ಆಕ್ಸಿ ಮಿತ್ರ ನೂತನ ಅಭಿಯಾನಕ್ಕೆ ಕೈಜೋಡಿಸಲು ಆಮ್ ಆದ್ಮಿ ಪಕ್ಷ ಕರೆ

ಆಗಸ್ಟ್ ತಿಂಗಳ 6 ನೇ ತಾರೀಕಿನಂದು ಆಪ್ ಕೇರ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದ ಆಮ್ ಆದ್ಮಿ ಪಕ್ಷ ಪಕ್ಷ ಈಗ ಆಕ್ಸಿ ಮಿತ್ರ ಎನ್ನುವ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದೆ.

Last Updated : Sep 1, 2020, 06:24 PM IST
ಆಕ್ಸಿ ಮಿತ್ರ ನೂತನ ಅಭಿಯಾನಕ್ಕೆ ಕೈಜೋಡಿಸಲು ಆಮ್ ಆದ್ಮಿ ಪಕ್ಷ ಕರೆ title=

ಬೆಂಗಳೂರು: ಆಗಸ್ಟ್ ತಿಂಗಳ 6 ನೇ ತಾರೀಕಿನಂದು ಆಪ್ ಕೇರ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದ ಆಮ್ ಆದ್ಮಿ ಪಕ್ಷ ಪಕ್ಷ ಈಗ ಆಕ್ಸಿ ಮಿತ್ರ ಎನ್ನುವ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದೆ.

ಈ ಅಭಿಯಾನದ ಕುರಿತಾಗಿ ಮಾತನಾಡಿದ ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಈ ಅಭಿಯಾನದ ಮೂಲಕ ಸಾರ್ವಜನಿಕರ ದೇಹದ ಉಷ್ಣತೆ ಹಾಗೂ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಲಾಗಿದೆ, ಇದುವರೆಗೂ ಸುಮಾರು 1.27 ಲಕ್ಷ ಜನರನ್ನು ಭೇಟಿ ಮಾಡಿ ತಪಾಸಣೆಗೆ ಒಳಪಡಿಸಿದ್ದೇವೆ. 1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರಿನ ಜನರಲ್ಲಿ ನಾವು ತಲುಪಿರುವುದು ಕೇವಲ ಶೇ 1 ರಷ್ಟು ಮಾತ್ರ ಆದ ಕಾರಣ “ಆಕ್ಸಿ ಮಿತ್ರ” ದೇಹದ ಆಮ್ಲಜನಕ ಪ್ರಮಾಣ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಇಂದು ನಾವು ಬೆಂಗಳೂರಿನಾದ್ಯಂತದ ಜನರನ್ನು "ಆಕ್ಸಿಮಿತ್ರ ಅಭಿಯಾನ" ಕ್ಕೆ ಸ್ವಯಂಸೇವಕರಾಗಲು ಮತ್ತು ನಮ್ಮ ನಗರದ ಸಾವಿರಾರು ಜನರ ಜೀವ ಉಳಿಸಲು ಕೈಜೋಡಿಸುವ ಆಸಕ್ತಿ ಇರುವವರು ದೂರವಾಣಿ  8884431202 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು, ಅಧಿಕಾರ ಇಲ್ಲದ ನಾವುಗಳೇ ಕೇವಲ 20 ದಿನದಲ್ಲಿ ಇಷ್ಟೊಂದು ಪ್ರಮಾಣದ ಜನರನ್ನು ತಲುಪಿದ್ದೇವೆ ಎಂತಾದರೆ, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಆಪ್ ಕೇರ್ ಅಭಿಯಾನ ನಡೆಸುವ ವೇಳೆ ನಾವು ಕೈಗೊಂಡ ಸಮೀಕ್ಷೆಯಲ್ಲಿ ತಿಳಿದ ಅಂಶದ ಪ್ರಕಾರ ಸುಮಾರು 10 ಜನರಲ್ಲಿ 4 ಜನ ಕಡಿಮೆ ಆಮ್ಲಜನಕದ ಮಟ್ಟ ಹೊಂದಿದ್ದಾರೆ. ಹೆಚ್ಚಿನ ಜನಸಾಮಾನ್ಯರಿಗೆ ಇದು  ಕೊರೋನಾ ಸೋಂಕಿನ ರೋಗಲಕ್ಷಣ ಎಂದು ತಿಳಿಯದ ಕಾರಣ, ಅಂತಹವರಿಗೆ  ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಲು ಸಹಾಯ ಮಾಡಲಾಯಿತು, ಆಸ್ಪತ್ರೆಗೆ ದಾಖಲಿಸಲಾಯಿತು, ಹಾಸಿಗೆ ಸಿಗುವಂತೆ ನೋಡಿಕೊಳ್ಳಲಾಯಿತು, ಸಾಕಷ್ಟು ಜನ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕೊರೋನಾ ಬಂದವರನ್ನು ದೇವರೇ ಕಾಪಾಡಬೇಕು ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರು ನಮ್ಮ ಕರ್ನಾಟಕದ ಜನರ ಕೈ ಬಿಟ್ಟಿರಬಹುದು ಆದರೆ ಎಎಪಿಯ ಸ್ವಯಂಸೇವಕರು, ನಮ್ಮ ಬೆಂಬಲಿಗರು ಜನರನ್ನು ಎಂದಿಗೂ ಬಿಡುವುದಿಲ್ಲ. ಈ ಹೋರಾಟದಲ್ಲಿ ನಾವು ಜನರೊಂದಿಗೆ ಇದ್ದೇವೆ, ಎಲ್ಲಾ ರೀತಿಯಲ್ಲಿ ಇರುತ್ತೇವೆ ಎಂದು ಆಮ್ ಆದ್ಮಿ ಪಕ್ಷ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶರತ್ ಖಾದ್ರಿ ನುಡಿದರು.

ಪ್ರತಿಯೊಬ್ಬರನ್ನು ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಅದರ ಬದಲು ತಾಪಮಾನ ಮತ್ತು ಆಮ್ಲಜನಕ ಮಟ್ಟವನ್ನು ಪರೀಕ್ಷೆ ಮಾಡುವುದರಿಂದ ರೋಗಿಗಳನ್ನು ಗುರುತಿಸಲು ಸಹಾಯವಾಗುತ್ತದೆ. ಈ ಕೆಲಸವನ್ನು ಮಾಡುವ ವಾರ್ಡ್ ಮಟ್ಟದ "ಎಎಪಿ ಕೇರ್" ತಂಡಗಳು ನಡೆಸುತ್ತವೆ.  ಆಕ್ಸಿ ಮಿತ್ರ ಆಮ್ಲಜನಕ ಮಟ್ಟ ತಪಾಸಣಾ ಕೇಂದ್ರಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರಿಗೆ ಅಗತ್ಯವಿರುವ ತರಬೇತಿ, ಉಪಕರಣಗಳು ಮತ್ತು ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಬಿಟಿಎಂ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಮಂಜುನಾಥ್ ಬನಶಂಕರಿ ಆಪ್ ಕೇರ್ ಅಭಿಯಾನದ ವೇಳೆ ತಮಗೆ ಆದ ಅನುಭವ ಹಂಚಿಕೊಂಡರು, ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್, ಯಲಹಂಕ ಕ್ಷೇತ್ರ ಅಧ್ಯಕ್ಷ ಪಣಿರಾಜ್ ಇದ್ದರು.

ದೇಹದ ಆಮ್ಲಜನಕ ಪ್ರಮಾಣ ತಪಾಸಣೆ ಮಾಡುವ ಆಕ್ಸಿ ಮಿತ್ರ ತಪಾಸಣಾ ಕೇಂದ್ರಗಳ ಸ್ಥಾಪನೆ ಕುರಿತಾಗಿ ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅಭಿಯಾನದ ಬ್ಯಾನರ್‌ ಹಾಗೂ ಆಕ್ಸಿ ಮೀಟರ್‌ಗಳನ್ನು ಆಮ್‌ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್‌ ದಾಸರಿ, ಉಪಾಧ್ಯಕ್ಷರಾದ ಸುರೇಶ್‌ ರಾಥೋಡ್‌, ಬೆಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಶರತ್‌ ಖಾದ್ರಿ, ಯಲಹಂಕ ಕ್ಷೇತ್ರ ಅಧ್ಯಕ್ಷರಾದ ಪಣಿರಾಜ್‌, ಮಂಜುನಾಥ್‌ ಬನಶಂಕರಿ ಬಿಡುಗಡೆ ಮಾಡಿದರು

 

Trending News