ಬೆಂಗಳೂರು: ಕಾಂಗ್ರೆಸ್ ಪಕ್ಷ ರೈತರಿಗೆ ನೀಡಿರುವ ಕಾರ್ಯಕ್ರಮಗಳನ್ನು ಸಹಿಸಲಾಗದೇ ನಮ್ಮ ವಿರುದ್ಧ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಬಿಜೆಪಿಯನ್ನು ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಆವರು, ರಾಜಕೀಯ ಇತಿಹಾಸದಲ್ಲಿ ಸ್ಮರಿಸಿಕೊಳ್ಳುವ ಕೆಲವರ ಪೈಕಿ ಇಂದಿರಾ ಗಾಂಧಿ ಅವರು ಒಬ್ಬರು. ಅಧಿಕಾರ ನಡೆಸಿದ್ದರೂ ಕೆಲವರೂ ತಮ್ಮ ಛಾಪು ಮೂಡಿಸಿಲ್ಲ. ಆದರೆ ಇಂದಿರಾ ಗಾಂಧಿ ಅವರು ತಮ್ಮ ಅಧಿಕಾರದ ಮೂಲಕ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.
ಅಂದಿನ ಕಾಲದಲ್ಲಿ ಊಟಕ್ಕೂ ಕಷ್ಟವಿತ್ತು. ಆ ಸಂದರ್ಭದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಆಹಾರ ಉತ್ಪಾದನೆಗೆ ಶಾಶ್ವತ ಪರಿಹಾರ ನೀಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡವರು ಸಹ ಖಾತೆ ತೆಗೆದು, ಸಾಲ ಪಡೆಯುವ ಶಕ್ತಿಯನ್ನು ಇಂದಿರಾ ಗಾಂಧಿ ಅವರು ಕೊಟ್ಟಿದ್ದರು ಎಂದು ಸ್ಮರಿಸಿದರು.
ಬಿಜೆಪಿ ಇತಿಹಾಸ ಮರೆಮಾಚುವ ಕೆಲಸ ಮಾಡುತ್ತಿದೆ:
ಬಿಜೆಪಿ ಈ ಸಮಾಜಕ್ಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಬದಲಿಗೆ ಕಾಂಗ್ರೆಸ್ ಕೊಟ್ಟ ಯೋಜನೆಯನ್ನು ಮರೆಸುವ, ಇತಿಹಾಸ ಮರೆಮಾಚುವ ಕೆಲಸವನ್ನು ಬಿಜೆಪಿ ಅವರು ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ರೈತರನ್ನು ಎತ್ತುಕಟ್ಟುವ ಕೆಲಸ:
ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮಗಳು ಮುಂದುವರೆಯಬೇಕು ಎಂಬ ಕಾರಣಕ್ಕಾಗಿ ಸಮ್ಮಿಶ್ರ ಸರಕಾರ ರಚಿಸಿದ್ದೇವೆ. ಹಿಂದಿನ ಸಿದ್ದರಾಮಯ್ಯ ಅವರ ಸರಕಾರ ರೈತರ ಪರ ಸಾಕಷ್ಟು ಕಾರ್ಯಕ್ರಮ ತಂದಿದ್ದಾರೆ. ಈ ಕಾರ್ಯಕ್ರಮವನ್ನು ಸಹಿಸಲಾಗ ಬಿಜೆಪಿ ಅವರು ರೈತರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸದಾ ರೈತರ ಪರ ಸೈದ್ಧಾಂತಿಕವಾಗಿ ನಿಂತಿದೆ. ಕೇಂದ್ರ ಸರಕಾರ ನಾಲ್ಕೂವರೆ ವರ್ಷದಲ್ಲಿ ರೈತರ ಪರ ಯಾವ ಯೋಜನೆಯನ್ನು ನೀಡಿಲ್ಲ.
ಹೀಗಾಗಿ ಮುಂದಿನ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ನಿಂದ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.