ಘಟಬಂಧನ್ ಕಟ್ಟುವುದರಲ್ಲಿನ ಆತುರ, ರೈತನ ಬದುಕು ಕಟ್ಟುವುದರಲ್ಲಿಲ್ಲ: ಕಾಂಗ್ರೆಸ್ ವಿರುದ್ಧ ಎಚ್‍ಡಿಕೆ ಕಿಡಿ

HD Kumaraswamy Slams CM Siddaramaiah: ರೈತನ ಬದುಕಿಗೆ ಗ್ಯಾರಂಟಿ ಕೊಡಿ ಹ್ಯಾಶ್‍ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಎಚ್‍ಡಿಕೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Written by - Puttaraj K Alur | Last Updated : Jul 18, 2023, 12:08 AM IST
  • ಒಂದೆಡೆ ಅನ್ನದಾತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ್ದೇ ಆಟ
  • ಘಟಬಂಧನ್ ಕಟ್ಟುವುದರಲ್ಲಿರುವ ಆತುರ, ಅನ್ನ ಕೊಡುವ ರೈತನ ಬದುಕು ಕಟ್ಟುವುದರಲ್ಲಿಲ್ಲ
  • ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟವೆಂದು ಕುಮಾರಸ್ವಾಮಿ ಟ್ವೀಟ್
ಘಟಬಂಧನ್ ಕಟ್ಟುವುದರಲ್ಲಿನ ಆತುರ, ರೈತನ ಬದುಕು ಕಟ್ಟುವುದರಲ್ಲಿಲ್ಲ: ಕಾಂಗ್ರೆಸ್ ವಿರುದ್ಧ ಎಚ್‍ಡಿಕೆ ಕಿಡಿ title=
ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟ. ಒಂದೆಡೆ ಅನ್ನದಾತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದರೆ, ಈ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ್ದೇ ಆಟ. ಘಟಬಂಧನ್ ಕಟ್ಟುವುದರಲ್ಲಿ ಇರುವ ಆತುರ, ಅನ್ನ ಕೊಡುವ ರೈತನ ಬದುಕು ಕಟ್ಟುವುದರಲ್ಲಿ ಇಲ್ಲ. ಹೀಗಿದೆ ಇವರ ಗ್ಯಾರಂಟಿ ವರಸೆ!! ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

#ರೈತನ_ಬದುಕಿಗೆ_ಗ್ಯಾರಂಟಿ_ಕೊಡಿ ಹ್ಯಾಶ್‍ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಎಚ್‍ಡಿಕೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಗ್ಯಾರಂಟಿ ಹಾಗೂ ಭಾಗ್ಯಗಳಿಂದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡುತ್ತೇವೆ ಎಂದು ಬೂಸಿಬಿಟ್ಟ ಕಾಂಗ್ರೆಸ್, ಅಧಿಕಾರಕ್ಕೆ ಬಂದು ಎರಡೇ ತಿಂಗಳು ಕಳೆಯುವ ಮುನ್ನವೇ ರಾಜ್ಯದಲ್ಲಿ 'ರೈತರ ಮರಣಮೃದಂಗ' ಶುರುವಾಗಿದೆ. ಸುಭೀಕ್ಷೆಯ ನಾಡು ಕರ್ನಾಟಕದಲ್ಲಿ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದರೆ ಇವರು ನಾಚಿಕೆಯಿಂದ ತಲೆ ತಗ್ಗಿಸಬೇಕು’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ʼಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭʼ- ಸಿಎಂ ಸಿದ್ದರಾಮಯ್ಯ

‘ಹಾವೇರಿ ಜಿಲ್ಲೆ ಒಂದರಲ್ಲಿಯೇ 18 ಮಂದಿ ಅನ್ನದಾತರು ಸಾವಿಗೆ ಶರಣಾಗಿರುವುದು, ಇನ್ನಿತರೆ ಜಿಲ್ಲೆಗಳಲ್ಲಿ ಅದೇ ಸರಣಿ ಶುರುವಾಗಿರುವುದು ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಈ ಸಾವುಗಳು ಕಳವಳಕಾರಿ. ರೈತರ ಬದುಕಿಗೇ ಗ್ಯಾರಂಟಿ ಕೊಡದ ಈ ಸರ್ಕಾರ ಘೋರ ಪಾಪ ಎಸಗಿ, ಘಟಬಂಧನ್ ಎಂದು ಚೆಲ್ಲಾಟ ಆಡುತ್ತಿದೆ. ಗ್ಯಾರಂಟಿ ಎಂದು ಬೀಗಿದ ಕಾಂಗ್ರೆಸ್ ಸರ್ಕಾರ, ಆ ಗ್ಯಾರಂಟಿಗಳಲ್ಲಿ ರೈತನ ಪಾಲೇನು? ರಾಜ್ಯಪಾಲರ ಭಾಷಣ, ಬಜೆಟ್ಟಿನಲ್ಲಿ ಈ ಬಗ್ಗೆ ಒಂದು ಪದವನ್ನಾದರೂ ಉಲ್ಲೇಖಿಸಬೇಕಿತ್ತು. ಬಡವರ ಬದುಕಿಗೆ ಗ್ಯಾರಂಟಿ ಕೊಡುತ್ತೇವೆ ಎಂದವರು ಮಾಡಿದ್ದೇನು? ಬಜೆಟ್ಟಿನಲ್ಲಿ ಕೃಷಿ ಅನುದಾನಕ್ಕೆ ಖೋತಾ ಹಾಕಿದ್ದು! ಇವರಾ ರೈತೋದ್ಧಾರಕರು? ನಾಚಿಕೆಗೇಡು’ ಎಂದು ಎಚ್‍ಡಿಕೆ ಟೀಕಿಸಿದ್ದಾರೆ.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಆಗಿದ್ದವು. ನನ್ನ ಸರ್ಕಾರ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡಿ ಅವರ ಜೀವ ಉಳಿಸುವ ಕೆಲಸ ಮಾಡಿದೆ. ಅದನ್ನೇ ಕಾಂಗ್ರೆಸ್ ಸರ್ಕಾರ ಈಗ ಮಾಡಲಿ. ಕೃಷಿ ಅನುದಾನಕ್ಕೆ ಕತ್ತರಿ ಹಾಕುವ ಬದಲು ರೈತರಿಗೆ ಆರ್ಥಿಕ ನಿರಾಳತೆ ನೀಡಲಿ. ಅನ್ನದಾತ ಬಂಧುಗಳಲ್ಲಿ ಹೃದಯಪೂರ್ವಕ ಮನವಿ.. ದಯಮಾಡಿ ಯಾರೂ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ. ಒಂದು ಜೀವಹಾನಿ ಆ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತದೆ. ಹೋರಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ನಿಮ್ಮ ಜೊತೆ ನಾನಿದ್ದೇನೆ. ದಯವಿಟ್ಟು ಯಾರೂ ಜೀವಕ್ಕೆ ಕುತ್ತು ತಂದುಕೊಳ್ಳುವುದು ಬೇಡ. ಸರ್ಕಾರ ತಕ್ಷಣ ಇತ್ತ ಗಮನ ಹರಿಸಬೇಕು’ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಸಿಗಾಗಿ ಹುದ್ದೆಯಲ್ಲಿ 500 ಕೋಟಿ ರೂಪಾಯಿ ಕೈ ಬದಲು: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News