ಬೆಂಗಳೂರು: ಕೇಂದ್ರ ಸರ್ಕಾರದ CAA ಹಾಗೂ NRC ಕಾಯ್ದೆಗಳಿಗೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಈ ಪ್ರತಿಭಟನಾ ಸಭೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ಹೌದು, ಈ ಸಭೆಯಲ್ಲಿ ಪಾಲ್ಗೊಳ್ಳಲು ಹೈದ್ರಾಬಾದ್ ನಿಂದ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಬೆಂಗಳೂರಿಗೆ ಆಗಮಿಸಿದ್ದರು. ಅವರು ವೇದಿಕೆಯ ಮೇಲೆ ಆಗಮಿಸುತ್ತಿದ್ದಂತೆ ಅಮೂಲ್ಯ(19) ಹೆಸರಿನ ಹೋರಾಟಗಾರ್ತಿ ವೇದಿಕೆಗೆ ಆಗಮಿಸಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಮೂರು ಬಾರಿ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ತಕ್ಷಣ ತರಾಟೆಗೆ ತೆಗೆದುಕೊಂಡ ಅಸದುದ್ದೀನ್ ಒವೈಸಿ, ಈ ರೀತಿಯ ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸು ಎಂದು ಯುವತಿಗೆ ಗದರಿಸಿದ್ದಾರೆ. ಅಷ್ಟಕ್ಕೂ ನಿಲ್ಲಿಸದ ಯುವತಿ ತನ್ನ ಘೋಷಣೆಗಳನ್ನು ಮುಂದುವರೆಸಿದ್ದಾಳೆ. ಬಳಿಕ ವೇದಿಕೆಗೆ ಆಗಮಿಸಿರುವ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಯುವತಿಯ ತಂದೆ ವ್ಹಾಜಿ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಹಿಂದೆಯೂ ಕೂಡ ಯುವತಿ ಇಂತಹ ಚಳುವಳಿಯಲ್ಲಿ ಭಾಗಿಯಾಗಿದ್ದಳು
ಈ ಹಿಂದೆ ಕೇರಳದಲ್ಲಿ ಆರಂಭವಾಗಿದ್ದ ಅಪ್ಪಿಕೋ ಚಳುವಳಿಯಲ್ಲಿಯೂ ಕೂಡ ಈ ಯುವತಿ ಭಾಗವಹಿಸಿದ್ದಳು ಎಂದು ಹೇಳಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಯುವತಿ 'ಪಾಕಿಸ್ತಾನ್ ಜಿಂದಾಬಾದ್' ಹೇಳಿಕೆ ಕೂಗಿದಾಗ ತಕ್ಷಣ ಸ್ಥಳದಲ್ಲಿ ಬಿಗುವಿನ ವಾತಾವರಣ ಮನೆ ಮಾಡಿದೆ. ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಒವೈಸಿ ಮಧ್ಯಪ್ರವೇಶಿಸಿ ಯುವತಿಯನ್ನು ಈ ರೀತಿಯ ಹೇಳಿಕೆ ನೀಡದಂತೆ ತಡೆಯಲು ಯತ್ನಿಸಿದ್ದಾರೆ. ಅಷ್ಟಾಗ್ಯೂ ಕೂಡ ಯುವತಿ ನಿಲ್ಲದಿರುವುದನ್ನು ಗಮನಿಸಿದ ಕಾರ್ಯಕ್ರಮ ಆಯೋಜಿಸಿದ್ದ ಹಿಂದೂ-ಮುಸ್ಲಿಂ-ಸಿಖ್-ಇಸಾಯಿ ಸಂಘಟನೆಯ ಆಯೋಜರು ವೇದಿಕೆಗೆ ಧಾವಿಸಿ ಯುವತಿಯಿಂದ ಬಲವಂತವಾಗಿ ಮೈಕನ್ನು ಕಸಿದುಕೊಂಡಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರೆ ಮುಸ್ಲಿಂ ಮುಖಂಡರೂ ಕೂಡ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ನಾವು ಯುವತಿಯನ್ನು ವೇದಿಕೆಗೆ ಕರೆದಿರಲಿಲ್ಲ ಎಂದು ಹೇಳಿದ್ದಾರೆ.
ಘಟನೆಯನ್ನು ತರಾಟೆಗೆ ತೆಗೆದುಕೊಂಡ ಒವೈಸಿ
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಇದರ ಹಿಂದೆ ತಮ್ಮ ಕೈವಾಡವಿಲ್ಲ ಎಂದು ಹೇಳಿದ್ದಾರೆ. ಸದ್ಯ ಯುವತಿಯನ್ನು ವಶಕ್ಕೆ ಪಡೆದಿರುವ ಉಪ್ಪಾರ ಪೇಟೆ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಹೆಚ್ಚಿನ ತನಿಖೆಗಾಗಿ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ತನಿಖೆಯ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಈ ಮೊದಲೂ ಕೂಡ ಇಂತಹ ಘೋಷಣೆ ಕೂಗಲಾಗಿತ್ತು
ಕೆಲ ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಕೆ.ಎಲ್.ಇ ಇಂಜಿನೀರಿಂಗ್ ಕಾಲೇಜಿನ ಮೂವರು ಯುವಕರೂ ಕೂಡ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಮೊಳಗಿಸಿದ್ದರು. ಬಳಿಕ ಪೊಲೀಸರು ಅವರನ್ನು ಬಂಧನಕ್ಕೆ ಒಳಪಡಿಸಿರುವುದನ್ನು ನಾವು ಕಾಣಬಹುದು.