Bagalkote Lok Sabha Constituency: ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ʻಕೈʼ ನಾನಾ ಕಸರತ್ತು

Bagalkote Lok Sabha Constituency: ಬಾಗಲಕೋಟೆ ಲೋಕಸಭೆ ಕ್ಷೇತ್ರ್ ಅಖಾಡಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಅಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇತ್ತು.ಯಾರಿಗೆ ಟಿಕೆಟ್ ಸಿಗುತ್ತೆ ಎನ್ನೋ ಕುತೂಹಲ ಕೂಡ ಇತ್ತು.ಸತತ ನಾಲ್ಕು ಬಾರಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುತ್ತ‌ ಬಂದಿರುವ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೇನೆ ಬಿಜೆಪಿ ಪಕ್ಷ ಮತ್ತೆ ಮಣೆ ಹಾಕಿದ್ದು,ಪಿ.ಸಿ.ಗದ್ದಿಗೌಡರ್ ಅವರಿಗೆ ಟಿಕೆಟ್ ನೀಡಿದೆ.

Written by - Manjunath N | Last Updated : Apr 10, 2024, 12:38 AM IST
  • ಬಾಗಲಕೋಟೆಯಲ್ಲಿ ಹಿಂದುತ್ವಕ್ಕೆ ಸಿಗುತ್ತಾ ಮತ..?
  • ಕಾಂಗ್ರೆಸ್-ಐದು ಅಸೆಂಬ್ಲಿ ಕ್ಚೇತ್ರಗಳಲ್ಲಿ ಜಯಭೇರಿ
  • ಬಿಜೆಪಿ -ಮೂರು ಅಸೆಂಬ್ಲಿ ಕ್ಷೇತ್ರಗಳಲ್ಲಿ ಜಯಭೇರಿ
Bagalkote Lok Sabha Constituency: ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ʻಕೈʼ ನಾನಾ ಕಸರತ್ತು title=

ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ್ತಷ್ಟು ಕಾವೇರಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಂದ ಮತಬೇಟೆ ಕೂಡ ಬಿರುಸಾಗಿ ಸಾಗಿದೆ. ಈ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಯು ಮತದಾರನ ಮಹತ್ತರವಾದ ವಿವೇಚನೆ. ಸರಳ, ಸಂಯಮ, ಸಮರ್ಥ ಮತ್ತು ಸ್ಪಂದನೆವುಳ್ಳ ಸಂಸದರನ್ನ ಆರಿಸಿ ಕಳಿಸಬೇಕಾಗಿರೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕುರಿತು ಜೀ ಕನ್ನಡ ನ್ಯೂಸ್‌ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ನಿಮ್ಮ ನಿಮ್ಮ ಸಂಸತ್‌ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ, ಜನರ ನೋವುಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಹೇಗಿದೆ..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ.

ಚಾಲುಕ್ಯರ ನಾಡು, ವಿಶ್ವಗುರು ಬಸವಣ್ಣನವರ ನಾಡು, ಕೋಟೆ ನಾಡು, ಮುಳಗಡೆ ಪ್ರದೇಶವೆಂದೇ ಹಣೆಪಟ್ಟಿ ಹೊತ್ತು ಕೊಂಡಿರುವ ‌ಬಾಗಲಕೋಟೆ ಜಿಲ್ಲೆ ಐತಿಹಾಸಿಕವಾಗಿ ಬಹಳಷ್ಟು ಪ್ರಾಮುಖ್ಯತೆಯನ್ನ ಹೊಂದಿದೆ‌. ಈವರೆಗೂ ನಡೆದ 17 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 11 ಬಾರಿ, ಬಿಜೆಪಿ 3 ಬಾರಿ, ಜನತಾದಳ 1 ಬಾರಿ, ಲೋಕಶಕ್ತಿ 1 ಬಾರಿ ಜಯಭೇರಿ ಬಾರಿಸಿದೆ. ಕಳೆದ 2004ರಿಂದ ಇಲ್ಲಿಯವರೆಗೂ ಬಿಜೆಪಿ ಬಾಗಲಕೋಟೆ ಕ್ಷೇತ್ರವನ್ನ ಭದ್ರ ಕೋಟೆಯನ್ನಾಗಿಸಿಕೊಂಡಿದೆ.ಸತತವಾಗಿ ಬಾಲ್ಕು ಬಾರಿ ಗೆಲ್ಲುವ ಮೂಲಕ‌ ಬಿಜೆಪಿ‌ಯು ವಿಜಯ ಪತಾಕೆ ಹಾರಿಸುತ್ತಿದೆ.ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಮತ್ತೆ ಪ್ರಸ್ತುತ ಲೋಕಸಭೆ ಚುನಾವಣೆ ವೇದಿಕೆ ಸಜ್ಜುಗೊಳಿಸಿದೆ.ಒಂದೆಡೆ ಬಾಗಲಕೋಟೆ ಯನ್ನ ಭದ್ರ ಪಡಿಸಿಕೊಂಡಿರುವ ಬಿಜೆಪಿ, ಮೋದಿ ಅಲೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಖಾಡ ಸಿದ್ಧಗೊಳಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷವು ಕೂಡ ಶತಗತಾಯ ಗೆಲ್ಲಲೇ ಬೇಕೆಂಬ ಹಠ ತೊಟ್ಟು ತಯಾರಿಯಲ್ಲಿ ತೊಡಗಿದೆ.

ಬಾಗಲಕೋಟೆ ಲೋಕಸಭೆ ಕ್ಷೇತ್ರ್ ಅಖಾಡಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಅಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇತ್ತು.ಯಾರಿಗೆ ಟಿಕೆಟ್ ಸಿಗುತ್ತೆ ಎನ್ನೋ ಕುತೂಹಲ ಕೂಡ ಇತ್ತು.ಸತತ ನಾಲ್ಕು ಬಾರಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುತ್ತ‌ ಬಂದಿರುವ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೇನೆ ಬಿಜೆಪಿ ಪಕ್ಷ ಮತ್ತೆ ಮಣೆ ಹಾಕಿದ್ದು,ಪಿ.ಸಿ.ಗದ್ದಿಗೌಡರ್ ಅವರಿಗೆ ಟಿಕೆಟ್ ನೀಡಿದೆ.ಹಾಗಾಗಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ‌ಅವರು ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬಾಗಲಕೋಟೆ ಕ್ಷೇತ್ರ ಪರಿಚಯ 

2023ರ ಅಸೆಂಬ್ಲಿ ಚುನಾವಣೆ ಫಲಿತಾಂಶ 
1. ಬಾಗಲಕೋಟೆ -ಕಾಂಗ್ರೆಸ್ ಶಾಸಕ ಹೆಚ್.ವೈ.ಮೇಟಿ 
 (ಬಿಜೆಪಿ ವಿರುದ್ಧ 5878 ಮತಗಳ ಅಂತರದ ಗೆಲುವು)
2. ಹುನಗುಂದ- ಕಾಂಗ್ರೆಸ್ ಶಾಸಕ ವಿಜಯಾನಂದ‌ ಕಾಶಪ್ಪನವರ್‌ 
  (ಬಿಜೆಪಿ ವಿರುದ್ಧ  30,007 ಮತಗಳ ಅಂತರದ ಗೆಲುವು)
3. ಮುಧೋಳ- ಕಾಂಗ್ರೆಸ್ ಶಾಸಕ ಆರ್.ಬಿ.ತಿಮ್ಮಾಪೂರ್  
  (ಬಿಜೆಪಿ ವಿರುದ್ಧ 17,335 ಮತಗಳ ಅಮತರದ ಗೆಲುವು)
4. ಜಮಖಂಡಿ-ಬಿಜೆಪಿ ಶಾಸಕ ಜಗದೀಶ ಗುಡಗುಂಟಿ 
  (ಕಾಂಗ್ರೆಸ್ ವಿರುದ್ಧ4,716 ಮತಗಳ ಅಂತರದ ಗೆಲುವು)
5. ಬೀಳಗಿ -ಕಾಂಗ್ರೆಸ್ ಶಾಸಕ ಜೆ.ಟಿ.ಪಾಟೀಲ್ 
  (ಬಿಜೆಪಿ ವಿರುದ್ಧ  11,129 ಮತಗಳ ಅಂತರದ ಗೆಲುವು)
6. ಬಾದಾಮಿ-ಕಾಂಗ್ರೆಸ್ ಶಾಸಕ ಭೀಮಸೇನ್ ಚಿಮ್ಮನಕಟ್ಟಿ 
 (ಬಿಜೆಪಿ ವಿರುದ್ಧ 9,725 ಮತಗಳ ಅಂತರದ ಗೆಲುವು)
7. ತೇರದಾಳ-ಬಿಜೆಪಿ ಶಾಸಕ ಸಿದ್ದು ಸವದಿ 
 (ಕಾಂಗ್ರೆಸ್ ವಿರುದ್ಧ 10,745 ಮತಗಳ ಅಂತರದ ಗೆಲುವು)
8. ನರಗುಂದ (ಗದಗ)-ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ 
 (ಕಾಂಗ್ರೆಸ್ ವಿರುದ್ಧ 1,791 ಮತಗಳ ಅಂತರದ ಗೆಲುವು)

ಬಾಗಲಕೋಟೆ ಲೋಕಸಭೆ ಕ್ಷೇತ್ರ , ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ ಹಾಗೂ ಪಕ್ಕದ ಗದಗ ಜಿಲ್ಲೆಯ ನರಗುಂದ ಕ್ಷೇತ್ರ ಸೇರಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳನ್ನ ಒಳಗೊಂಡಿದೆ. ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ , ಸಚಿವ ಶಿವಾನಂದ ಪಾಟೀಲ್ ಅವರ ಸುಪುತ್ರಿ ಸಂಯುಕ್ತ ಪಾಟೀಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಆದ್ರೆ ಟಿಕೆಟ್'ನಿಂದ ವಂಚಿತರಾದ ವೀಣಾ ಕಾಶಪ್ಪನವರ್ ಅವರ ಬೆಂಬಲಿಗರು,ಅಭಿಮಾನಿಗಳು ಗೋಬ್ಯಾಕ್ ಸಂಯುಕ್ತ ಅಭಿಯಾನ ಆರಂಭಿಸಿ ಪ್ರತಿಭಟನೆ ನಡೆಸಿದ್ದರು. ಟಿಕೆಟ್‌ ಬದಲಾವಣೆಗೆ ಪಟ್ಟು ಹಿಡಿದಿದ್ದರು. ನಂತರ ಸ್ವತಃ ಸಿಎಂ ಸಿದ್ಧರಾಮಯ್ಯ ನವರು ಟಿಕೆಟ್ ಬದಲಾವಣೆ ಇಲ್ಲವೆಂದು‌ ವೀಣಾ ಕಾಶಪ್ಪನವರ್ ಹಾಗೂ ಬೆಂಬಲಿಗರಿಗೆ ಸೂಚನೆ ನೀಡಿದ ಬೆನ್ನಲ್ಲೆ ಈಗ ವೀಣಾ ಕಾಶಪ್ಪನವರ್ ಹಾಗೂ ಬೆಂಬಲಿಗರು ತಟಸ್ಥರಾಗಿದ್ದಾರೆ. ಇದರ ನಡುವೆ ಕ್ಚೇತ್ರದ ಹಲವು ಸಮಸ್ಯೆಗಳು ದಶಕಗಳಿಂದಲೂ ಬಗೆಹರಿದಿಲ್ಲ. ಮತದಾರನಿಗೆ ಕನೆಕ್ಟ್‌ ಆಗೋ ನಿರ್ಣಾಯಕ ಸಾಮಾಜಿಕ ಅಂಶಗಳು ಏನಪ್ಪಾ ಅಂದ್ರೆ...

ನಿರ್ಣಾಯಕ ಸಾಮಾಜಿಕ ಅಂಶಗಳು

ಮತದಾರನಿಗೆ ಕನೆಕ್ಟಿಂಗ್‌ ವಿಷಯ 
* ಇನ್ನೂ ಮುಗಿಯದ ಬ್ರಿಟಿಷರ ಕಾಲದ ಬಾಗಲಕೋಟೆ-ಕುಡುಚಿ ರೈಲು ಕಾಮಗಾರಿ
* ಜಿಲ್ಲೆಯ ನಿರುದ್ಯೋಗ ಸಮಸ್ಯೆ  ನಿವಾರಣೆಗೆ  ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ
* ಮುಗಿದಿಲ್ಲ ಕೃಷ್ಣಾ ಮೇಲ್ದಂಡೆ ಯೋಜನೆಗೆ ತ್ಯಾಗ ಮಾಡಿದ ಸಂತ್ರಸ್ಥರ ಗೋಳು 
* ಸರ್ಕಾರ, ಶಾಸಕರು ಬದಲಾದರೂ ಮುಗಿಯದ ಕೃಷ್ಣಾ ಮೇಲ್ದಂಡೆ ಯೋಜನೆ
* ಇತ್ತೀಚಿಗೆ ಸಂಸದ ಪಿಸಿ ಗದ್ದಿಗೌಡರ್ ಅವರಿಂದ  ಉದ್ಘಾಟನೆಗೊಂಡ ಎಫ್ ಎಂ ಕೇಂದ್ರ
* ಬಾಗಲಕೋಟೆ -ಬಾದಾಮಿ-ಗುಳೇದಗುಡ್ಡ ರೈಲು ನಿಲ್ದಾಣಗಳಲ್ಲಿ ಮೇಲ್ಸೇತುವೆ ಕಾಮಗಾರಿ

ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ನಾಲ್ಕು ಸಲ ಸಂಸದರಾಗಿದ್ದಾರೆ. ಇದರಲ್ಲಿ ಕಳೆದ 10 ವರ್ಷ ಅವರದ್ದೇ ಪಕ್ಷದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಹೀಗಾಗಿ ಸಂಸದರ ಮೇಲೆ ಮತದಾರದ್ದು ಅಪಾರವಾದ ನಿರೀಕ್ಷೆ ಇತ್ತು. ಸರ್ಕಾರದಿಂದ ನಡೆಯುವ ರೂಟಿನ್ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಕ್ಷೇತ್ರಕ್ಕೆ ವಿಶೇಷವಾದ ಯೋಜನೆ ರೂಪಿಸಿ, ಅದನ್ನು ಸರ್ಕಾರದ ಮುಂದಿಟ್ಟು ಅನುದಾನ ತಂದು ಮಾಡಿಸಿರುವ ಪ್ರಮುಖ ಕಾಮಗಾರಿಗಳು ಇಲ್ಲ. ರೂಟಿನ್ ಮತ್ತು ಮಂದಗತಿಯ ಕಾಮಗಾರಿಗಳು ಕೂಡ ಸೇರಿಕೊಂಡಿದೆ. ಸಂಸತ್‌ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ 8 ಲಕ್ಷದ 83 ಸಾವಿರದ 993 ಪುರುಷರು ಮತ್ತು 8 ಲಕ್ಷದ 97 ಸಾವಿರದ 402 ಮಹಿಳೆಯರು ಸೇರಿ ಒಟ್ಟು 17 ಲಕ್ಷದ 81 ಸಾವಿರದ 395 ಮತದಾರರು ತಮ್ಮ ಹಕ್ಕು ಚಲಾಯಿಸಲು ಸನ್ನದ್ಧರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ ಮತದಾರರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ. 

ಕ್ಷೇತ್ರವಾರು ಮತದಾರರ ವಿವರ 
ಕ್ಷೇತ್ರ                    ಪುರುಷರು                    ಮಹಿಳೆಯರು              ಒಟ್ಟು ಮತದಾರರು
ಮುಧೋಳ             1,00,517                   105,263                 2,05,780
ತೇರದಾಳ             1,15,655                   1,17,016                 2,32,671
ಜಮಖಂಡಿ             1,09,117                   1,11,021                 2,20,138
ಬೀಳಗಿ                 1,14,784                    1,18,110                 2,32,894
ಬಾದಾಮಿ              1,12,448                   1,11,727                 2,24,176
ಬಾಗಲಕೋಟೆ        1,23,276                    1,26,109                2,49,385
ಹುನಗುಂದ            1,12,253                    1,13,911                2,26,164
ನರಗುಂದ              95,942                       94,245                  1,90,187
ಒಟ್ಟು ಮತದಾರರು   8,83,993                   8,97,306                17,81,395

ಭಾರತ ಸ್ವಾತಂತ್ರ್ಯಗೊಂಡ ನಂತರ 1952ರಿಂದ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ಬಾಗಲಕೋಟೆ ಅಖಾಡದಲ್ಲಿ ಕಾಂಗ್ರೆಸ್ 11 ಬಾರಿ, ಬಿಜೆಪಿ-4, ಹಾಗೂ ಜತನಾದಳ-1, ಲೋಕಶಕ್ತಿ-1 ಬಾರಿ ಗೆದ್ದಿದೆ. 1967ರಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಮೊದಲ ಕಾಂಗ್ರೆಸ್ ಸಂಸದರಾಗಿ ಸ್ವಾತಂತ್ರ್ಯ ಹೋರಾಟಗಾರ ಎಸ್.ಬಿ.ಪಾಟೀಲ್ ಅವರು 1,83,984 ಮತಗಳನ್ನ ಪಡೆದು ಆಯ್ಕೆಯಾದರು. ಈ ಕ್ಷೇತ್ರವು ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್‌ ಮತ್ತು‌ ಬಿಜೆಪಿಯ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಜೊತಗೆ ರಾಜಕೀಯ ಪುನರ್ ಜನ್ಮ ಬಯಸಿ ಬಂದವರಿಗೂ ರಾಜಕೀಯ ಪುನರ್ ಜನ್ಮ ನೀಡಿದೆ. ಅಂದ್‌ ಹಾಗೆ ಕ್ಷೇತ್ರದ ಚರಿತೆಯು ಕೂಡ ಕುತೂಹಲಕರವಾಗಿದೆ

ಪಾಟೀಲ ಗೆದ್ರು, ಹೆಗಡೆ ಸೋತರು 
* 1980ರಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ್ ಗೆಲುವು 
* ಸಂಕಷ್ಟದ ವೇಳೆ ರಾಜಕೀಯ ಪುನರ್ ಜೀವನ ಪಡೆದ ವೀರೇಂದ್ರ ಪಾಟೀಲ್
* 1991ರಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಳದಿಂದ ಸ್ಪರ್ಧಿಸಿ ಸೋಲು
* ಬಂಗಾರಪ್ಪ ಅವರು ಸಿದ್ದು ನ್ಯಾಮಗೌಡರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು

ಬಾಗಲಕೋಟೆ ಕ್ಷೇತ್ರದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಕುರುಬ ಸಮುದಾಯದ ಮತಗಳೇ ನಿರ್ಣಾಯಕ. ಉಳಿದಂತೆ ಗಾಣಿಗ ಹಾಗೂ ಮುಸ್ಲಿಂ ಮತದಾರರು ಕೂಡ ಡಿಸೈಡಿಂಗ್‌ ಫ್ಯಾಕ್ಟರ್‌ ಆಗಿ ರೂಪುಗೊಂಡಿದ್ದಾರೆ. ಹಾಗಿದ್ರೆ ಕ್ಷೇತ್ರದ ಜಾತಿವಾರ ಲೆಕ್ಕಾಚಾರ ನೋಡೋಣ ಬನ್ನಿ...

ಜಾತಿವಾರು ಲೆಕ್ಕಾಚಾರ 
ಲಿಂಗಾಯತ : 4.50 ಲಕ್ಷ
ದಲಿತರು : 2.50 ಲಕ್ಷ
ಕುರುಬರು : 2 ಲಕ್ಷ
ಮುಸ್ಲಿಂ : 2 ಲಕ್ಷ
ಗಾಣಿಗ : 1.50 ಲಕ್ಷ
ನೇಕಾರ : 80 ಸಾವಿರ
ಮರಾಠರು : 60 ಸಾವಿರ
ಬ್ರಾಹ್ಮಣ : 50 ಸಾವಿರ
ಇತರೆ : 3.30 ಲಕ್ಷ

ಕೃಷ್ಣ ಮೇಲ್ದಂಡೆ ಯೋಜನೆಯಡಿ ಕೃಷ್ಣ ನದಿ ಹಿನ್ನೀರಿನಲ್ಲಿ ಇಡೀ ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಮುಳುಗಡೆಯಾದ ನಗರವೆಂದು ಹಣೆ ಪಟ್ಟಿ ಹೊತ್ತುಕೊಂಡಿರುವ ಹಾಗೂ ಬಾದಾಮಿ ಚಾಲುಕ್ಯರು,ವಿಶ್ವಗುರು ಬಸವಣ್ಣನವರ ಐಕ್ಯ ಕ್ಷೇತ್ರವೆಂದು ಖ್ಯಾತಿ‌ಪಡೆದ ಬಾಗಲಕೋಟೆ ಜಿಲ್ಲೆ ಈಗ ಮತ್ತೊಂದು ಲೋಕಸಭೆ ಚುನಾವಣೆಗೆ ಸಜ್ಜಾಗಿ ನಿಂತಿದೆ.ಸತತ‌ ನಾಲ್ಕು ಬಾರಿ ಗೆಲುವು ಕಂಡು ,ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತಿರುವ ಸಂಸದ ಪಿ.ಸಿ.ಗದ್ದಿಗೌಡರ್ ಅವರನ್ನ ಮತದಾರರು ಅಶೀರ್ವಧಿಸುತ್ತಾರೋ?ಅಥವಾ ಯಂಗ್ ಆಂಡ್ ಎನರ್ಜಟಿಕ್ ಕಾಂಗ್ರೆಸ್ ಪಕ್ಷದ ಹೊಸ ಮುಖ ಕಾಂಗ್ರೆಸ್ ನಾಯಕಿ ಸಂಯುಕ್ತ ಪಾಟೀಲ್ ಅವರ "ಕೈ" ಹಿಡಿಯುತ್ತಾರೊ ಎನ್ನೋದು ಮಾತ್ರ ನಿಗೂಢ. ಆದ್ರೆ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ, ಕಳೆದ ಬಾರಿ ಸಂಸತ್‌ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ವೀಣ ಕಾಶಪ್ಪನವರ್‌ ಸಿಟ್ಟು ಇನ್ನೂ ಕಡಿಮೆಯಾದಂತಿಲ್ಲ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಒಳೇಟು ನೀಡೋ ಸಂಭವವಿದೆ ಅಂತ ವಿಶ್ಲೇಷಿಸಲಾಗುತ್ತಿದೆ.

ಚುನಾವಣಾ ಹಿನ್ನೋಟ 

2004ರ ಫಲಿತಾಂಶ
* ಪಿ.ಸಿ.ಗದ್ದಿಗೌಡರ-ಬಿಜೆಪಿ-ಗೆಲುವು
* ಪಡೆದ ಮತಗಳ ಸಂಖ್ಯೆ 459451
* ಆರ್.ಎಸ್.ಪಾಟೀಲ-ಕಾಂಗ್ರೆಸ್-ಸೋಲು
* ಗೆಲುವಿನ ಅಂತರ: 167383

ಚುನಾವಣಾ ಹಿನ್ನೋಟ 

2009ರ ಫಲಿತಾಂಶ 
* ಪಿ.ಸಿ.ಗದ್ದಿಗೌಡರ-ಬಿಜೆಪಿ-ಗೆಲುವು
* ಪಡೆದ ಮತಗಳ ಸಂಖ್ಯೆ 413272
* ಜೆ.ಟಿ.ಪಾಟೀಲ-ಕಾಂಗ್ರೆಸ್-ಸೋಲು
* ಗೆಲುವಿನ ಅಂತರ: 35446

ಚುನಾವಣಾ ಹಿನ್ನೋಟ
2014ರ ಫಲಿತಾಂಶ

* ಪಿ.ಸಿ.ಗದ್ದಿಗೌಡರ-ಬಿಜೆಪಿ-ಗೆಲುವು
* ಪಡೆದ ಮತಗಳ ಸಂಖ್ಯೆ 571548
* ಅಜಯಕುಮಾರ ಸರನಾಯಕ-ಕಾಂಗ್ರೆಸ್-ಸೋಲು
* ಗೆಲುವಿನ ಅಂತರ: 116560

ಚುನಾವಣಾ ಹಿನ್ನೋಟ
2019ರ ಫಲಿತಾಂಶ 
* ಪಿ.ಸಿ.ಗದ್ದಿಗೌಡರ-ಬಿಜೆಪಿ-ಗೆಲುವು
* ಪಡೆದ ಮತಗಳ ಸಂಖ್ಯೆ 664638
* ವೀಣಾ ಕಾಶಪ್ಪನವರ-ಕಾಂಗ್ರೆಸ್-ಸೋಲು
* ಗೆಲುವಿನ ಅಂತರ: 168187

ಅಂದ ಹಾಗೆ ಬಿಜೆಪಿಯಿಂದ ಟಿಕೆಟ್ ಪಡೆದು ಅದೃಷ್ಟ ಪರೀಕ್ಷೆ ನಡೆಸಲು ಹಲವು ಆಕಾಂಕ್ಷಿಗಳು ಲಾಬಿ ನಡೆಸಿದ್ದರು. ಆದ್ರೂ ಕೂಡ ಬಿಜೆಪಿ ಹೈಕಮಾಂಡ್ ಸತತ ನಾಲ್ಕು ಬಾರಿ ಗೆಲುವು‌ ಸಾಧಿಸಿರುವ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೆ ಮಣೆ ಹಾಕಿದೆ. 2004ರಿಂದ‌ ಇಲ್ಲಿಯವರೆಗೆ ಒಂದಿಲ್ಲೊಂದು ಅಲೆಯಲ್ಲಿ ಗೆದ್ದು ಬಂದಿದ್ದಾರೆ. ಈ ಬಾರಿ ಮತ್ತೆ ಐದನೇ ಬಾರಿಗೆ ಅದೃಷ್ಠದ ಪರೀಕ್ಷೆಗೆ ಮುಂದಾಗಿದ್ದಾರೆ. ಅದ್ರೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇನ್ನೂ ತಣ್ಣಗಾಗಿಲ್ಲ. ಟಿಕೆಟ್ ವಂಚಿತ ವೀಣಾ ಕಾಶಪ್ಪನವರ್ ತಟಸ್ಥರಾಗಿರುವುದಾಗಿ ಹೇಳಿದ್ದರೂ ಇನ್ನೂ ಹೊಗೆಯಾಡುತ್ತಿದೆ. ಸ್ಥಳೀಯರಿಗೆ ಟಿಕೆಟ್ ಕೊಡಬೇಕಿತ್ತೆಂಬ ಕೂಗು ಸ್ಥಳೀಯ ವಲಯದಲ್ಲಿ ಹರಿದಾಡುತ್ತಿದೆ. ಸ್ಥಳೀಯರಲ್ಲದ ಪಕ್ಕದ ವಿಜಯಪುರ ಜಿಲ್ಲೆಯ ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು ಕಾಶಪ್ಪನವರ್ ಬೆಂಬಲಿಗರಲ್ಲಿ ಅಸಮಾಧಾನ ಸೃಷ್ಟಿ ಮಾಡಿದೆ. ಆದ್ರೆ ಎಲ್ಲರನ್ನ ಮನವೊಲಿಸಿ ಚುನಾವಣೆ ಎದುರಿಸುತ್ತೇವೆಂದು ಕಾಂಗ್ರೆಸ್ ನ ನಾಯಕರು ಪಣ ತೊಟ್ಟಿದ್ದು ಸಂಯುಕ್ತ ಪಾಟೀಲ್ ಭರ್ಜರಿ ತಯಾರಿ ನಡೆಸಿದ್ದಾರೆ.

ಕ್ಷೇತ್ರದ ಮುನ್ನೋಟ 
2024ರ ಚುನಾವಣೆ 

ಪಿ.ಸಿ.ಗದ್ದಿಗೌಡರ್ -ಬಿಜೆಪಿ ಅಭ್ಯರ್ಥಿ
ಸಂಯುಕ್ತ ಪಾಟೀಲ್ -ಕಾಂಗ್ರೆಸ್ ಅಭ್ಯರ್ಥಿ

ಅದೇನೇ ಇರ್ಲಿ.. ಬಾಗಲಕೋಟೆ ಲೋಕಸಭಾ ಚುನಾವಣೆ ಹಳೆಯ ಹುಲಿ ಗದ್ದಿಗೌಡರ್ ವಿರುದ್ಧ ಹೊಸಮುಖ ಸಂಯುಕ್ತ ಪಾಟೀಲ್ ಅಖಾಡಕ್ಕೆ ಇಳಿದಿದ್ದಾರೆ. ಹಳೆಜಟ್ಟಿಯನ್ನ ಮಣಿಸಲು ಹೆಣ್ಣುಹುಲಿ ಯಾವ ಪಟ್ಟುಗಳನ್ನ ಹಾಕಲಿದೆ..? ಕೇಸರಿ ಕಲಿಗೆ ಸೋಲನ್ನ ಉಣಿಸಲು ಮಾಡಿಕೊಂಡಿರೋ ತಯಾರಿ ಹೇಗಿದೆ ಅನ್ನೋದೇ ನಿಗೂಢ ವಿಚಾರ. ಆದ್ರೆ ಜೂನ್‌ 4ರಂದು ನಡೆಯಲಿರೋ ಕೌಂಟಿಂಗ್‌ನಲ್ಲಿ ಕ್ಷೇತ್ರದ ಮತದಾರ ಯಾರಿಗೆ ಜೈಕಾರ ಎಂದಿದ್ದಾನೆ..? ಮುಂದಿನ ಸಂಸದರು ಯಾರು ಅನ್ನೋದು ಸ್ಪಷ್ಟವಾಗಲಿದೆ.

ಸಧ್ಯ ಕಳೆದ 2004 ರಿಂದ ಇಲ್ಲಿಯವರೆಗೆ ಸತತವಾಗಿ ಬಿಜೆಪಿ ನಾಲ್ಕು ಬಾರಿ ಗೆಲುವಿನ ನಗೆ‌ಬೀರುತ್ತ ಬಾಗಲಕೋಟೆಯನ್ನ ತನ್ನ ಭದ್ರ ಕೋಟೆಯನ್ನಾಗಿಸಿಕೊಂಡಿದೆ.ಕಳೆದ 2019"ರ ಚುನಾವಣೆಯಲ್ಲಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರು 6,64,638 ಮತಗಳನ್ನ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವೀಣಾ ಕಾಶಪ್ಪನವರ್ 4,96,451  ಮತಗಳನ್ನ ಪಡೆದಿದ್ದರು.ಬಿಜೆಪಿ ಹಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರು 1,68,187 ಮತಗಳ ಅಂತರದಿಂದ ಜಯಬೇರಿ ಬಾರಿಸಿದ್ದರು.

ಉದಾಹರಣೆಗೆ ಬಾಗಲಕೋಟೆ-ಕುಡಚಿ ರೈಲು ಮಾರ್ಗ 2010ರಲ್ಲೆ ಆರಂಭಗೊಂಡಿದ್ದು, ಇನ್ನೂ ವರೆಗೂ 40 ಕಿ.ಮೀ. ಹಳಿ ಜೋಡಣೆ ಮುಗಿದಿಲ್ಲ. ಒಟ್ಟು 142 ಕಿ.ಮೀ. ಉದ್ದದ ರೈಲು ಹಳಿ ಜೋಡಣೆ ಆಗಬೇಕು. ಅದಕ್ಕೆ ರಾಜ್ಯ ಸರ್ಕಾರ ನಿಗದಿತ ಸಮಯಕ್ಕೆ ಜಮೀನು ಒದಗಿಸಿಲ್ಲ ಎನ್ನುವ ಮಾತನ್ನು ಸಂಸದರು ಹೇಳುತ್ತಿದ್ದಾರೆ. ಗದಗ-ಹುಟಗಿ ಡಬ್ಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಬಾದಾಮಿ ಹಾಗೂ ಗುಳೇದಗುಡ್ಡ ಮೇಲ್ ಸೇತುವೆ ಮಂಜೂರಾಗಿವೆ. ಇದೇ ತಿಂಗಳು ಪ್ರಧಾನಮಂತ್ರಿಗಳು ವರ್ಚವಲ್ ಮೂಲಕ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಾಗಲಕೋಟೆ ಹೊಸ ರೈಲು ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿ ಇದೆ. ಜಿಲ್ಲೆಯಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಭರದಿಂದ ನಡೆದಿವೆ.

ಹಿಂದಿನ ಅವಯಲ್ಲಿ ಜಾರಿಗೆ ಬಂದಿದ್ದ ಬಾದಾಮಿಯ ಹೃದಯ ಯೋಜನೆ ಅಡಿಯಲ್ಲಿ ಬಾದಾಮಿ ಚಿತ್ರಣವೇ ಬದಲಾಗಬೇಕಿತ್ತು. ವೇಗವಾಗಿ ಕಾಮಗಾರಿ ನಡೆಯದೇ ಹಿನ್ನಲೆಯಲ್ಲಿ 22 ಕೋಟಿ ರೂ. ಅನುದಾನವಷ್ಟೆ ಬಂದಿದ್ದರೂ ಇನ್ನೂ ಕೆಲ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅಮೃತ ಯೋಜನೆ ಅಡಿಯಲ್ಲಿ ಬಾಗಲಕೋಟೆ ನಗರಕ್ಕೆ 124 ಕೋಟಿ ರೂ. ಬಾದಾಮಿಗೆ 35 ಕೋಟಿ ರೂ. ವೆಚ್ಚದಲ್ಲಿ  ಕುಡಿಯುವ ನೀರು, ನಗರ ಸೌಂದರ್ಯಕರಣ ಇತ್ಯಾದಿ ಆಭಿವೃದ್ಧಿ ಕಾಮಗಾರಿ ಹಿಂದಿನ ಅವಯಲ್ಲೆ ಮುಗಿಯಬೇಕಿದ್ದು, ಇನ್ನೂ ಸಹ ಕೆಲ ಕಾಮಗಾರಿ ಮುಗಿದಿಲ್ಲ. ಬಾಗಲಕೋಟೆ ಆಕಾಶವಾಣಿ ಎಫ್ ಎಂ ಕೊನೆಗೂ ಇತ್ತೀಚಿಗೆ ಉದ್ಘಾಟನೆ ಆಗಿದೆ. ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಮುದ್ರಾ, ನರೇಗಾ, ಸ್ವಚ್ಛಭಾರತ, ಜಲಜೀವನ್ ಮಿಷನ್ ಸೇರಿ ಹತ್ತು ಹಲವು ಕೇಂದ್ರದ ಯೋಜನೆಗಳು ರೂಟಿನ್ ಆಗಿ ನಡೆದಿವೆ. ಸಂಸದರು ದಿಶಾ ಸರಿಯಾಗಿ ನಡೆಸುತ್ತಾರೆ. ಕ್ಷೇತ್ರಕ್ಕೆಂದು ವಿಶೇಷ ಯೋಜನೆ ತರಲ್ಲ. ರೂಟಿನ್ ಯೋಜನೆಗಳು ನಿದಾನಗತಿ ಎನ್ನುವ ಅಪವಾದವೂ ಇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News