ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಸಿಎಂ ಬಾಗಿನ ಅರ್ಪಣೆ

ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬಾಗಿನ ಅರ್ಪಿಸಿದರು. 

Last Updated : Jul 20, 2018, 07:32 PM IST
ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಸಿಎಂ ಬಾಗಿನ ಅರ್ಪಣೆ title=
Pic : Twitter/@CM of Karnataka

ಮೈಸೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಶುಕ್ರವಾರ ವಿವಿಧ ಜಲಾಶಯಗಳಿಗೆ ತೆರಳಿ ಬಾಗಿನ ಅರ್ಪಿಸಿದರು. 

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನಾಡು ಸಮೃದ್ಧಿಯಾಗಿದೆ. ಉತ್ತಮ ಮಳೆ ಹಿನ್ನೆಲೆಯಲ್ಲಿ ವಿದ್ಯುತ್​ ಸಮಸ್ಯೆ ನಿವಾರಣೆಯಾಗಿದೆ. ಕೆಆರ್​ಎಸ್​ ಜಲಾಶಯಕ್ಕೆ ನಾನು 12 ವರ್ಷಗಳ ಬಳಿಕ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ಕಾರಣ ಎಂದು ನುಡಿದರು.

ಬಳಿಕ ಕೃಷ್ಣರಾಜಸಾಗರ ಜಲಾಶಯಕ್ಕೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ನದಿಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್​, ಸಿ.ಎಸ್​. ಪುಟ್ಟರಾಜು, ಜಿ.ಟಿ.ದೇವೇಗೌಡ, ಡಿ.ಸಿ. ತಮ್ಮಣ್ಣ, ಸಾ.ರಾ.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. 

ಅಲ್ಲದೆ, ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಸಚಿವರುಗಳಾದ ಡಿ.ಕೆ. ಶಿವಕುಮಾರ್, ಎನ್.ಮಹೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ಇದಕ್ಕೂ ಮೊದಲು, ಕಾವೇರಿ ಉಗಮಸ್ಥಾನ ತಲಕಾವೇರಿಗೆ ಭೇಟಿ ನೀಡಿ, ಭಗಂಡೇಶ್ವರ ದೇಗುಲಕ್ಕೆ ತೆರಳಿದ ಸಿಎಂ, ಆ ನಂತರ ತಲಕಾವೇರಿಯಲ್ಲಿ ಅಗಸ್ತ್ಯೇಶ್ವರ, ಕಾವೇರಿ ಕುಂಡಿಕೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಡಿಕೇರಿ ಜಿಲ್ಲೆಯ ಭಗಂಡೇಶ್ವರ ಮತ್ತು ತಲಕಾವೇರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.

Trending News