ಉತ್ತರ ಕರ್ನಾಟಕದ ಅಭಿವೃದ್ಧಿ ನನ್ನ ಜವಾಬ್ದಾರಿ: ಸಿಎಂ ಕುಮಾರಸ್ವಾಮಿ

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡಲು ಹೊರಟಿದ್ದೆ. ಆದರೆ ನಂತರ ಬಂದ ಸರ್ಕಾರಗಳು ಅದಕ್ಕೆ ಆ ವಿಚಾರವಾಗಿ ಚಿಂತನೆ ನಡೆಸಲಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

Last Updated : Jul 31, 2018, 06:44 PM IST
ಉತ್ತರ ಕರ್ನಾಟಕದ ಅಭಿವೃದ್ಧಿ ನನ್ನ ಜವಾಬ್ದಾರಿ: ಸಿಎಂ ಕುಮಾರಸ್ವಾಮಿ title=

ಬೆಂಗಳೂರು: ಉತ್ತರ ಕರ್ನಾಟಕವನ್ನು ನಾನೆಂದೂ ನಿರ್ಲಕ್ಷ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನನ್ನ ಜವಾಬ್ದಾರಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಉತ್ತರ ಕರ್ನಾಟಕಕ್ಕೇ ಅನ್ಯಾಯವಾಗಿದೆ, ರೈತರ ಬೆಳೆಗಳಿಗೆ ನಿಗದಿತ ಬೆಲೆ ಸಿಗುತ್ತಿಲ್ಲ ಎಂದು ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿರುವ ಹೋರಾಟಗಾರರ ನಿಯೋಗದೊಂದಿಗೆ ಮಂಗಳವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, "ನಾನು ಈ ಹಿಂದೆ 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದ ಗ್ರಾಮ ವಾಸ್ತವ್ಯದಲ್ಲಿ 35ಕ್ಕೂ ಹೆಚ್ಚು ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. 450 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿ, ಅಧಿವೇಶನ ನಡೆಸಿದ್ದೇನೆ. ಅಷ್ಟೇ ಅಲ್ಲ, ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡಲು ಹೊರಟಿದ್ದೆ. ಆದರೆ ನಂತರ ಬಂದ ಸರ್ಕಾರಗಳು ಅದಕ್ಕೆ ಆ ವಿಚಾರವಾಗಿ ಚಿಂತನೆ ನಡೆಸಲಿಲ್ಲ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದಿಲ್ಲ. ಆದರೂ ಉತ್ತರ-ದಕ್ಷಿಣ ಎಂಬ ಭೇದ-ಭಾವ ಮಾಡದೆ ಕಡಿಮೆ ಸ್ಥಾನಗಳನ್ನು ಗಳಿಸಿದರೂ ಕಷ್ಟಪಟ್ಟು ಸಾಲ ಮನ್ನಾ ಮಾಡಿದ್ದೇನೆ. ಅಲ್ಲದೇ ಹಿಂದಿನ ಸರ್ಕಾರದ 4000 ಕೋಟಿ ರೂ. ರೈತರ ಸಾಲ ಮನ್ನಾ ನಾನೇ ಮಾಡಬೇಕಿದೆ. ಅಲ್ಲದೆ, ರೈತರಿಗೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವನಿದ್ದೇನೆ. ನಾನೆಂದೂ ರೈತರನ್ನು ಬೈದಿಲ್ಲ. ಚುನಾವಣೆ ಸಮಯದಲ್ಲಿ ನನ್ನನ್ನು ಏಕೆ ಮರೆತಿರಿ ಎಂದಷ್ಟೇ ಕೇಳಿದ್ದೇನೆ. ಆದರೆ ಇದನ್ನುತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಈ ಬಗ್ಗೆ ಮತ್ತೊಮ್ಮೆ ಆಲೋಚಿಸಿ ಎಂದು ಕುಮಾರಸ್ವಾಮಿ ಹೇಳಿದರು. 

Trending News