ಮುಂಬೈ ಮೀನು ಮಾರುಕಟ್ಟೆಯಿಂದ ವಕ್ಕರಿಸಿದ ಕೊರೊನಾ

ಬಳ್ಳಾರಿ ನಗರದ 6, ಬಳ್ಳಾರಿ ತಾಲ್ಲೂಕಿನ ರೂಪನಗುಡಿಯ 3 ಮತ್ತು ಚಾಗನೂರಿನ ಇಬ್ಬರಿಗೆ ಸೋಂಕು ತಗುಲಿದೆ. 

Last Updated : May 21, 2020, 03:05 PM IST
ಮುಂಬೈ ಮೀನು ಮಾರುಕಟ್ಟೆಯಿಂದ ವಕ್ಕರಿಸಿದ ಕೊರೊನಾ title=
File Image

ಬಳ್ಳಾರಿ: ಮುಂಬೈ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ವಾಪಸಾಗಿ ಕ್ವಾರಂಟೈನ್ (Quarantine) ನಲ್ಲಿದ್ದ ಜಿಲ್ಲೆಯ 11 ಮಂದಿಗೆ ಕೊರೊನಾವೈರಸ್ (Coronavirus)  ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 30ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಮೂರು ಕುಟುಂಬಗಳ ಸೋಂಕಿತರಲ್ಲಿ ಏಳು ಮಹಿಳೆಯರು, ಮೂವರು ಪುರುಷರು ಮತ್ತು ಒಬ್ಬ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಮಹಿಳೆಯರ ಪೈಕಿ ಒಬ್ಬರು ಎಂಟು ತಿಂಗಳ ಗರ್ಭಿಣಿ ಮತ್ತು ಒಬ್ಬ ಬಾಣಂತಿ ಇದ್ದಾರೆ. ಅವರೆಲ್ಲರನ್ನು ಬುಧವಾರ ರಾತ್ರಿಯೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬಳ್ಳಾರಿ ನಗರದ 6, ಬಳ್ಳಾರಿ ತಾಲ್ಲೂಕಿನ ರೂಪನಗುಡಿಯ 3 ಮತ್ತು ಚಾಗನೂರಿನ ಇಬ್ಬರಿಗೆ ಸೋಂಕು ತಗುಲಿದೆ. ಬಾಣಂತಿಯ ಒಂಭತ್ತು ತಿಂಗಳ ಹಸುಗೂಸು ಅಜ್ಜ-ಅಜ್ಜಿ ಬಳಿ ಇದ್ದು, ಅದರ ಗಂಟಲ ದ್ರವದ ಮಾದರಿಯನ್ನು ತಜ್ಞರ ನೆರವಿನೊಂದಿಗೆ ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದರು. 

ಮೇ 6 ರಂದು ಅನಂತಪುರದ ಜಿಲ್ಲಾಧಿಕಾರಿ ನೀಡಿದ ಮಾಹಿತಿ ಅನ್ವಯ  65 ಜನರನ್ನು ಗುಂತಕಲ್ ರೈಲು ನಿಲ್ದಾಣದಿಂದ ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು. ಹೀಗಾಗಿ ಅವರ ಊರುಗಳಲ್ಲಿ ಕಂಟೈನ್ಮೆಂಟ್ ಪ್ರದೇಶಗಳನ್ನು ಘೋಷಿಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

187 ಮಂದಿಗೆ ಕ್ವಾರಂಟೈನ್: 
11 ಸೋಂಕಿತರೊಂದಿಗೆ ಮೊದಲ ಹಂತದ ಸಂಪರ್ಕ ಹೊಂದಿದ್ದ 49 ಮಂದಿ ಸೇರಿದಂತೆ 187 ಮಂದಿಯನ್ನು ಕ್ವಾರಂಟೈನ್ (Quarantine) ಕೇಂದ್ರಗಳಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ವಿವರಿಸಿದರು. 

ಜಿಲ್ಲೆಯಲ್ಲಿ 2817 ಜನರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿದ್ದಾರೆ. ಅವರಲ್ಲಿ ಹೈ ರಿಸ್ಕ್-4 ಕ್ವಾರಂಟೈನ್‍ಕೇಂದ್ರ, ಮಧ್ಯಮ ರಿಸ್ಕ್-14 ಕ್ವಾರಂಟೈನ್ ಕೇಂದ್ರ, ಲೋ ರಿಸ್ಕ್-4 ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ 5 ಹೋಟಲ್‍ಗಳಲ್ಲಿ ಹಣ ಪಾವತಿಸಿ ಕ್ವಾರಂಟೈನ್‍ನಲ್ಲಿದ್ದಾರೆ. 

ಕ್ವಾರಂಟೈನ್‍ನಲ್ಲಿದ್ದ ಇದುವರೆಗೆ 747 ಜನರು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರು ವಿವರಿಸಿದರು. ಜಿಲ್ಲೆಯಲ್ಲಿ ಪಿಪಿಇ ಕಿಟ್‍ಗಳ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕ್ವಾರಂಟೈನ್ ಕೇಂದ್ರಗಳಲ್ಲಿ ಬಿಗಿ ಭದ್ರತೆ:
ಕ್ವಾರಂಟೈನ್ ಕೇಂದ್ರಗಳಿಂದ ಕೆಲವರು ಪರಾರಿಯಾಗಿದ್ದ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಎಲ್ಲ ಕ್ವಾರಂಟೈನ್ ಕೇಂದ್ರಗಳಿಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ವಿವರಿಸಿದರು.

ಜನರು ಸಾಮಾಜಿಕ ಅಂತರ ಪಾಲಿಸುವಿಕೆ,ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್‍ಗಳಿಂದ ಆಗಾಗ್ಗೆ ಕೈಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
 

Trending News