ಎಲ್ಲಾ ಕ್ಷೇತ್ರಗಳಿಗೂ ತಂತ್ರಜ್ಞಾನ ವಿಸ್ತರಣೆ ಎಂದ ಡಿಸಿಎಂ ಅಶ್ವಥನಾರಾಯಣ್

ಕೋವಿಡ್-19 ಸಂಕಷ್ಟ ಕಾಲದಲ್ಲಿ ದೇಶದ 130 ಕೋಟಿ ಜನರನ್ನು ಕೆಲವೇ ಸೆಕೆಂಡುಗಳಲ್ಲಿ ಕೇಂದ್ರ, ರಾಜ್ಯ ಸರಕಾರಗಳು ತಲುಪಿದವು. ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಜಮೆ ಆಯಿತು.

Last Updated : Aug 26, 2020, 12:50 PM IST
ಎಲ್ಲಾ ಕ್ಷೇತ್ರಗಳಿಗೂ ತಂತ್ರಜ್ಞಾನ ವಿಸ್ತರಣೆ ಎಂದ ಡಿಸಿಎಂ ಅಶ್ವಥನಾರಾಯಣ್ title=

ಬೆಂಗಳೂರು: ರಾಜ್ಯದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ತಂತ್ರಜ್ಞಾನವನ್ನು ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಲು ಸರಕಾರ ಸ್ಪಷ್ಟ ಗುರಿಯೊಂದಿಗೆ ಸಾಗುತ್ತಿದೆ ಎಂದು ಐಟಿ-ಬಿಟಿ ಮತ್ತು ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana) ಹೇಳಿದರು.

'ಬೆಂಗಳೂರು ಟೆಕ್‌ ಸಮಿಟ್‌' (ಬಿಟಿಎಸ್) ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರತಿನಿಧಿಗಳ ಜತೆ ವರ್ಚುವಲ್‌ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್-19 (Covid 19) ಸಂಕಷ್ಟ ಕಾಲದಲ್ಲಿ ದೇಶದ 130 ಕೋಟಿ ಜನರನ್ನು ಕೆಲವೇ ಸೆಕೆಂಡುಗಳಲ್ಲಿ ಕೇಂದ್ರ, ರಾಜ್ಯ ಸರಕಾರಗಳು ತಲುಪಿದವು. ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಜಮೆ ಆಯಿತು. ಎಲ್ಲವೂ ವೇಗವಾಗಿ, ಪಾರದರ್ಶಕವಾಗಿ ನಡೆಯಿತು. ಕಳೆದ ಎರಡು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಫೇಸ್ ಲೆಸ್ ತಪಾಸಣೆಗೂ ಚಾಲನೆ ನೀಡಲಾಗಿದೆ. ತಂತ್ರಜ್ಞಾನದ ಶಕ್ತಿ ಏನೆಂಬುದು ಇದರಿಂದ ನಮಗೆ ವೇದ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕೋವಿಡ್ ಬಗ್ಗೆ ಭಯ ಬೇಡ, ಅರಿವು ಮೂಡಿಸುವ ಬಗ್ಗೆ ತಜ್ಞರ ಅಭಿಪ್ರಾಯ ಏನು ಗೊತ್ತಾ?

ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ರಾಜ್ಯವೂ ಮುಂಚೂಣಿಯಲ್ಲಿದೆ. ಅದು ಮತ್ತಷ್ಟು ಗಟ್ಟಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಟೆಕ್‌ ಸಮಿಟ್‌ ದೊಡ್ಡ ಕಾಣಿಕೆ ನೀಡಬೇಕು ಎಂಬುದು ಸರಕಾರದ ಅಭಿಲಾಶೆ. ನವೆಂಬರ್ 19ರಿಂದ 21ರವರೆಗೆ ಬಿಟಿಎಸ್ ನಡೆಸಲು ತೀರ್ಮಾನಿಸಿದ್ದು ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು ಎಂದರು.

'ಈಗಾಗಲೇ 220 ಶತಕೋಟಿ ಡಾಲರ್‌ ಜಿಡಿಪಿಯನ್ನು ಹೊಂದಿರುವ ರಾಜ್ಯವು, 500 ಶತಕೋಟಿ ಡಾಲರ್‌ ಜಿಡಿಪಿಯತ್ತ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆ ಬಹಳ ಮಹತ್ವದ್ದು' ಎಂದು ಡಾ. ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ತಂತ್ರಜ್ಞಾನಾಧಾರಿತ ಸುಧಾರಣೆ:
ರಾಜ್ಯದಲ್ಲಿ ತಂತ್ರಜ್ಞಾನಾಧಾರಿತ ಸುಧಾರಣೆಗಳನ್ನು ತರುವುದು ಇವತ್ತಿನ ಅಗತ್ಯವಾಗಿದೆ. ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಇದು ದೇಶಾದ್ಯಂತ ಆಗುತ್ತಿದೆ. ಕರ್ನಾಟಕವೂ ಮುಂಚೂಣಿಯಲ್ಲಿದೆ. ಕರ್ನಾಟಕವು ತಂತ್ರಜ್ಞಾನದ ಸಮೃದ್ಧ ನೆಲವಾಗಿರುವ ಕಾರಣ ಈ ಗುರಿಯನ್ನು ಸಾಧಿಸುವುದು ಸುಲಭವೆಂದು ನನ್ನ ಭಾವನೆ ಎಂದ ಡಿಸಿಎಂ, ರಾಜ್ಯದ ಪ್ರತಿಮೂಲೆಯನ್ನು ಟೆಕ್ನಾಲಜಿ ತಲುಪಬೇಕು ಎಂದು ಕರೆ ನೀಡಿದರು.

ಟೆಕ್ನಾಲಜಿ (Technology) ಎಂಬುದು ಇಂದು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ಹಳ್ಳಿಯ ಮೂಲೆ ಮೂಲೆಗೂ ಅದು ತಲುಪಬೇಕಿದೆ. ಮುಖ್ಯವಾಗಿ ಕೃಷಿ, ಸೇವಾ ವಲಯ ಕೇತ್ರಗಳಲ್ಲಿ ತಂತ್ರಜ್ಞಾನವೂ ದೊಡ್ಡ ಅದ್ಭುತಗಳನ್ನೇ ಸೃಷ್ಟಿ ಮಾಡುತ್ತಿದೆ. ಭವಿಷ್ಯದಲ್ಲಿಯೂ ಇದನ್ನೇ ಅತ್ಯಂತ ಪ್ರಮುಖ ವಿಷಯವಾಗಿ ಸರಕಾರವೂ ಆದ್ಯತೆಯ ಮೇರೆಗೆ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ರಾಜ್ಯದ ತಂತ್ರಜ್ಞಾನ ದಿಗ್ಗಜರೆಲ್ಲ ಸರಕಾರಕ್ಕೆ ಹೆಗಲು ಕೊಡಬೇಕಿದೆ ಎಂದು ಉಪ ಮುಖ್ಯಮಂತ್ರಿ ವಿನಂತಿ ಮಾಡಿದರು.

ಇನ್ನು ಮುಂದೆ ಪಠ್ಯದಲ್ಲೇ ಕೌಶಲ್ಯ ತರಬೇತಿ: ಡಿಸಿಎಂ ಅಶ್ವಥನಾರಾಯಣ್

ಸ್ಪಷ್ಟ ಗುರಿ, ಕರಾರುವಕ್ಕಾದ ಕಾರ್ಯಕ್ರಮ:
ನಮ್ಮ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಈಗಾಗಲೇ ತಂತ್ರಜ್ಞಾನ ಕ್ಷೇತ್ರಕ್ಕೆ ಪೂರಕವಾದ ಅನೇಕ ಸುಧಾರಣೆ ಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಜತೆಗೆ, ಕೈಗಾರಿಕೆ- ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ಶಕ್ತಿ ತುಂಬುವ ಅನೇಕ ಮಹತ್ವದ ಸುಧಾರಣಾ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಇದರಲ್ಲಿ ಭೂ ಸುಧಾರಣಾ ಕಾಯ್ದೆ ತುಂಬಾ ಪ್ರಮುಖವಾದದ್ದು. ಸರಕಾರವು ಸ್ಪಷ್ಟ ಗುರಿಯೊಂದಿಗೆ ಕರಾರುವಕ್ಕಾದ ದೀರ್ಘಕಾಲೀನ ಪ್ರಭಾವ ಬೀರುವ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

 ಬಿಟಿ ಸ್ಟಾರ್ಟ್ ಅಪ್ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಐಟಿ ಸ್ಟಾರ್ಟ್ ಅಪ್ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಸ್ಟಾರ್ಟ್ ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಐಟಿಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಬೆಂಗಳೂರು ಟೆಕ್‌ ಸಮಿಟ್‌ ಸಿಇಒ ಪಿ.ವಿ. ಮೋಹನ್‌ ರಾಮ್‌, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಮುಂತಾದವರು ಈ ವರ್ಚುವಲ್‌ ಸಂವಾದದಲ್ಲಿ ಭಾಗಿಯಾಗಿದ್ದರು.

Trending News