ಯಾವುದೇ ಸಮಸ್ಯೆಯಿಲ್ಲದೆ ಸಚಿವ ಸಂಪುಟ ವಿಸ್ತರಣೆ: ಎಚ್.ಡಿ. ಕುಮಾರಸ್ವಾಮಿ

ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳಿಲ್ಲ. ಸಂಪುಟ ಸೇರ್ಪಡೆಗೊಳ್ಳುವವರ ಹೆಸರು ಇಂದು ಅಥವಾ ನಾಳೆ ಅಂತಿಮಗೊಳ್ಳಲಿದೆ-ಎಚ್ ಡಿಕೆ

Last Updated : May 28, 2018, 04:14 PM IST
ಯಾವುದೇ ಸಮಸ್ಯೆಯಿಲ್ಲದೆ ಸಚಿವ ಸಂಪುಟ ವಿಸ್ತರಣೆ: ಎಚ್.ಡಿ. ಕುಮಾರಸ್ವಾಮಿ title=
ಸಂಗ್ರಹ ಚಿತ್ರ

ನವದೆಹಲಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳಿಲ್ಲ. ಸಂಪುಟ ಸೇರ್ಪಡೆಗೊಳ್ಳುವವರ ಹೆಸರು ಇಂದು ಸಂಜೆ ಅಥವಾ ನಾಳೆಯೊಳಗೆ ಅಂತಿಮಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಡಿ. ಕೆ. ಶಿವಕುಮಾರ್ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳಿಲ್ಲ. ಸಂಪುಟ ಸೇರ್ಪಡೆಗೊಳ್ಳುವವರ ಹೆಸರು ಇಂದು ಸಂಜೆ ಅಥವಾ ನಾಳೆಯೊಳಗೆ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.

ಹಣಕಾಸು ಇಲಾಖೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಿ ಪೈನಲ್ ಮಾಡಲಿದ್ದೇವೆ. ಸರ್ಕಾರಕ್ಕೆ ತೊಂದರೆಯಾಗದ ರೀತಿ ಸಂಪುಟ ರಚನೆ ಮಾಡಲಿದ್ದೇವೆ. ಇಬ್ಬರ ಔದಾರ್ಯದ ಮೂಲಕ ಖಾತೆ ಹಂಚಿಕೆ ನಡೆಯಲಿದೆ ಎಂದರು.

ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಸಮಸ್ಯೆಯಿಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ವೈರಿಗಳಲ್ಲ. ಕಾಂಗ್ರೆಸ್ ನಾಯಕರ ಬೆಂಬಲದ ಮುಲಾಜಿನಲ್ಲಿ ನಾನು ಸರ್ಕಾರ ರಚಿಸಿದ್ದೇನೆ ಎನ್ನುವುದು ನನ್ನ ಮಾತು. ಒಂದು ಅರ್ಥದಲ್ಲಿ ನಾನು ಅದನ್ನು ಹೇಳಿದೆ. ಹಾಗಂದ ಮಾತ್ರಕ್ಕೆ ನಾನು ನಾಡಿನ ಜನರಿಗೆ ಅಗೌರವ ತೋರಿಸಿದಂತೆ ಆಗುವುದಿಲ್ಲ. ಆದರೆ ನಮಗಾಗದವರು ಅದನ್ನು ಅಪಪ್ರಚಾರ ಮಾಡುತ್ತಿದ್ದಾರೆ.  ಈ ಮಾತು ಎಲ್ಲರಿಗೂ ಅರ್ಥವಾಗಿದೆ. ಮೈತ್ರಿ ಸರ್ಕಾರ ಕುರಿತಂತೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Trending News