ಎಲ್ಲ ರೈತರು ನಷ್ಟದ ಬೆಳೆ ಬೆಳೆದು ನೊಂದುಕೊಳ್ಳುವ ಬದಲು ಲಾಭದಾಯ ಬೆಳೆ ಬೆಳೆಯುವತ್ತ ಚಿಂತನೆ ನಡೆಸಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಕೊರಟಗೆರೆ ಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ಮಂಡಳಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಇಂದು ಪರಿಶಿಷ್ಟ ಜಾತಿ ಮತ್ತು ಪಂಗಡದ 75 ರೈತರಿಗೆ ಪಂಪ್ಸೆಟ್ಗಳನ್ನು ವಿತರಿಸಲಾಗಿದೆ.
ಕಳೆದ 40 ವರ್ಷದಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರಿಶಿಷ್ಟ ವರ್ಗದವರ ಕಲ್ಯಾಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಅದರ ಭಾಗವಾಗಿ ರಾಜ್ಯ ಸರಕಾರ ಗಂಗಾ ಕಲ್ಯಾಣ ಯೋಜನೆ ತಂದು ಎಸ್ಸಿ, ಎಸ್ಟಿ ರೈತರ ಸಹಾಯಕ್ಕಾಗಿ ನಿಂತಿದೆ. ಇಂದು ಈ ರೈತರಿಗೆ ತಲಾ ನಾಲ್ಕು ಲಕ್ಷ ಮೊತ್ತದ ಪಂಪ್ ಸೆಟ್ ಹಾಗೂ ಪೂರಕ ಸಾಮಾಗ್ರಿ ನೀಡಿದೆ. ಇದರಲ್ಲಿ ಮೂರುವರೆ ಲಕ್ಷ ರೂ. ಸರಕಾರ ಸಬ್ಸಿಡಿ ದರದಲ್ಲಿ ನೀಡಲಿದೆ. ಉಳಿದ ಐವತ್ತು ಸಾವಿರ ಹಣವನ್ನು ಮಾತ್ರ ರೈತ ತುಂಬಬೇಕಿದೆ ಎಂದರು.
ತುಮಕೂರಿನ ರೈತರಿಗೆ ಬೆಂಗಳೂರು ಸಮೀಪವಿರುವುದರಿಂದ ಮಾರುಕಟ್ಟೆ ಸಮಸ್ಯೆಯೂ ಇರುವುದಿಲ್ಲ. ರೈತರು ಲಾಭದಾಯದ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇನ್ನು ಈಗ ವಿತರಿಸಿರುವ ಪಂಪ್ಸೆಟ್ಗಳು ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಸೂಚಿಸಿದರು. ಐದು ವರ್ಷದಲ್ಲಿ ನೀಡಿರುವ ಪಂಪ್ಸೆಟ್ಗಳ ಬಳಕೆಯ ಮಾಹಿತಿ ತರಿಸಿಕೊಳ್ಳಿ. ದುರುಪಯೋಗವಾಗಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಪರಮೇಶ್ವರ್ ಅಧಿಕಾರಿಗಳಿಗೆ ತಿಳಿಸಿದರು.
ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಏಳ್ಗೆಗಾಗಿ ವರ್ಷಕ್ಕೆ 27 ಕೋಟಿ ರೂ.ಗಳಂತೆ ಐದು ವರ್ಷಕ್ಕೆ 82 ಸಾವಿರ ಕೋಟಿ ರೂ. ಗಳನ್ನು ತೆಗೆದಿಟ್ಟಿದೆ ಎಂದ ಪರಮೇಶ್ವರ್ ಈ ಮೊತ್ತ ಸಂಪೂರ್ಣ ಸದ್ಬಳಕೆಯಾಗಬೇಕು ಎಂಬುದೇ ಸರಕಾರದ ಉದ್ದೇಶ. ಈ ಹಣದಲ್ಲಿಯೇ ನಿಮಗೆ ಎಲ್ಲ ಸಲವತ್ತು ನೀಡಲಾಗುತ್ತಿದೆ ಎಂದರು.