ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ : ತುತ್ತು ಕೂಳಿಗಾಗಿ ಪರದಾಡಿದ 20 ಕುಟುಂಬ..!

ಕೊರೊನಾ ಭೀತಿಗೆ ಇಡೀ ಜಗತ್ತೇ ಹೈರಾಣಾಗಿ ಹೋಗಿದೆ, ಈಗ ಈ ಮಹಾಮಾರಿ ರೋಗ ರಾಜ್ಯಕ್ಕೂ ಕಾಲಿರಿಸಿದ ಹಿನ್ನಲೆಯಲ್ಲಿ ಬಡವರು ಈಗ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

Last Updated : Mar 24, 2020, 06:39 PM IST
ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ : ತುತ್ತು ಕೂಳಿಗಾಗಿ ಪರದಾಡಿದ 20 ಕುಟುಂಬ..! title=

ಬೆಂಗಳೂರು: ಕೊರೊನಾ ಭೀತಿಗೆ ಇಡೀ ಜಗತ್ತೇ ಹೈರಾಣಾಗಿ ಹೋಗಿದೆ, ಈಗ ಈ ಮಹಾಮಾರಿ ರೋಗ ರಾಜ್ಯಕ್ಕೂ ಕಾಲಿರಿಸಿದ ಹಿನ್ನಲೆಯಲ್ಲಿ ಬಡವರು ಈಗ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಡೀ ರಾಜ್ಯವೇ ಈಗ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಈಗ ದಿನದ ತುತ್ತು ಕೂಳು ಕೂಡ ಸಂಗ್ರಹಿಸುವುದು ಜನ ಸಾಮಾನ್ಯನಿಗೆ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಕೇವಲ ಸರ್ಕಾರವನ್ನೇ ನೆಚ್ಚಿ ಕುಳಿತುಕೊಳ್ಳುವ ಬದಲು ಉಳ್ಳವರು ಬಡವರ ಬಗೆಗೆ ಚಿಂತಿಸಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರಾದ ಅಶೋಕ ಚಂದರಗಿ ಮನವಿ ಮಾಡಿದ್ದಾರೆ.

 

ಬೆಳಗಾವಿಯಲ್ಲಿ ಲಾಕ್ ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ಸೂರು ಇಲ್ಲದವರ ಪರಿಸ್ಥಿತಿ ವಿವರಿಸುತ್ತಾ ಅವರಿಗೆ ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 'ಕೊರೋನಾ ಭೀತಿಯ ಮಧ್ಯೆ ಉಳ್ಳವರು ಇಂಥವರ ತುತ್ತಿನ ಚೀಲಗಳ ಬಗೆಗೂ ತುಸು ಚಿಂತಿಸಬೇಕು: ಸಹಾಯ ಹಸ್ತವನ್ನು ಚಾಚಬೇಕು: ಇದು ಕೇವಲ ಸರಕಾರದ ಕರ್ತವ್ಯವಾಗಿರದೇ ನಮ್ಮ ಧರ್ಮವೂ ಹೌದು' ಎನ್ನುತ್ತಾರೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಸೂರಿಲ್ಲದ ಕುಟುಂಬಗಳ ಪರಿಸ್ಥಿತಿಯನ್ನು ಅಶೋಕ್ ಚಂದರಗಿ ವಿವರಿಸಿದ್ದು ಹೀಗೆ. "ಇಂದು ಬೆಳಗಾವಿಯಲ್ಲಿ ಲಾಕ್ ಔಟ್, ಎಲ್ಲೆಲ್ಲೂ ಪೋಲೀಸರೇ. ಕರ್ಫ್ಯೂ ಮಾದರಿಯೇ ಸರಿ. ಕಾರ್ ತೆಗೆದುಕೊಂಡು ಶನಿವಾರ ಖೂಟದ ನನ್ನ ಬ್ಯುಜಿನೆಸ್ ಕಚೇರಿ ತಲುಪಲು ಸಾಕು ಬೇಕಾಯಿತು. ಅಷ್ಟರಲ್ಲಿ ಟಿವ್ಹಿ ಗಳಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಬೆಳಗಾವಿಯ ಕಿಲ್ಲಾ ಕೆರೆಯ ಬದಿಗೆ ಗುಡಿಸಲು ಹಾಕಿಕೊಂಡು ಬೀಸುಕಲ್ಲು, ಒರಳು ತಯಾರಿಸುವ ರಾಜಸ್ಥಾನ,ಬಿಹಾರ ಮೂಲದ ಇಪ್ಪತ್ತು ಕುಟುಂಬಗಳು 72 ಗಂಟೆಗಳಿಂದ ಉಪವಾಸ ವನವಾಸ ಅನುಭವಿಸುತ್ತಿವೆಯೆಂಬ ಈ ಸುದ್ದಿ ನೋಡಿದ ನನ್ನ ಪರಿಚಯದ ಕುಟುಂಬದವರು ಫೋನ್ ಮಾಡಿದರು. ಈ ಗುಡಿಸಲುವಾಸಿಗಳನ್ನು ನಾನು ಅನೇಕ ಸಲ ಭೆಟ್ಟಿಯಾಗಿದ್ದೇನೆ. ಅವರಿಗೆ ಒಂದು ಸೂರು ಕಲ್ಪಿಸುವ ಬಗ್ಗೆ ಚರ್ಚಿಸಿದ್ದೇನೆ. ಯುಗಾದಿ ಅಮಾವಾಸ್ಯೆ ಪೂಜೆ ಮುಗಿಸಿ ಆಫೀಸ್ ಕೀಲಿ ಹಾಕಿ ಹೊರಬಿದ್ದೆ. ನನಗೆ ಫೋನ್ ಮಾಡಿದ್ದ ಶ್ರೀಮತಿ ಸುವರ್ಣ ದೀಪಕ ಪಾಟೀಲ ದಂಪತಿಗಳು ನನ್ನ ಕಾರಿನಲ್ಲಿ ಅಕ್ಕಿ,ಹಿಟ್ಟು,ಬಿಸ್ಕೀಟ್ ತುಂಬಿದರು. ನೇರವಾಗಿ ಕಿಲ್ಲಾ ಕೆರೆಯ ಬದಿಗೆ ಹೋದೆ.ಹಸಿದು ಹಣ್ಣಾಗಿದ್ದ ಮಹಿಳೆಯರು ಮಕ್ಕಳು ಆಹಾರ ಧಾನ್ಯಕ್ಕಾಗಿ ಮುಗಿಬಿದ್ದರು. ಮಕ್ಕಳು ಬಿಸ್ಕೀಟಿಗಾಗಿ ಕೈಚಾಚಿದ ದೃಶ್ಯ ಕರಳು ಚುರುಕ್ ಎನಿಸದೇ ಇರಲಿಲ್ಲ. ಹಂಚಿದೆ. ಅಷ್ಟರಲ್ಲಿ ನನ್ನಂತೆ ಇನ್ನೂ ಕೆಲ ದಾನಿಗಳು ಅಲ್ಲಿಗೆ ಧಾವಿಸಿ ಬಂದರು.

ಮೊದಲೇ ಕೊರೋನಾ ಭೀತಿ ಆವರಿಸಿದೆ.ಜನರೇ ಇಲ್ಲ.ಈ ಗುಡಿಸಲುವಾಸಿಗಳಿಗೆ ವ್ಯಾಪಾರ ಎಲ್ಲಿ ಬರಬೇಕು? ಇಂಥವರಿಗೆ ಉಚಿತವಾಗಿ ಊಟ ಹಂಚುವ ಕೆಲಸವನ್ನು ಮಾಡುವ ಬಗ್ಗೆ ಮತ್ತು ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಅದನ್ನು ಜಿಲ್ಲಾಡಳಿತ ಆದಷ್ಟು ಬೇಗನೇ ಜಾರಿಗೆ ತರಬೇಕು.ಎಲ್ಲವೂ ಸರಕಾರವೇ ಮಾಡಬೇಕು. ಎಲ್ಲವೂ ಸರಕಾರದ ಕೆಲಸವೇ " ಎನ್ನುವ ಮನೋಭಾವ ಸಲ್ಲದು. ಇಂದಿನ ಸಂದಿಗ್ಧ,ಕಠಿಣ ಸಮಯದಲ್ಲಿ ಸಾಮಾಜಿಕ ಸಂಘಟನೆಗಳು,ಜವಾಬ್ದಾರಿಯುತ ಜನರು ಸ್ವಯಂಸ್ಪೂರ್ತಿಯಿಂದ ಮುಂದೆ ಬರಬೇಕು. ನೆರವಿನ ಹಸ್ತ ಚಾಚುವದು ನಮ್ಮ ಧರ್ಮವಾಗಬೇಕು' ಎಂದು ಚಂದರಗಿ ಮನವಿ ಮಾಡಿದ್ದಾರೆ.

Trending News