ಕಡೆಗೂ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ

ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿ ಹಾಗೂ ತಜ್ಞರು ಕೊಟ್ಟ ಸಲಹೆ ಮೇರೆಗೆ ಜನವರಿ 1ರಿಂದ ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿಗಳು ಹಾಗೂ ಎರಡನೇ ಹಂತದಲ್ಲಿ ಹಂತದಲ್ಲಿ 9 ಮತ್ತು 11ನೇ ತರಗತಿಗಳನ್ನು ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ‌.

Written by - Yashaswini V | Last Updated : Dec 19, 2020, 02:50 PM IST
  • ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮಹತ್ವದ ಸಭೆ
  • ಜನವರಿ 1ರಿಂದ 9, 10, 11, 12ನೇ ತರಗತಿ ಆರಂಭಕ್ಕೆ ಒಪ್ಪಿಗೆ
  • ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ತೀರ್ಮಾನ
ಕಡೆಗೂ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ title=
Schools reopen from January 1 in Karnataka (File Image)

ಬೆಂಗಳೂರು: COVID-19 ವೈರಸ್ ಕಾರಣಕ್ಕೆ ಈ ಬಾರಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಎದ್ದಿದ್ದ ಗೊಂದಲಕ್ಕೆ ಕಡೆಗೂ ರಾಜ್ಯ ಸರ್ಕಾರ ತೆರೆ ಎಳೆದಿದೆ. ಜನವರಿ 1ರಿಂದ ಶಾಲೆಗಳನ್ನು ಆರಂಭಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಶಾಲಾ-ಕಾಲೇಜುಗಳ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳೇ ನಿರ್ಧಾರ ಮಾಡಬೇಕೆಂದು ಎಂದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ಜಾರಿಕೊಂಡಿತ್ತು‌. ಇದರಿಂದ ಜಿಜ್ಞಾಸೆಗೆ ಸಿಲುಕಿದ್ದ ರಾಜ್ಯ ಸರ್ಕಾರ ಅಂತಿಮವಾಗಿ ಈಗ ಶಾಲೆಗಳನ್ನು ಆರಂಭಿಸುವ ನಿರ್ಧಾರಕ್ಕೆ ಬಂದಿದೆ.

ಶಾಲಾ ಆರಂಭಿಸುವ ಬಗ್ಗೆ ಚರ್ಚೆ ಮಾಡಲೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಇಂದು ತಮ್ಮ ಗೃಹ ಕಚೇರಿಯಲ್ಲಿ ಸಭೆ ಕರೆದಿದ್ದರು. ಸಭೆಯಲ್ಲಿ ಶಾಲೆಗಳನ್ನು ಆರಂಭಿಸುವುದರಿಂದ ಆಗಬಹುದಾದ ಸಾಧಕಬಾಧಕಗಳ ಸಮಾಲೋಚನೆ ನಡೆಸಿ ಕಡೆಗೆ ಜನವರಿ 1ರಿಂದ ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿಗಳು ಹಾಗೂ ಎರಡನೇ ಹಂತದಲ್ಲಿ ಹಂತದಲ್ಲಿ 9 ಮತ್ತು 11ನೇ ತರಗತಿಗಳನ್ನು ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಈ ವರ್ಷ ಶಾಲೆಗಳನ್ನು ಆರಂಭಿಸಬೇಡಿ, ಎಲ್ಲರನ್ನೂ ಪಾಸ್ ಮಾಡಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ಸಭೆಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕೋವಿಡ್ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿ, ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಮಾಡಿಕೊಂಡಿರುವ ತಯಾರಿ ಹಾಗೂ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಶಿಕ್ಷಣ ಇಲಾಖೆಗೆ ನೀಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಯಿತು.

ಶಾಲೆಗಳನ್ನು ಆರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿರುವ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯ ಸಲಹೆಯನ್ನೂ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯು ಜನವರಿ 1ರಿಂದ ಶಾಲೆಗಳನ್ನು ಆರಂಭಿಸಬಹುದು ಎಂದು ತಿಳಿಸಿದೆ.  ತಾಂತ್ರಿಕ ಸಮಿತಿಯ ಸಲಹೆ ಮೇರೆಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಪತ್ರ ಬರೆದಿದ್ದು ಆರೋಗ್ಯ ಇಲಾಖೆ ವತಿಯಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಒಪ್ಪಿಗೆ ನೀಡಿದ್ದರು. ಇದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಯಿತು ಎಂದು ತಿಳಿದುಬಂದಿದೆ.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿ ಹಾಗೂ ತಜ್ಞರು ಕೊಟ್ಟ ಸಲಹೆ ಮೇರೆಗೆ ಶಾಲೆ ಆರಂಭಿಸುವ (Schools Reopen) ಬಗ್ಗೆ ತೀರ್ಮಾನ ಮಾಡಲಾಗಿದೆ‌. ಒಮ್ಮತದ ಅಭಿಪ್ರಾಯದಿಂದ ಶಾಲೆ ಆರಂಭಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕರೋನಾವೈರಸ್ ನಡುವೆಯೂ ಈ ರಾಜ್ಯದಲ್ಲಿ ಜನವರಿ 1ರಿಂದ ತೆರೆಯಲಿವೆ ಶಾಲೆಗಳು

ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (S Sureshkumar) ಮಾತನಾಡಿ ಶಾಲೆಗಳ ಜೊತೆ ಹಾಸ್ಟೆಲ್ ಆರಂಭಿಸುವುಕ್ಕೂ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹಾಸ್ಟೆಲ್ ಗೆ ಸೇರುವ ಮಕ್ಕಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರಬೇಕು. ಈ ಬಾರಿ ಶಾಲೆ ಆವರಣ ಒಳಗೆ ಮಾತ್ರ ವಿದ್ಯಾಗಮ ನಡೆಯಲಿದೆ. ಅದು ಕೂಡ ವಾರಕ್ಕೆ ಮೂರು ದಿನ ಮಾತ್ರ ಇರುತ್ತದೆ. ಶಾಲೆಗೆ ಬರುವ ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಕು ಎಂದು ಒತ್ತಾಯ ಮಾಡುವುದಿಲ್ಲ. ಅವಕಾಶ ಇರುವವರು ಆನ್ ಲೈನ್ ಮೂಲಕವೂ ಕಲಿಯಬಹುದು ಎಂದರು.

ಭಾನುವಾರ ತರಗತಿ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಸದ್ಯಕ್ಕೆ 9, 10, 11 ಮತ್ತು 12ನೇ ತರಗತಿಗಳನ್ನು ಆರಂಭಿಸಲಾಗುತ್ತಿದ್ದು ಉಳಿದ ತರಗತಿಗಳ ಆರಂಭದ ಬಗ್ಗೆ ಮುಂದೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು. ಸದ್ಯ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಶಾಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. SSLC ಪರೀಕ್ಷೆ ಸಂದರ್ಭದಂತೆ ಈಗಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಧ್ಯಾಹ್ನದ ಬಿಸಿಯೂಟ ಇಲ್ಲ:
ಕೊರೊನಾ ಹಿನ್ನಲೆಯಲ್ಲಿ ಈಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕೊಡಲಾಗುವುದಿಲ್ಲ. ಅದರ ಬದಲಿಗೆ ಬಿಸಿಯೂಟದ ಸಮಾಗ್ರಿಗಳನ್ನು ಮಕ್ಕಳ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಇದನ್ನೂ ಓದಿ: ಬೇಸಿಗೆ ರಜೆಯನ್ನು ಬಲಿ ಪಡೆಯುವುದೇ ಕೊರೊನಾ?

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಕೂಡ ವರದಿ ನೀಡಿದೆ‌. ಎರಡನೇ ಅಲೆಯನ್ನು ತಡೆಯಲು ತಮ್ಮ ಇಲಾಖೆ ವತಿಯಿಂದ ಅಗತ್ಯ ಕ್ರಮ ವಹಿಸಲಾಗಿದೆ. ಈಗಾಗಲೇ ಲಸಿಕೆ ವಿತರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Trending News