ಮುಂಗಾರು ಮಳೆಯಿಂದಾಗುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಮಹತ್ವದ ಸಭೆ 

ನಗರದಲ್ಲಿ ಮಳೆಗಾಲದ ವೇಳೆ ಪಾಲಿಕೆ, ಜಲಮಂಡಳಿ, ಪೊಲೀಸ್, ಬೆಸ್ಕಾಂ, ಅಗ್ನಿ ಶಾಮಕ ದಳ ಹಾಗೂ ಎಸ್.ಡಿ.ಆರ್.ಎಫ್ ಇಲಾಖೆಯು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Written by - Bhavya Sunil Bangera | Edited by - Manjunath N | Last Updated : Jun 15, 2023, 05:45 PM IST
  • ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆ.ಎಸ್.ಎನ್.ಡಿ.ಎಂ.ಸಿ)ವು ಹವಾಮಾನದ ಮುನ್ಸೂಚನೆ ನೀಡಲಿದ್ದು
  • ಅದರನುಸಾರ ನಗರದ ಯಾವ ಭಾಗದಲ್ಲಿ ಮಳೆಯಾಗದಲಿದೆ ಎಂಬುದನ್ನು ತಿಳಿದು ಎಲ್ಲಾ ಪಾಲಿಕೆ ಅಧಿಕಾರಿಗಳು,
  • ಅರಣ್ಯ ಇಲಾಖೆ ಸಿಬ್ಬಂದಿಯು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಸದಾ ಸನ್ನದ್ಧರಾಗಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಮುಂಗಾರು ಮಳೆಯಿಂದಾಗುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಮಹತ್ವದ ಸಭೆ  title=
file photo

 ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ಪಾಲಿಕೆ, ಜಲಮಂಡಳಿ, ಪೊಲೀಸ್, ಬೆಸ್ಕಾಂ, ಅಗ್ನಿ ಶಾಮಕ ದಳ ಹಾಗೂ ಎಸ್.ಡಿ.ಆರ್.ಎಫ್ ಇಲಾಖೆಯು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಜೊತೆ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಎಲ್ಲಿಯೂ ಜಲಾವೃತವಾಗದಂತೆ ರಾಜಕಾಲುವೆ, ಚರಂಡಿಗಳಲ್ಲಿ ಹೂಳನ್ನು ತೆರವುಗೊಳಿಸಬೇಕು. ಹೂಳೆತ್ತಿರುವ ಬಗ್ಗೆ ಲೊಕೇಷನ್ ಸಹಿತ ಛಾಯಾಚಿತ್ರಗಳನ್ನು ತೆಗೆದು ನಿಖರವಾದ ಮಾಹಿತಿಯನ್ನು ದಾಖಲಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ 20 ಅಗ್ನಿ ಶಾಮಕ ಠಾಣೆ ಹಾಗೂ 1 ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್.ಡಿ.ಆರ್.ಎಫ್) ಇದ್ದು, ನಗರದಲ್ಲಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಜಲಾವೃತವಾಗಿರುವ ಪ್ರದೇಶದ ಮಾಹಿತಿ ನೀಡಿದ ತಕ್ಷಣ ಅಗ್ನಿ ಶಾಮಕ ದಳ ಹಾಗೂ ಎನ್.ಡಿ.ಆರ್.ಎಫ್ ತಂಡವು ತ್ವರಿತವಾಗಿ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಾದಂತಹ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ನಗರದಲ್ಲಿರುವ ಎಲ್ಲಾ ಅಗ್ನಿ ಶಾಮಕ ಠಾಣೆ ಹಾಗೂ ಕಛೇರಿ ಮುಖ್ಯಸ್ಥರ ಮಾಹಿತಿ, ದೂರವಾಣಿ ಸಂಖ್ಯೆಯನ್ನು ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ನೀಡಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. 

ನಗರದಲ್ಲಿ ಎಲ್ಲೆಲ್ಲಿ ಬಿ.ಎಂ.ಆರ್.ಸಿ.ಎಲ್ ವತಿಯಿಂದ ಕೆಲಸ ನಡೆಯುತ್ತಿದೆ, ಅಂತಹ ಸ್ಥಳಗಳಲ್ಲಿ ಮಳೆ ನೀರು ಹರಿಯುವಿಕೆಯ ಚರಂಡಿಗಳನ್ನು ಹಾಳುಮಾಡಿದ್ದರೆ ಅದನ್ನು ಪಟ್ಟಿ ಮಾಡಿ ಮೆಟ್ರೊ ಇಲಾಖೆಯ ಗಮನಕ್ಕೆ ತಂದು ದುರಸ್ಥಿಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ:

ನಗರದಲ್ಲಿ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಿರಲು ಆಯಾ ವಲಯ ವ್ಯಾಪ್ತಿಯ ಪಾಲಿಕೆ ಹಿರಿಯ ಅಧಿಕಾರಿಗಳು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಇಲಾಖೆಯ ಜೊತೆಗೆ 198 ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳಿಗೆ ಜಂಟಿಯಾಗಿ ಖುದ್ದು ಭೇಟಿ ನಿಡಿ, ಆ ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗೆ ಸೂಚನೆ ನೀಡಿದರು. 

ಅರಣ್ಯ ವಿಭಾಗದಿಂದ ಡಿಪೋ ವ್ಯವಸ್ಥೆ:

ಬಿಬಿಎಂಪಿ ವ್ಯಾಪ್ತಿಯ ಆಯ ವಲಯ ವ್ಯಾಪ್ತಿಯಲ್ಲಿ ಬಿದ್ದಂತಹ ಮರಗಳ ದಿಮ್ಮೆ ಹಾಗೂ ಸೌದೆಗಳ ಸಂಗ್ರಹಕ್ಕಾಗಿ ದಕ್ಷಿಣ ಹಾಗೂ ಆರ್.ಆರ್.ನಗರ ವಲಯಗಳನ್ನು ಹೊರತುಪಡಿಸಿ, ಉಳಿದ 6 ವಲಯಗಳಲ್ಲೂ ಡಿಪೋ ವ್ಯವಸ್ಥೆ ಮಾಡಲಾಗಿದ್ದು, ಉಳಿದೆರಡು ವಲಯದಲ್ಲೂ ತ್ವರಿತವಾಗಿ ಡಿಪೋ ತೆರೆಯಲು ಸೂಚನೆ ನೀಡಿದರು. ಜೊತೆಗೆ ಮರದ ಎಲೆ, ರೆಂಬೆ-ಕೊಂಬೆಗಳ ತೆರವಿಗಾಗಿ ಆಯಾ ವಲಯಗಳಲ್ಲಿ ಡಂಪಿಂಗ್ ಯಾರ್ಡ್ ವ್ಯವಸ್ಥೆ ಮಾಡಿಕೊಳ್ಳಲು ಉಪ ಅರಣ್ಯ ಸಂರಕ್ಷಾಧಿಕಾರಿಗೆ ಸೂಚನೆ ನೀಡಿದರು. 

ಹವಾಮಾನ ಮೂನ್ಸೂಚನೆಯನ್ನು ಪಾಲಿಸಿ:

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆ.ಎಸ್.ಎನ್.ಡಿ.ಎಂ.ಸಿ)ವು ಹವಾಮಾನದ ಮುನ್ಸೂಚನೆ ನೀಡಲಿದ್ದು, ಅದರನುಸಾರ ನಗರದ ಯಾವ ಭಾಗದಲ್ಲಿ ಮಳೆಯಾಗದಲಿದೆ ಎಂಬುದನ್ನು ತಿಳಿದು ಎಲ್ಲಾ ಪಾಲಿಕೆ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿಯು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಸದಾ ಸನ್ನದ್ಧರಾಗಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೂಪರ್ ಸಕ್ಕಿಂಗ್ ಯಂತ್ರಗಳನ್ನು ಪಾಲಿಕೆಗೆ ಹಸ್ತಾಂತರಿಸಿ:

ಮಳೆಗಾಲದಲ್ಲಿ ಜಲಾವೃತವಾಗುವ ಪ್ರದೇಶಗಳಲ್ಲಿ ನೀರನ್ನು ತೆರವುಗೊಳಿಸುವ ಸಲುವಾಗಿ ಜಲಮಂಡಳಿ ಬಳಿಯಿರುವಂತಹ 6 ಸೂಪರ್ ಸಕ್ಕಿಂಗ್ ಯಂತ್ರಗಳನ್ನು ಮಳೆಗಾಲ ಮುಗಿಯುವವರೆಗೆ ಪಾಲಿಕೆಗೆ ಹಸ್ತಾಂತರಿಸಲು ಮುಖ್ಯ ಆಯುಕ್ತರು ಜಲಂಡಳಿ ಅಧಿಕಾರಿಗೆ ಸೂಚನೆ ನೀಡಿದರು. 

ಕಂಟ್ರೋಲ್ ರೂಂ ಮೂಲಕ ನಿಗಾ:

ನಗರದಲ್ಲಿ ಪಾಲಿಕೆಯ 8 ವಲಯ ಹಾಗೂ ಕೇಂದ್ರ ಕಛೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ 63 ಉಪ ವಿಭಾಗ ನಿಯಂತ್ರಣ ಕೊಠಡಿಗಳಿದ್ದು, ಪಾಲಿಕೆ ಕೇಂದ್ರ ಕಛೇರಿಯಲ್ಲಿರುವ ಸೆಂಟ್ರಲ್ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಜೊತೆಗೆ ಮೇಲ್ವಿಚಾರಣೆ ಮಾಡಲಿದೆ. ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಹಾಗೂ ಸಹಾಯ ತಂತ್ರಾಂಶದ ಮೂಲಕ ಬರುವಂತಹ ದೂರುಗಳನ್ನು ನಿಯಂತ್ರಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿನ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲಿದ್ದಾರೆ.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಅನುಚೇತ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀನಿವಾಸ್, ಎಲ್ಲಾ ವಲಯ ಆಯುಕ್ತರು, ಬೆಸ್ಕಾಂ, ಜಲಮಂಡಳಿ, ಕೆ.ಪಿ.ಟಿ.ಸಿ.ಎಲ್, ಸ್ಮಾರ್ಟ್ ಸಿಟಿ, ಅಗ್ನಿಶಾಮಕ, ಎಸ್.ಡಿ.ಆರ್.ಎಫ್, ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News