ಬೆಂಗಳೂರು: ನಿನ್ನೆ ಬೆಳಿಗ್ಗೆಯಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ.ಕೆ. ಶಿವಕುಮಾರ್ ನಿನ್ನೆ ರಾತ್ರಿ ಶೇಷಾದ್ರಿಪುರಂ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ(ಸೆ.18) ರಂದು ಬೆಳಿಗ್ಗೆ ಕನಕಪುರದಿಂದ ರಾಮನಗರಕ್ಕೆ ಬರುವಾಗ ದಾರಿಯಲ್ಲಿ ತಿಂದ ಆಹಾರದಿಂದಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಫುಡ್ ಪಾಯ್ಸನ್ ಆಗಿತ್ತು, ಡೀಹೈಡ್ರೇಶನ್ ನಿಂದ ಬಳಲಿದ್ದ ಅವರನ್ನು ರಾಮನಗರ ನಿವಾಸದಲ್ಲಿಯೇ ವೈದ್ಯರು ಪರೀಕ್ಷಿಸಿ ಉಪಚಾರ ಮಾಡಿದ್ದರು. ಸಂಜೆ ವೇಳೆಗೆ ಸ್ವಲ್ಪ ಚೇತರಿಸಿಕೊಂಡವರಂತೆ ಕಂಡ ಡಿ.ಕೆ.ಶಿವಕುಮಾರ್ ನಂತರ ಬೆಂಗಳೂರಿನ ನಿವಾಸಕ್ಕೆ ಬಂದರು. ಬಳಿಕ ವೈದ್ಯರು ಸಚಿವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದ್ರೂ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲದ ಕಾರಣ ವೈದ್ಯರ ಸಲಹೆ ಮೇರೆಗೆ ಶೇಷಾದ್ರಿಪುರಂ ಅಪೋಲೊ ಆಸ್ಪತ್ರೆಗೆ ಡಿಕೆಶಿ ಅವರನ್ನು ದಾಖಲಿಸಲಾಗಿದೆ.
ಡಿ.ಕೆ. ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳಿಂದ ಎಫ್‌ಐಆರ್ ದಾಖಲು
ನಮಗೆ ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ:
ಇನ್ನು ನಿನ್ನೆಯಷ್ಟೇ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಎಫ್‌ಐಆರ್ ದಾಖಲಿಸಿದೆ. ವಿಚಾರಣೆಗೆ ಹಾಜರಾಗುವಂತೆ ಕೆಲವೇ ದಿನಗಳಲ್ಲಿ ಅವರಿಗೆ ನೊಟೀಸ್ ಸಹ ಬರಬಹುದು. ಆಸ್ಪತ್ರೆಗೆ ತೆರಳುವ ಮುನ್ನ ನೋಟೀಸ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ ಸಹೋದರ ಡಿ.ಕೆ. ಸುರೇಶ್, ನಮಗೆ ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ. ಎಲ್ಲವೂ ಮಾದ್ಯಮದಲ್ಲಿ ಬಂದಿರೋದಷ್ಟೇ. ಡಿಕೆಶಿ ಈಗ ಸ್ವಲ್ಪ ಚೇತರಿಕೆ ಆಗುತ್ತಿದ್ದಾರೆ. ನನಗಾಗಲಿ, ನನ್ನ ಅಣ್ಣನಿಗಾಗಲಿ ಯಾವುದೇ ನೋಟಿಸ್ ಬಂದಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಇನ್ನು ಮೂರು ದಿನಗಳ ಕಾಲ ಅಪೋಲೋ ಆಸ್ಪತ್ರೆಯಲ್ಲೇ ಉಳಿಯಲಿದ್ದಾರೆ. ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ. ಫುಡ್ ಪಾಯ್ಸನ್ ಆಗಿದೆ ಅಷ್ಟೆ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.