನು ಅದಾನಿಗೆ ಕೊಡಿಸುತ್ತಾರೆ. ಅದಾನಿ ಏನು ಬೇಕು ಅನ್ನುತ್ತಾರೋ ಅದನ್ನು ಮೋದಿ ಕೊಡುತ್ತಾರೆ. ಈ ದೇಶದಲ್ಲಿ ಶೇ 15 ರಷ್ಟು ಜನ ದಲಿತರು, ಶೇ 8 ರಷ್ಟು ಜನ ಆದಿವಾಸಿಗಳು, ಶೇ 50 ರಷ್ಟು ಜನ ಓಬಿಸಿಗಳು, ಶೇ 15 ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಆದರೆ ಯಾವುದೇ ಇಲಾಖೆಗೆ ಹೋದರು ಇವರ ಪ್ರಾತಿನಿಧ್ಯವೇ ಇಲ್ಲ. ಮಾಧ್ಯಮಗಳಲ್ಲಿ ಪ್ರಸಿದ್ದಿ ಪಡೆದಿರುವ ನಿರೂಪಕರು ಬೆಲೆ ಏರಿಕೆ, ನಿರುದ್ಯೋಗ, ಬಡತನ ಬಗ್ಗೆ ಮಾತೇ ಆಡುವುದಿಲ್ಲ. ಈ ಮಾಧ್ಯಮಗಳ ಮಾಲೀಕರಲ್ಲಿ ಒಬ್ಬರೇ ಒಬ್ಬರು ದಲಿತ, ಓಬಿಸಿ, ಅಲ್ಲಪಸಂಖ್ಯಾತರ ಹೆಸರಿಲ್ಲ. ಇಲ್ಲಿ ಬಡವರಿಗೆ ಅವಕಾಶ ಸಿಗುವುದಿಲ್ಲ.
ಈ ದೇಶದ ಪ್ರಮುಖ 200 ಕಂಪನಿಗಳ ಪಟ್ಟಿ ತೆಗೆದು ನೋಡಿ, ಉನ್ನತ ಅಧಿಕಾರಿಗಳ ಪಟ್ಟಿ ತೆಗೆದುನೋಡಿ ಎಲ್ಲಿಯೂ ಸಹ ದಲಿತರು, ಅಲ್ಪಸಂಖ್ಯಾತರು, ಓಬಿಸಿಗಳು ಇಲ್ಲ. ಅಲ್ಲದೇ ಯಾವುದೇ ಮ್ಯಾನೇಜ್ ಮೆಂಟ್ಗಳಲ್ಲೂ ಸಹ ಈ ದೇಶದ ಜನಸಾಮಾನ್ಯರ ಪ್ರಾತಿನಿಧ್ಯವೇ ಇಲ್ಲ.
ದೇಶವನ್ನು ನಡೆಸುವ 90 ಐಎಎಸ್ ಅಧಿಕಾರಿಗಳ ಪಟ್ಟಿ ತೆಗೆದು ನೋಡಿದರೆ ಅಲ್ಲಿ ಕೇವಲ 3 ಮಂದಿ ಓಬಿಸಿಗಳು, 3 ಮಂದಿ ದಲಿತರು, ಒಬ್ಬ ದಲಿತ ಅಧಿಕಾರಿ ಇದ್ದಾರೆ. ಈ ದೇಶಕ್ಕೆ 100 ರೂಪಾಯಿ ಆದಾಯ ಬಂದರೆ ಅದರಲ್ಲಿ ದಲಿತರು, ಓಬಿಸಿಗಳು, ಅಲ್ಪಸಂಖ್ಯಾತರಿಗೆ ಇರುವ ಅಧಿಕಾರ ಕೇವಲ 6 ರೂಪಾಯಿ ಮಾತ್ರ. ದೇಶದ ಜನಕ್ಕೆ ಬಜೆಟ್ ಹೇಗೆ ಆಗುತ್ತದೆ ಎಂದು ಗೊತ್ತೇ ಆಗುವುದಿಲ್ಲ.
ನಾನು ಅನೇಕರಿಗೆ ಪ್ರಶ್ನೆ ಮಾಡುತ್ತೇನೆ. ಈ ದೇಶದ ದಲಿತರು, ಓಬಿಸಿಗಳು, ಅಲ್ಪಸಂಖ್ಯಾತರು ಎಲ್ಲಿದ್ದಾರೆ ಎಂದು. ಇವರೆಲ್ಲಾ ರೈತರಾಗಿ, ಕೂಲಿ ಕಾರ್ಮಿಕರಾಗಿ, ಹೊರ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅಸಮಾನತೆಯಿಂದ ಕೂಡಿರುವ ದೇಶ ನಮಗೆ ಬೇಕಾಗಿದೆಯೇ?
ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ನೀಡಿ ಈ ದೇಶವನ್ನು ಕಟ್ಟುವ ಕೆಲಸಮಾಡುತ್ತಿದ್ದಾರೆ. ನಾವು ಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳಿಂದ ಜನರ ಬದುಕನ್ನು ಕಟ್ಟಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.