ಗ್ರಾಮ ಪಂಚಾಯತಿ ಚುನಾವಣೆ: ಸದಾಚಾರ ನೀತಿ ಸಂಹಿತೆಯಲ್ಲಿ ಯಾವುದಕ್ಕೆಲ್ಲಾ ನಿರ್ಬಂಧ..!

 22 ಮತ್ತು 27 ರಂದು ಎರಡು ಹಂತಗಳಲ್ಲಿ ಜರುಗಲಿರುವ ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿ ಹೊರತುಪಡಿಸಿ ಚುನಾವಣೆ ನಡೆಯುವ ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯವಾಗುವಂತೆ ನವೆಂಬರ್ 30 ರಿಂದ ಡಿಸೆಂಬರ್ 31 ರ ಸಂಜೆ 5 ಗಂಟೆಯವರೆಗೆ ಸದಾಚಾರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ.

Last Updated : Dec 2, 2020, 08:10 PM IST
ಗ್ರಾಮ ಪಂಚಾಯತಿ ಚುನಾವಣೆ: ಸದಾಚಾರ ನೀತಿ ಸಂಹಿತೆಯಲ್ಲಿ ಯಾವುದಕ್ಕೆಲ್ಲಾ ನಿರ್ಬಂಧ..! title=
file photo

ಬೆಂಗಳೂರು:  22 ಮತ್ತು 27 ರಂದು ಎರಡು ಹಂತಗಳಲ್ಲಿ ಜರುಗಲಿರುವ ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿ ಹೊರತುಪಡಿಸಿ ಚುನಾವಣೆ ನಡೆಯುವ ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯವಾಗುವಂತೆ ನವೆಂಬರ್ 30 ರಿಂದ ಡಿಸೆಂಬರ್ 31 ರ ಸಂಜೆ 5 ಗಂಟೆಯವರೆಗೆ ಸದಾಚಾರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಚುನಾವಣಾ ಆಯೋಗವು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಸದಾಚಾರ ಸಂಹಿತೆಯನ್ನು ಪ್ರಕಟಿಸಿದೆ. ಜಾರಿಯಲ್ಲಿರುವ ಸದಾಚಾರ ನೀತಿ ಸಂಹಿತೆಯ ಪ್ರಕಾರ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳು ಸಾಮಾನ್ಯ ಸಭೆಯನ್ನು ನಡೆಸಲು ನೀತಿ ಸಂಹಿತೆಯ ಅಡ್ಡಿಯಿರುವುದಿಲ್ಲ. ಆದರೆ, ಸಭೆಯಲ್ಲಿ ಯಾವುದೇ ಹೊಸ ಯೋಜನೆಗಳ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳತಕ್ಕದ್ದಲ್ಲ. ಈಗಾಗಲೇ ಆಯವ್ಯಯ ಒದಗಿಸಿರುವ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ಪ್ರಾರಂಭವಾಗಿದ್ದಲ್ಲಿ ಕೆಲಸ ಮುಂದುವರೆಸಲು ಯಾವುದೇ ಬಾಧಕವಿಲ್ಲ.

ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಥವಾ ಈ ಯೋಜನೆಯಡಿ ಇತರ ಕಾಮಗಾರಿಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸಲು ನೀತಿ ಸಂಹಿತೆಯ ಅಡ್ಡಿಯಿರುವುದಿಲ್ಲ. ಆದರೆ ಇಂತಹ ಯೋಜನೆಯ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ.ನೆರೆಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ, ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ.

ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷರಹಿತವಾಗಿ ನಡೆಯುವುದರಿಂದ ರಾಜಕೀಯ ಪಕ್ಷಗಳ ಚಿಹ್ನೆಗಳು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಪ್ರಚಾರ ಮಾಡಬಾರದು. ಒಂದು ವೇಳೆ ಅಂತಹ ಪ್ರಚಾರ ನಡೆಸಿದಲ್ಲಿ ಅಭ್ಯರ್ಥಿಯು ಮುದ್ರಿಸಿರುವ ಕರಪತ್ರ, ಪೋಸ್ಟರ್ ಅಥವಾ ಇನ್ನಾವುದೇ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಯಾವುದೇ ಸಾಂಸ್ಕøತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ. ಆದರೆ ಇಂತಹ ಸಭೆ-ಸಮಾರಂಭಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿ ನೀತಿ ಸಂಹಿತೆಗೆ ಬಾಧಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ನೀಡುವಂತಿಲ್ಲ.

ವಿಧಾನಮಂಡಲ ಮತ್ತು ಸಂಸತ್ ಸದಸ್ಯರುಗಳಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ವಾಹನವನ್ನು ಜಿಲ್ಲಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಚುನಾವಣಾ ಪ್ರಚಾರಗಳಿಗೆ ಅಥವಾ ಚುನಾವಣಾ ಸಂಬಂಧದ ಸೇವೆಗಳನ್ನು ನಡೆಸಲು ಸರಕಾರಿ ವಾಹನಗಳನ್ನು ಅವರು ಬಳಸಿದರೆ ಅವುಗಳನ್ನು ತಕ್ಷಣ ವಶಪಡಿಸಿಕೊಳ್ಳಲಾಗುತ್ತದೆ.

ಯಾವುದೇ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ ನೇಮಕಾತಿಯನ್ನು ಈ ಸಮಯದಲ್ಲಿ ಅಂತಿಮಗೊಳಿಸಿ ನೇಮಕಾತಿ ಆಯ್ಕೆಪಟ್ಟಿ ಪ್ರಕಟಗೊಳಿಸಬಾರದು.ಒಟ್ಟಾರೆಯಾಗಿ "ಮತದಾರರ ಮೇಲೆ ಪ್ರಭಾವ" ಬೀರುವಂತಹ ಯಾವುದೇ ಸರಕಾರಿ ಕಾರ್ಯಕ್ರಮ ಅಥವಾ ಯೋಜನೆಯು ನಡೆಯದಂತೆ ನಿರ್ಬಂಧಿಸಲಾಗಿದೆ.

ಪಂಚಾಯತ್ ಚುನಾವಣೆ ನಡೆಸುವ ಮೂಲಕ ಚಿತಾವಣೆಗೆ ಇತಿಶ್ರೀ ಹಾಡುವಂತೆ ಆಯೋಗಕ್ಕೆ ಎಚ್‌.ಕೆ. ಪಾಟೀಲ್ ಪತ್ರ

ಜಿಲ್ಲಾಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಪಡಿತರ ಚೀಟಿ ವಿತರಣೆ, ಗ್ರಾಮೀಣ ಭಾಗಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಸಚಿವರು, ಶಾಸಕರು ಮತ್ತು ಅಧಿಕಾರಿಗಳು ನಡೆಸುವದು ನೀತಿಸಂಹಿತೆಯ ಉಲ್ಲಂಘನೆಯಾಗುತ್ತದೆ.ಯಾವುದೇ ತಾತ್ಕಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಯಾವುದಾದರೂ ತುರ್ತು ಸೇವೆಗೆ ನೇಮಕಾತಿ ಅವಶ್ಯಕವಿದ್ದಲ್ಲಿ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು.

ಯಾವುದೇ ಇಲಾಖೆಯಲ್ಲಿ ಸಾಮಾನ್ಯ ಮುಂಬಡ್ತಿಯನ್ನು ನೀಡಲು ಬಾಧಕ ವಿರುವುದಿಲ್ಲ. ಚುನಾವಣೆಗಳಿಗೆ ನಿಯೋಜಿಸಿದ ಯಾವುದೇ ಸಿಬ್ಬಂದಿಯ ವರ್ಗಾವಣೆಯನ್ನು ಮಾಡುವಂತಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವ  ಅವಧಿಯಲ್ಲಿ "ಜನಸ್ಪಂದನ ಸಭೆ" ನಡೆಸುವಂತಿಲ್ಲ.ಭೂ ನ್ಯಾಯ ಮಂಡಳಿ ಸಮಿತಿ ಸಭೆಗಳನ್ನು (ಟ್ರಿಬ್ಯೂನಲ್) ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಸುವಂತಿಲ್ಲ. ಮಂತ್ರಿಗಳು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ಮತ್ತು ಇತರ ಸಭೆಗಳನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಸುವಂತಿಲ್ಲ.

ಪಂಚಾಯಿತಿಗಳು ಚುನಾವಣಾ ಪೂರ್ವದಲ್ಲಿ ಪ್ರಾರಂಭಿಸಿರುವ, ಜಾರಿಯಲ್ಲಿರುವ ಕಾಮಗಾರಿಗಳ ಸಂಬಂಧ ಪಂಚಾಯಿತಿಯು ಹಣವನ್ನು ಪಾವತಿ ಮಾಡಲು ನೀತಿ ಸಂಹಿತೆ ಅಡ್ಡಿ ಇರುವುದಿಲ್ಲ. ಆದರೆ ಪಂಚಾಯಿತಿಗಳು ಯಾವುದೇ ಹೊಸ ಕಾಮಗಾರಿಗಳನ್ನು ನಿರ್ಧರಿಸಲಾಗಿದೆ ಎಂಬ ಕಾರಣ ನೀಡಿ ಪ್ರಾರಂಭಿಸುವಂತಿಲ್ಲ.

ಗ್ರಾಮಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಹಾಗೂ ಎಪಿಎಂಸಿ ಅಧ್ಯಕ್ಷರಿಗೆ ಒದಗಿಸಲಾಗಿರುವ ಸರಕಾರಿ ವಾಹನಗಳನ್ನು ಚುನಾವಣೆ ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿಗಳ ವಶದಲ್ಲಿರತಕ್ಕದ್ದು. ಗ್ರಾಮೀಣ ಪ್ರದೇಶದಲ್ಲಿ ಮಂತ್ರಿಗಳು  ಅಥವಾ ಶಾಸಕರು ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಸಂಬಂಧ ಚುನಾವಣೆ ನಡೆಯುವ ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಪೋಸ್ಟರ್ ಗಳು, ಬ್ಯಾನರ್‍ಗಳು ಇರದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಬೇಕು.ಸರಕಾರಿ ವಾಹನಗಳು ದುರುಪಯೋಗವಾಗದಂತೆ, ತಾಲ್ಲೂಕು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ, ತಾಲೂಕಾ ಮಟ್ಟದ ಅಧಿಕಾರಿಗಳು, ಸರ್ಕಾರಿ ಮತ್ತು ಅರೆಸರ್ಕಾರಿ ಕಚೇರಿ, ಬೋರ್ಡ್‍ಗಳು, ಎ.ಪಿ.ಎಂ.ಸಿ ಮುಂತಾದ ಕಚೇರಿ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸದಾಚಾರ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವು ಜಿಲ್ಲಾಧಿಕಾರಿಗಳಿಗಿದ್ದು ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

Trending News