ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಲು ಸುಮಲತಾ ನಿರ್ಧಾರ

ಮಂಡ್ಯ ಜಿಲ್ಲೆಯ ಮೂಡಿಗೆರೆಯ ಹುತಾತ್ಮ ಯೋಧ ಗುರು ಅವರ ಅಂತ್ಯ ಸಂಸ್ಕಾರಕ್ಕೆ ದೊಡ್ಡರಸಿನಕೆರೆ ಬಳಿಯಿರುವ ಅಂಬರೀಶ್ ಅವರಿಗೆ ಸೇರಿದ ಅರ್ಧ ಎಕರೆಯನ್ನು ಅಂತ್ಯ ಸಂಸ್ಕಾರ ಮತ್ತು ಸಮಾಧಿ ನಿರ್ಮಾಣಕ್ಕೆ ಬಿಟ್ಟುಕೊಡುವುದಾಗಿ ಸುಮಲತಾ ಹೇಳಿದ್ದಾರೆ. 

Last Updated : Feb 16, 2019, 05:12 PM IST
ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ  ನೀಡಲು ಸುಮಲತಾ ನಿರ್ಧಾರ title=

ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ ಹೆಚ್.ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡಲು ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಹೇಳಿದ್ದಾರೆ.

"ನಮ್ಮ ನೆಲದ ಸೈನಿಕ ಹುತಾತ್ಮ ಆದ ಸುದ್ದಿ ಕೇಳಿ ನನಗೆ ದುಃಖ ಆಗಿದೆ. ಸೈನಿಕನ ಅಂತ್ಯಸಂಸ್ಕಾರಕ್ಕೂ ಜಾಗ ನಿಗದಿ ಆಗಿಲ್ಲ ಅಂತಾ ಕೇಳಿ ಬೇಸರ ಆಯ್ತು. ಆಗ ನನಗನಿಸಿದ್ದು, ಮಂಡ್ಯದ ಗಂಡು, ಹುತಾತ್ಮ ಸೈನಿಕನಿಗೆ ನಾವು ಇಂಥಾ ಅವಮಾನ ಮಾಡಬಾರದು. ಹೀಗಾಗಿ ಅಂಬರೀಶ್ ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ನಮ್ಮ ಜಮೀನಿನ ಅರ್ಧ ಎಕರೆಯನ್ನು ಆ ಯೋಧನ ಅಂತ್ಯ ಸಂಸ್ಕಾರಕ್ಕೆ ಕೊಡಬೇಕು ಎಂದು ನಾನು ಮತ್ತು ನನ್ನ ಮಗ ಅಭಿಷೇಕ್ ನಿರ್ಧರಿಸಿದ್ದೇವೆ. ಒಂದು ವೇಳೆ ಸರ್ಕಾರದಿಂದ ಅಂತ್ಯ ಸಂಸ್ಕಾರಕ್ಕೆ ಈಗಾಗಲೇ ಸ್ಥಳ ನಿಗದಿ ಮಾಡಿದ್ದರೂ ಸಹ, ನಾವು ದೇಶಕ್ಕಾಗಿ ವೀರ ಮರಣವನ್ನಪ್ಪಿದ ಯೋಧನಿಗೆ ಸಲ್ಲಿಸುತ್ತಿರುವ ಗೌರವ ಎಂದು ತಿಳಿದು, ಕುಟುಂಬಸ್ಥರು ದಯಮಾಡಿ ಈ ಜಮೀನನ್ನು ಸ್ವೀಕರಿಸಬೇಕು. ಇದರಿಂದ ಅಂಬರೀಶ್ ಅವರ ಆತ್ಮಕ್ಕೂ ಶಾಂತಿ ಸಿಗಲಿದೆ" ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.

"ಸದ್ಯ ಮಗ ಅಭಿಷೇಕ್ ಅಭಿನಯದ 'ಅಮರ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕಾರಣ ಹುತಾತ್ಮ ಯೋಧ ಗುರು ಅವರನ್ನು ನೋಡಲು ಬರಲು ಸಾಧ್ಯವಾಗುತ್ತಿಲ್ಲ. ನಿಮ್ಮ ನೋವಿನಲ್ಲಿ ನಾವು ಪರೋಕ್ಷವಾಗಿ ಭಾಗಿಯಾಗುವುದರ ಜೊತೆಗೆ ವೀರ ಮರಣ ಹೊಂದಿದ ಅಷ್ಟೂ ಸೈನಿಕರಿಗೆ ಸೆಲ್ಯೂಟ್ ಮಾಡುತ್ತೇವೆ. ಈ ದಾಳಿಯಲ್ಲಿ ಅಪ್ಪನನ್ನ, ಗಂಡನನ್ನ, ಅಣ್ಣ-ತಮ್ಮಂದಿರನ್ನು ಕಳೆದುಕೊಂಡಿರುವ ಸೈನಿಕ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಈ ಮೂಲಕ ಪ್ರಾರ್ಥಿಸುತ್ತೇನೆ" ಎಂದು ಸುಮಲತಾ ಹೇಳಿದ್ದಾರೆ.

Trending News