ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡನೆಯಾಗಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 11.30ಕ್ಕೆ ಬಜೆಟ್ ಮಂಡಿಸಲಿದ್ದು, 2 ಲಕ್ಷವರೆಗಿನ ರೈತರ ಬೆಳೆ ಸಾಲ ಮನ್ನಾ ಆಗುವುದು ಬಹುತೇಕ ಖಚಿತವೈದೇ. ರಾಜ್ಯದ ಖಜಾನೆಗೆ ಧಕ್ಕೆಯಾಗದಂತೆ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದು, ಅದಕ್ಕೆ ಬೇಕಾಗುವ ಸಂಪನ್ಮೂಲವನ್ನು ಹೇಗೆ ಹೊಂದಿಸುತ್ತಾರೆ ಎಂಬ ಸುಳಿವನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ.
ಕುಮಾರಸ್ವಾಮಿ ಬಜೆಟ್ ಮೇಲಿನ ನಿರೀಕ್ಷೆಗಳು
* ಐದು ಎಕರೆವರೆಗೆ ಜಮೀನು ಹೊಂದಿರುವ ರೈತರ ಸಹಕಾರ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಘೋಷಣೆ ಮಾಡುವ ನಿರೀಕ್ಷೆಯಿದ್ದು, ಗರಿಷ್ಠ 5 ಎಕರೆಯೊಳಗೆ ಭೂ ಒಡೆತನ ಹೊಂದಿರುವವರ ಗರಿಷ್ಠ 2 ಲಕ್ಷವರೆಗಿನ ಸಾಲ ಮಾತ್ರ ಮನ್ನಾ ವ್ಯಾಪ್ತಿಗೆ ಬರುತ್ತವೆ ಎಂಬ ಷರತ್ತು ವಿಧಿಸುವ ಸಾಧ್ಯತೆ ಇದೆ. 2018ರ ಮೇ ಅಂತ್ಯದವರೆಗಿನ ಸಾಲ ಮನ್ನಾ ಆಗುವ ಸಾಧ್ಯತೆ ಇದೆ.
* ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮಾತ್ರ ಇರುವ ಉಚಿತ ಬಸ್ ಪಾಸ್ ಸೌಲಭ್ಯವನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸುವ ನಿರೀಕ್ಷೆ.
* 65 ವರ್ಷ ಮೇಲ್ಪಟ್ಟವರಿಗೆ ವ್ರುದ್ಯಾಪ್ಯ ವೇತನದ ಮೊತ್ತ ಹೆಚ್ಚಳ ಸಾಧ್ಯತೆ.
* ಹೆಣ್ಣು ಮಕ್ಕಳಿಗೆ ಪದವಿ ಮುಗಿಯುವವರೆಗೂ ಉಚಿತ ಶಿಕ್ಷಣದಂತಹ ಜನಪ್ರಿಯ ಘೋಷಣೆ ಸಾಧ್ಯತೆ.
* ಸ್ತ್ರೀ ಶಕ್ತಿ ಸಂಘಗಳಿಗೆ 10 ಲಕ್ಷದವರೆಗೆ ಸಾಲ.
* ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಘೋಷಣೆಯಾಗಿದ್ದ ಭಾಗ್ಯಗಳ ಮುಂದುವರಿಕೆ.
* ಇಸ್ರೇಲ್ ಮಾದರಿ ಕೃಷಿ ಪದ್ಧತಿ ಘೋಷಣೆ ಸಾಧ್ಯತೆ.