ಕಲಬುರಗಿ: ರಾಜ್ಯದ ಗ್ರಾಮೀಣ ಭಾಗದ ಪ್ರದೇಶದಲ್ಲಿ ವಾಸಿಸುತ್ತಿರುವ ಯುವಜನತೆಗೆ ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧಗೊಂಡಿರುವ ಸುಸಜ್ಜಿತ "ಕೌಶಲ್ಯ ರಥಗಳಿಗೆ" ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾಲ್ಕು ತರಬೇತಿ ನೀಡುವ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ 2.5 ಲಕ್ಷ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಯುವ ಜನತೆಯ ಪ್ರಮಾಣ ಶೇ.46 ರಷ್ಟಿದೆ. ಹೀಗಾಗಿ ಇವರಿಗೆ ಉತ್ತಮ ಶಿಕ್ಷಣ ಮತ್ತು ಕೌಶಲ್ಯ ನೀಡಿ ಉದ್ಯೋಗ ಒದಗಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರವು ಪಂಡಿತ್ ದೀನ್ ದಯಾಳ್ ಯೋಜನೆಯಡಿ ಕೌಶಲ್ಯ ತರಬೇತಿ ನೀಡುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಸ್ವಾವಲಂಬಿಯನ್ನಾಗಿಸುವ ಪ್ರಯತ್ನ ಮುಂದುವರೆದಿದೆ ಎಂದರು.
ಕೌಶಲ್ಯ ರಥಗಳು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿ ಸ್ಥಳದಲ್ಲಿಯೇ ಉಚಿತವಾಗಿ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಕುರಿತು ಯುವಕ-ಯುವತಿಯರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಿ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಇದರಿಂದ ಅವರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಲಿದೆ ಎಂದರು
.
ಇದನ್ನೂ ಓದಿ: IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್
ತರಬೇತಿ ಪಡೆದವರನ್ನು ಮಿಕ್ಸಿ, ಗೃಹ ಬಳಕೆ ಮಿಕ್ಸಿ, ಮೋಟಾರ್ ವೈಂಡಿಂಗ್ ಹೀಗೆ ಸ್ಥಳೀಯವಾಗಿ ಕಂಪನಿಗಳೊಂದಿಗೆ ಜೋಡಿಸಿ ಉದ್ಯೋಗ ಒದಗಿಸುವ ಹ್ಯಾಂಡ್ ಹೋಲ್ಡಿಂಗ್ ಜವಾಬ್ದಾರಿ ಸಹ ಕೌಶಲ್ಯ ಅಭಿವೃದ್ಧಿ ನಿಗಮ ಮಾಡಲಿದೆ ಎಂದರು.ಮುಂದಿನ ದಿನದಲ್ಲಿ ಗ್ರಾಮೀಣ ಭಾಗದಲ್ಲಿ ಟ್ರಾನ್ಸ್ ಫಾರ್ಮರ್ (ಟಿ.ಸಿ) ಸಹ ಸ್ಥಳದಲ್ಲಿಯೇ ಯುವಕರು ದುರಸ್ತಿ ಮಾಡುವಂತಾಗಲು ಅಗತ್ಯ ಕೌಶಲ್ಯ ತರಬೇತಿ ನೀಡಬೇಕು ಎಂದು ಸ್ಥಳದಲ್ಲಿದ್ದ ನಿಗಮದ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು. ಇದರಿಂದ ರೈತಾಪಿ ವರ್ಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಗುರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಯುವಕ-ಯುವತಿಯರಿಗೆ ತರಬೇತಿ ನೀಡಲು ಗುರಿ ಹೆಚ್ಚಿಸಲಾಗುವುದೆಂದು ಇದೇ ಸಂದರ್ಭದಲ್ಲಿ ಸಿ.ಎಂ.ಬಸವರಾಜ ಬೊಮ್ಮಾಯಿ ತಿಳಿಸಿದರು.
ಉನ್ನತ ಶಿಕ್ಷಣ, ಐ.ಟಿ-ಬಿ.ಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾತನಾಡಿ ಕಳೆದ ಅರ್ಥಿಕ ವರ್ಷದಲ್ಲಿ ಕೌಶಲ್ಯ ತರಬೇತಿ ನೀಡಲು 75 ಸಾವಿರ ಗುರಿ ನೀಡಲಾಗಿತ್ತು. 2022-23ನೇ ಸಾಲಿಗೆ 2.5 ಲಕ್ಷ ಜನರಿಗೆ ಕೌಶಲ್ಯತೆ ನೀಡುವ ಗುರಿ ಹೊಂದಲಾಗಿದೆ. ಶೇ.75 ರಷ್ಟು ಯುವ ಸಮುದಾಯ ಕೌಶಲ್ಯದಿಂದ ವಿಮುಖರಾಗಿದ್ದು, ಅವರೆಲ್ಲರಿಗೂ ಶಿಕ್ಷಣ, ಕೌಶಲ್ಯ ಹಾಗೂ ಜೀವನೋಪಾಯದ ತರಬೇತಿ ನೀಡುವ ಸಂಕಲ್ಪ ಮಾಡಿದ್ದೇವೆ. ಸ್ವ-ಸಹಾಯ ಸಂಘಗಳಿಗೆ 500 ಕೋಟಿ ರೂ. ನೀಡಲಾಗಿದೆ. ಇದಲ್ಲದೆ ಕೆ.ಜಿ.ಟಿ.ಟಿ.ಐ, ಜಿ.ಟಿ.ಟಿ.ಸಿ., ಐ.ಟಿ.ಐ, ಪಾಲಿಟೆಕ್ನಿಕ್ ಮೂಲಕವು ಸಹ ರಾಜ್ಯದಲ್ಲಿ ಲಕ್ಷಾಂತರ ಯುವಜನತೆಗೆ ಕೌಶಲ್ಯ ತರಬೇತಿ ನೀಡುತ್ತಿದ್ದೇವೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ, ಕೆ.ಕೆ.ಅರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆ.ಕೆ.ಅರ್.ಟಿ.ಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕೆ.ಯು.ಡಬ್ಲ್ಯೂ.ಎಸ್.ಡಿ.ಬಿ. ಅಧ್ಯಕ್ಷ ರಾಜು ಗೌಡ, ಸಂಸದ ಡಾ.ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಸಚಿವ ಲಕ್ಷ್ಮಣ ಸವದಿ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಡಿ.ಸಿ. ಯಶವಂತ ವಿ. ಗುರುಕರ್, ನಗರ ಪೋಲೀಸ್ ಆಯುಕ್ತ ಡಾ.ವೈ.ಎಸ್.ರವಿಕುನಾರ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ. ಗೌಡ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ನಾಗಾಬಾಯಿ ಡಿ. ದೊಡ್ಡಮನಿ, ಸಹಾಯಕ ನಿರ್ದೇಶಕ ಸುದರ್ಶನ, ವ್ಯವಸ್ಥಾಪಕ ಸಂತೋಷ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ಮಗಳ ಮದುವೆಯಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದ ಕುಟುಂಬ
ತರಬೇತಿ ವಿವರ: ಕೌಶಲ್ಯ ರಥವು ಮೊದಲ ಹಂತವಾಗಿ ಯಾದಗಿರಿ, ಬೀದರ, ರಾಯಚೂರು ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಂಚರಿಸಿ ತರಬೇತಿ ನೀಡಲಿದೆ. ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಉಚಿತ ತರಬೇತಿಯ ಅವಧಿ ತಲಾ 208 ಗಂಟೆಯದ್ದಾಗಿದೆ. ಪ್ರತಿ ದಿನ 8 ಗಂಟೆ ತರಬೇತಿ ನೀಡಲಾಗುತ್ತದೆ. ಪ್ರತಿ ಬ್ಯಾಚಿನಲ್ಲಿ 15 ಜನರಿಗೆ ಅವಕಾಶವಿದ್ದು, ಒಂದು ತಿಂಗಳಿನಲ್ಲಿ 15 ಜನರಿಗೆ ತರಬೇತಿಗೆ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.