ಕರಕುಶಲ ಪರಂಪರೆಯ ಪುನರುಜ್ಜೀವನಕ್ಕೆ ಸಾಥ್ ನೀಡಿದ ಆರ್ಟ್ ಆಫ್ ಲಿವಿಂಗ್‌..!

ನಮ್ಮ ದೇಶದ ಪಾರಂಪರಿಕ ಕಲೆ ಹಾಗೂ ಕರಕುಶಲತೆಯ ನಿರಂತರ ಅವನತಿಗೆ ಕಳೆದ ಎರಡು ದಶಕಗಳು ಸಾಕ್ಷಿಯಾಗಿದೆ. ಕುಶಲಕರ್ಮಿಗಳ ಮಕ್ಕಳು ಬೇರೆ ವೃತ್ತಿಯನ್ನು ಆರಿಸಿಕೊಳ್ಳುತ್ತಿರುವ ಪರಿಣಾಮವಾಗಿ,  ವಂಶಪಾರಂಪರ್ಯವಾಗಿ ಹರಿದು ಬರುತ್ತಿದ್ದ ಕರಕುಶಲತೆಯ ಜ್ಞಾನವು ಈಗ ಕ್ಷೀಣಿಸುತ್ತಿದೆ.

Written by - Zee Kannada News Desk | Last Updated : Apr 1, 2023, 09:25 PM IST
  • ನಮ್ಮ ದೇಶದ ಪಾರಂಪರಿಕ ಕಲೆ ಹಾಗೂ ಕರಕುಶಲತೆಯ ನಿರಂತರ ಅವನತಿಗೆ ಕಳೆದ ಎರಡು ದಶಕಗಳು ಸಾಕ್ಷಿಯಾಗಿದೆ.
  • ಕುಶಲಕರ್ಮಿಗಳ ಮಕ್ಕಳು ಬೇರೆ ವೃತ್ತಿಯನ್ನು ಆರಿಸಿಕೊಳ್ಳುತ್ತಿರುವ ಪರಿಣಾಮವಾಗಿ, ವಂಶಪಾರಂಪರ್ಯವಾಗಿ ಹರಿದು ಬರುತ್ತಿದ್ದ ಕರಕುಶಲತೆಯ ಜ್ಞಾನವು ಈಗ ಕ್ಷೀಣಿಸುತ್ತಿದೆ.
  • ಇದರಿಂದ ಪಾರಂಪರಿಕ ಕುಶಲಕರ್ಮಿಗಳು ಮತ್ತು ಅವರು ಪರಿಣಿತರಾಗಿದ್ದ ಕರಕುಶಲ ಕಲೆಗಳು ಬಹಳ ವೇಗವಾಗಿ ಕಣ್ಮರೆಯಾಗುತ್ತಿವೆ.
ಕರಕುಶಲ ಪರಂಪರೆಯ ಪುನರುಜ್ಜೀವನಕ್ಕೆ ಸಾಥ್ ನೀಡಿದ ಆರ್ಟ್ ಆಫ್ ಲಿವಿಂಗ್‌..! title=

ಬೆಂಗಳೂರು: ನಮ್ಮ ದೇಶದ ಪಾರಂಪರಿಕ ಕಲೆ ಹಾಗೂ ಕರಕುಶಲತೆಯ ನಿರಂತರ ಅವನತಿಗೆ ಕಳೆದ ಎರಡು ದಶಕಗಳು ಸಾಕ್ಷಿಯಾಗಿದೆ. ಕುಶಲಕರ್ಮಿಗಳ ಮಕ್ಕಳು ಬೇರೆ ವೃತ್ತಿಯನ್ನು ಆರಿಸಿಕೊಳ್ಳುತ್ತಿರುವ ಪರಿಣಾಮವಾಗಿ,  ವಂಶಪಾರಂಪರ್ಯವಾಗಿ ಹರಿದು ಬರುತ್ತಿದ್ದ ಕರಕುಶಲತೆಯ ಜ್ಞಾನವು ಈಗ ಕ್ಷೀಣಿಸುತ್ತಿದೆ. ಇದರಿಂದ ಪಾರಂಪರಿಕ ಕುಶಲಕರ್ಮಿಗಳು ಮತ್ತು ಅವರು ಪರಿಣಿತರಾಗಿದ್ದ ಕರಕುಶಲ ಕಲೆಗಳು ಬಹಳ ವೇಗವಾಗಿ ಕಣ್ಮರೆಯಾಗುತ್ತಿವೆ.

ಕ್ಷೀಣಿಸುತ್ತಿರುವ ಈ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಕಣ್ಮರೆಯಾಗುತ್ತಿರುವ ಕರಕುಶಲ ಪರಿಣಿತಿ ಮತ್ತು ಉತ್ಪನ್ನಗಳನ್ನು ಉಳಿಸಬೇಕಾದ ಅಗತ್ಯವನ್ನು ಗುರುತಿಸಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನರ್, ಬೆಂಗಳೂರು ಪ್ರಾದೇಶಿಕ ಚಾಪ್ಟರ್ (IIID BRC) ಸಂಸ್ಥೆಯು, ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ. ಕಳೆದ ಒಂದೂವರೆ ದಶಕದಿಂದ ದೇಶಾದ್ಯಂತ ಪಾರಂಪರಿಕ ಕಲೆಗಳು, ಕರಕುಶಲ ಮತ್ತು ನೇಯ್ಗೆ ಉತ್ಪನ್ನಗಳ ಪುನರುಜ್ಜೀವನದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ತನ್ನ ಮಾಧುರ್ಯ ಕ್ರಿಯೇಷನ್ಸ್ ವಿಭಾಗದ ಮೂಲಕ ಸಾಕಷ್ಟು ಕೆಲಸವನ್ನು ಮಾಡಿದೆ.ಇಷ್ಟೇ ಅಲ್ಲದೇ ಇತ್ತೀಚೆಗೆ ತನ್ನ ಶ್ರೀ ಶ್ರೀ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ (SSRDP) ಅಡಿಯಲ್ಲಿ, ಕೈಯಿಂದ ಮಾಡಿದ ‘ಅತಂಗುಡಿ ಹೆಂಚು’ಗಳನ್ನು ಸಹ ಪುನರುಜ್ಜೀವನಗೊಳಿಸಿದೆ.

ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ

ಪಾರಂಪರಿಕ ಕಲೆ ಹಾಗೂ ಕರಕುಶಲತೆಯ ಜೊತೆಗೆ, SSRDPಯು ವಿದ್ಯುತ್ ಕೆಲಸ, ಸೌರ ಶಕ್ತಿ, ಮರಗೆಲಸ, ಪ್ಲಮ್ಬಿಂಗ್ ಮುಂತಾದ ಅನೇಕ ವಿಭಾಗಗಳಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರಲ್ಲಿ ಯುವಕರು ತರಬೇತಿಯನ್ನು ಪಡೆಯುವುದರ ಜೊತೆಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ (NSDC) ಅಡಿಯಲ್ಲಿ ಪ್ರಮಾಣ ಪತ್ರಗಳನ್ನು ಸಹ ಪಡೆಯುತ್ತಾರೆ.ಇದರಿಂದ ಅವರು ನಿರ್ಮಾಣ ಉದ್ಯಮದಲ್ಲಿ ನುರಿತ ಕೆಲಸಗಾರರಾಗಿ ನೇರ ಉದ್ಯೋಗವನ್ನು ಪಡೆಯಬಹುದಾಗಿದೆ. 

ದೇಶದಲ್ಲಿ ವೇಗವಾಗಿ ಕಣ್ಮರೆಯಾಗುತ್ತಿರುವ ಪಾರಂಪರಿಕ ಕಲೆ ಮತ್ತು ಕರಕುಶಲತೆ ಹಾಗೂ ವಿವಿಧ ನಿರ್ಮಾಣ ವಿಧಾನಗಳನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಪ್ರಸ್ತುತ ನಿರ್ಮಾಣ ಉದ್ಯಮವನ್ನು ಕುಗ್ಗಿಸುತ್ತಿರುವ ಕೌಶಲ್ಯದ ಅಭಾವವನ್ನು ಕಡಿಮೆ ಮಾಡಲು ಹಾಗೂ ನಿರ್ಮಾಣ ಉದ್ಯಮದಲ್ಲಿ ಕೆಲಸಗಾರರ ಪರಿಣಿತಿಯನ್ನು ಹೆಚ್ಚಿಸಲು ಇರುವ ಮಾರ್ಗಗಳನ್ನು ಕಂಡುಕೊಳ್ಳಲು IIID BRC ಮತ್ತು ಬೆಂಗಳೂರಿನ 30 ಆರ್ಕಿಟೆಕ್ಟ್ ಗಳ  ತಂಡವು ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್‌ಗೆ ಭೇಟಿ ನೀಡಿತ್ತು.  

ಈ ಸಹಯೋಗದ ಕುರಿತು, IIID BRCಯ ಅಧ್ಯಕ್ಷರಾದ ಆರ್ಕಿಟೆಕ್ಟ್ ಕವಿತಾ ಶಾಸ್ತ್ರಿಯವರು ಮಾತನಾಡುತ್ತಾ, “ನಿರ್ಮಾಣ ಉದ್ಯಮದಲ್ಲಿ ಪ್ರಸ್ತುತ ಕಾರ್ಮಿಕರ ಪರಿಣಿತಿಯ ಮಟ್ಟವು ಬೆಳೆಯುತ್ತಿರುವ ಅಗತ್ಯಕ್ಕೆ ಹೊಂದಿಕೆಯಾಗುತ್ತಿಲ್ಲ, ಇದು ಗಂಭೀರ ಕಳವಳವನ್ನು ಉಂಟುಮಾಡುತ್ತದೆ ಏಕೆಂದರೆ ಇದು ನಿರ್ಮಾಣದ ಗುಣಮಟ್ಟ ಮತ್ತು ಉಪಯುಕ್ತತೆಗಳ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ. ನಿರ್ಮಾಣ ಉದ್ಯಮಕ್ಕೆ ಯುವಕರನ್ನು ಕೌಶಲ್ಯಗೊಳಿಸಲು NSDCಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈ ಉಪಕ್ರಮವನ್ನು ಕೈಗೊಂಡಿರುವುದು ಶ್ಲಾಘನೀಯ. IIIDಯಂತಹ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಮತ್ತು ನಿರ್ಮಾಣ ಉದ್ಯಮದಲ್ಲಿ ಕೌಶಲ್ಯದ ಪರಿಣಿತಿಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳಿಗೆ ಕೈ ಜೋಡಿಸುವುದು ಬಹಳ ಮುಖ್ಯವಾಗಿದೆ” ಎಂದು ಹೇಳಿದರು.

ಪಾರಂಪರಿಕ ಕರಕುಶಲ ಮತ್ತು ಕೌಶಲ್ಯಗಳ ಪುನರುಜ್ಜೀವನದ ಕುರಿತು ಮಾತನಾಡುತ್ತಾ ಅವರು, "ಒಂದು ಇಂಟೀರಿಯರ್ ಡಿಸೈನರ್ ಸಂಸ್ಥೆಯಾಗಿ, ಕಣ್ಮರೆಯಾಗುತ್ತಿರುವ ಈ ಪರಂಪರೆಯನ್ನು ಪುನರುಜ್ಜೀವನಗೊಳಿಸಲು, ನಮ್ಮ ಕಡೆಯಿಂದ  ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಮತ್ತು ಈ ನಿಟ್ಟಿನಲ್ಲಿ ನಿಕಟವಾಗಿ ಕೆಲಸ ಮಾಡಲು ನಾವು ತಯಾರಿದ್ದೇವೆ. ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಶೀಘ್ರದಲ್ಲೇ ಈ ಪರಂಪರೆ ದಾಖಲೆ ಪುಸ್ತಕಗಳಿಗೆ ಸೇರುತ್ತದೆ. ಹಾಗಾಗಿ ಮುಂಬರುವ ತಿಂಗಳುಗಳಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲು, ಈ ಪುನರುಜ್ಜೀವನ ಕಾರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.  

ಈ ಉಪಕ್ರಮವನ್ನು ಶ್ಲಾಘಿಸಿದ ನಿವೃತ್ತ ಏರ್ ಕಮಾಂಡರ್ ಹಾಗು SSRDP ಅಧ್ಯಕ್ಷರಾದ ಶ್ರೀ ಆರ್ ಎನ್ ಮೆರಾನಿಯವರು, “ಯುವಕರಲ್ಲಿ ಕೌಶಲ್ಯದ ಪರಿಣಿತಿಯನ್ನು, ವಿಶೇಷವಾಗಿ ನಿರ್ಮಾಣ ಉದ್ಯಮಕ್ಕೆ ಸಂಬಂಧಿಸಿದಂತೆ, ಹೆಚ್ಚಿಸುವಲ್ಲಿ ಇಂತಹ ಬೆಂಬಲದ ಅಗತ್ಯವಿದೆ. ಏಕೆಂದರೆ ಮುಂಬರುವ ವರ್ಷಗಳಲ್ಲಿ ಈ ಉದ್ಯಮದಲ್ಲಿ ನುರಿತ ಕಾರ್ಮಿಕರ ಬೇಡಿಕೆಯು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದೇ ರೀತಿ ಆತಂಗುಡಿ ಹೆಂಚುಗಳನ್ನು ತಯಾರಿಸುವಲ್ಲಿ ಸಹ ನಮಗೆ ಎಲ್ಲರ ಬೆಂಬಲದ ಅಗತ್ಯವಿದೆ. ಪುನರುಜ್ಜೀವನ ಮತ್ತು ಕಾರ್ಮಿಕರ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ IIID BRCಯೊಂದಿಗಿನ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.  

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಮಾಧುರ್ಯ ಕ್ರಿಯೇಷನ್ಸ್‌ನ ನಿರ್ದೇಶಕರಾದ ಭಾರತಿ ಹರೀಶ್ ಅವರು, ವೇಗವಾಗಿ ಕಣ್ಮರೆಯಾಗುತ್ತಿರುವ ಪಾರಂಪರಿಕ ಕಲೆ ಮತ್ತು ಕರಕುಶಲದಲ್ಲಿ ನುರಿತ ಜನರ ಪುನರುಜ್ಜೀವನದಲ್ಲಿ IIID BRCಯ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತಾ "ಹಳೆಯ ನೇಯ್ಗೆಗಳಾಗಿರಬಹುದು, ತಂಜಾವೂರು ಅಥವಾ ಪಿಚ್ವಾಯಿ ವರ್ಣಚಿತ್ರಗಳಾಗಿರಬಹುದು ಅಥವಾ ಅತಂಗುಡಿ ಹೆಂಚುಗಳಾಗಿರಬಹುದು, ಆರ್ಕಿಟೆಕ್ಟ್ ಗಳು ಮತ್ತು ಒಳಾಂಗಣ ವಿನ್ಯಾಸಕರು ಈ ಪಾರಂಪರಿಕ ಕಲೆ ಹಾಗೂ ಕಲಾಕೃತಿಗಳನ್ನು  ಜೀವಂತವಾಗಿಡಲು ಇವುಗಳನ್ನು ತಮ್ಮ ಒಳಾಂಗಣ ವಿನ್ಯಾಸದಲ್ಲಿ ಹೆಚ್ಚು ಬಳಸಬೇಕಾಗಿರುವುದು ಮುಖ್ಯವಾಗಿದೆ. IIID BRCಯ ಈ ಉಪಕ್ರಮದೊಂದಿಗೆ, ಮಾರುಕಟ್ಟೆಯಲ್ಲಿ ಈ ಪಾರಂಪರಿಕ ಕಲೆ ಹಾಗೂ ಕಲಾಕೃತಿಗಳಿಗೆ ಮತ್ತೆ ಬೇಡಿಕೆ ಬರಬಹುದೆಂದು ನಾವು ಆಶಿಸುತ್ತೇವೆ” ಎಂದು ಹೇಳಿದರು.

ಆರ್ಕಿಟೆಕ್ಟ್ ಗಳು ಆತಂಗುಡಿ ಹೆಂಚುಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಅವರಲ್ಲಿ ಕೆಲವರು ಹೆಂಚುಗಳನ್ನು ತಯಾರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೌಶಲ್ಯ ಕೇಂದ್ರದ ಭೇಟಿಯು, ಈ ಸಹಯೋಗದಿಂದ ಕಾಣಬಯಸುವ ಸ್ಪಷ್ಟವಾದ ಫಲಿತಾಂಶಗಳನ್ನು ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಕುರಿತು ಆರ್ಕಿಟೆಕ್ಟ್ ಗಳು ಚರ್ಚೆಗಳನ್ನು ನಡೆಸುವುದರೊಂದಿಗೆ ಕೊನೆಗೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News