ಎಂಇಎಸ್ ಕಿರಾತಕರ ಬಗ್ಗೆ ಬಿಜೆಪಿ ಸರ್ಕಾರ ಮೃದುಧೋರಣೆ ತಾಳಿದೆ: ಎಚ್‍ಡಿಕೆ ಆರೋಪ

ಕರ್ನಾಟಕದಲ್ಲೇ ಇದ್ದು ಕನ್ನಡ ನೆಲದ ವಿರುದ್ಧ ವಿಧ್ವಂಸಕ ಕೃತ್ಯ ಎಸಗಿರುವ ಶುಭಂ ಶೆಳಕೆ ಎಂಬ ಧೂರ್ತನು ಫೇಸ್‌ಬುಕ್‌ನಲ್ಲಿ ರಾಜ್ಯವನ್ನು ಒಡೆಯುವ ಸಂದೇಶ ಪೋಸ್ಟ್‌ ಮಾಡಿದ್ದಾನೆ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Written by - Zee Kannada News Desk | Last Updated : May 3, 2022, 11:17 AM IST
  • ಮಹಾರಾಷ್ಟ್ರ ದಿನದ ನೆಪದಲ್ಲಿ ಎಂಇಎಸ್‌ ಪುಂಡರು ನಾಡದ್ರೋಹ ಎಸಗಿದ್ದಾರೆ
  • ಕರ್ನಾಟಕದಲ್ಲೇ ಇದ್ದು ಕನ್ನಡ ನೆಲದ ವಿರುದ್ಧ ವಿಧ್ವಂಸಕ ಕೃತ್ಯವೆಸಗಿರುವ ಶುಭಂ ಶೆಳಕೆಯಿಂದ ರಾಜ್ಯ ಒಡೆಯುವ ಸಂದೇಶ
  • ಶೆಳಕೆ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು ಎಂದು ಎಚ್‍ಡಿಕೆ ಆಗ್ರಹ
ಎಂಇಎಸ್ ಕಿರಾತಕರ ಬಗ್ಗೆ ಬಿಜೆಪಿ ಸರ್ಕಾರ ಮೃದುಧೋರಣೆ ತಾಳಿದೆ: ಎಚ್‍ಡಿಕೆ ಆರೋಪ title=
ಎಂಇಎಸ್ ಪುಂಡರ ಕೃತ್ಯಕ್ಕೆ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗಲೇ ರಾತ್ರೋರಾತ್ರಿ ‘ಭಯೋತ್ಪಾದಕ ದಾಳಿʼ ನಡೆಸಿ ಹಿಂಸಾಕಾಂಡ ಸೃಷ್ಟಿಸಿದ್ದ, ನಮ್ಮ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ವಿರೂಪಗೊಳಿಸಿದ್ದ ಎಂಇಎಸ್‌ ಕಿರಾತಕರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಮೃದುಧೋರಣೆ ತಾಳಿದೆ ಎನ್ನುವುದು ನನ್ನ ನೇರ ಆರೋಪ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಎಚ್‍ಡಿಕೆ, ಎಂಇಎಸ್‌ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ‘ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್‌) ನಿಷೇಧಿಸಿ ಎಂದು ಇಡೀ ಕರ್ನಾಟಕವೇ ಒಕ್ಕೊರಲಿನಿಂದ ಆಗ್ರಹ ಮಾಡಿತ್ತು. ಬಿಜೆಪಿ ಸರ್ಕಾರ ಅಸಡ್ಡೆ ತೋರಿದ ಪರಿಣಾಮ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಭಾಷೆ-ಭಾಷೆಗಳ ಜನರ ನಡುವೆ ಬೆಂಕಿ ಹಚ್ಚುವ ಇವರು ಭಯೋತ್ಪಾದಕರು’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗಡಿ ವಿವಾದ: 'ಅಜಿತ್‌ ಪವಾರ್‌ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬಹುದು'-ಹೆಚ್.ಡಿ.ಕುಮಾರಸ್ವಾಮಿ

‘ಮಹಾರಾಷ್ಟ್ರ ದಿನದ ನೆಪದಲ್ಲಿ ಎಂಇಎಸ್‌ ಪುಂಡರು ನಾಡದ್ರೋಹ ಎಸಗಿದ್ದಾರೆ. ಕರ್ನಾಟಕದಲ್ಲೇ ಇದ್ದು ಕನ್ನಡ ನೆಲದ ವಿರುದ್ಧ ವಿಧ್ವಂಸಕ ಕೃತ್ಯ ಎಸಗಿರುವ ಶುಭಂ ಶೆಳಕೆ ಎಂಬ ಧೂರ್ತನು ಫೇಸ್‌ಬುಕ್‌ನಲ್ಲಿ ರಾಜ್ಯವನ್ನು ಒಡೆಯುವ ಸಂದೇಶ ಪೋಸ್ಟ್‌ ಮಾಡಿದ್ದಾನೆ. ವಿಡಿಯೋ ಮೂಲಕ ಕನ್ನಡಿಗರನ್ನು ಕೆಣಕಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದ ಭೂಪಟವನ್ನು ತಿರುಚಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ನಾಡದ್ರೋಹಿ ಗ್ರಾಫಿಕ್ ಮಾಡಿ ಅದನ್ನು ಪೋಸ್ಟ್‌ ಮಾಡಿರುವ ಶೆಳಕೆಗೆ ಚಳಿ ಬಿಡಿಸಬೇಕಿದೆ. ‘ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ’ ಎಂದು ಉದ್ರೇಕಕಾರಿ ಬರಹ ಬರೆದ ಆತನ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು. ಬೆಳಗಾವಿ ಗಲಾಟೆಯಲ್ಲಿ ಜೈಲು ಸೇರಿದ್ದ ಶುಭಂ ಶೆಳಕೆ ಈಗ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ ಎಂದರೆ ಏನರ್ಥ?’ವೆಂದು ಎಚ್‍ಡಿಕೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ- ಲಕ್ಷ್ಮಣ ಸವದಿ

‘ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಇದೆಯಾ? ಅಥವಾ ಮಹಾರಾಷ್ಟ್ರದ ಬಾಲಂಗೋಚಿ ಆಡಳಿತ ಉಂಟಾ? ತಲೆಯ ಮೇಲೆ ಕೇಸರಿ ಪೇಟ, ಭುಜದ ಮೇಲೆ ಕೇಸರಿಶಾಲು ಧರಿಸಿ ಪೋಸು ಕೊಡುವ ಎಂಇಎಸ್ ಪುಂಡರ ಮೇಲೆ ಪ್ರಕರಣ ದಾಖಲಿಸಲು ಬಿಜೆಪಿ ಸರ್ಕಾರ ಮನಸ್ಸು ಒಪ್ಪುತ್ತಿಲ್ಲವಾ? ಸ್ಪಷ್ಟಪಡಿಸಲಿ’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಇರುವುದು ಒಂದೇ ಆಯ್ಕೆ. ಎಂಇಎಸ್‍ನ್ನು ಕೂಡಲೇ ನಿಷೇಧಿಸಬೇಕು ಹಾಗೂ ಕಿಡಿಗೇಡಿ ಶೆಳಖೆಯನ್ನು ಬಂಧಿಸಿ ರಾಜ್ಯದಿಂದ ಹೊರಹಾಕಬೇಕು. ಇಲ್ಲವಾದರೆ ‘ಬಿಜೆಪಿಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಬಾಲʼ ಎನ್ನದೇ ವಿಧಿ ಇಲ್ಲ. ರಾಜ್ಯವಿರೋಧಿ ರಾಷ್ಟ್ರೀಯವಾದವನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ ಎನ್ನುವುದನ್ನು ಬಿಜೆಪಿ ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು’ ಎಂದು ಎಚ್ಚರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News