ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆಗೊಂಡ ಐದು ತಿಂಗಳ ನಂತರ ಸಮಿತಿ ತಜ್ಞರು ಸಭೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಧ್ವಜದ ವಿಚಾರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗೆ ಕಾನೂನಾತ್ಮಕ ರೂಪವನ್ನು ಕೊಡಲು ನಿರ್ಧರಿಸಿರುವ ಸರ್ಕಾರ ಜೂನ್ 6 ರಂದು ಒಂಭತ್ತು ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚನೆಮಾಡಿತ್ತು. ಸಮಿತಿ ರಚನೆಗೊಂಡ ಐದು ತಿಂಗಳ ನಂತರ ಮೊದಲ ಬಾರಿಗೆ ಈ ಸಭೆ ಇಂದು ವಿಕಾಸ ಸೌಧದಲ್ಲಿ ನಡೆಯುತ್ತಿದೆ.
ಧ್ವಜದ ವಿನ್ಯಾಸ ಮತ್ತು ಕಾನೂನು ಪರಿಮಿತಿಯನ್ನು ಕುರಿತು ಸಭೆಯು ಸರ್ಕಾರಕ್ಕೆ ವರದಿ ನೀಡಬೇಕಿದೆ. ಬೆಳಗಾವಿ ಅಧಿವೇಶನದ ಒಳಗೆ ವರದಿ ಸಿದ್ಧಪಡಿಸಿ ಕೊಡಬೇಕೆಂಬುದು ಕೆಲವು ಸದಸ್ಯರ ಅಭಿಪ್ರಾಯವಾಗಿದೆ. ಅಲ್ಲದೆ ಈ ವಿಷಯವು ಬೆಳಗಾವಿ ಅಧಿವೇಶನದಲ್ಲಿ ಬಾರಿ ಚರ್ಚೆಗೆ ಒಳಗಾಗುವ ವಿಷಯವೂ ಹೌದು.
ಅ.31ರಂದು ಸಮಿತಿಯ ಸದಸ್ಯರಾದ ಚಂಪಾ ಮತ್ತು ಎಸ್.ಜಿ. ಸಿದ್ದರಾಮಯ್ಯ ತಮ್ಮ ಬೇಸರ ವ್ಯಕ್ತಪಡಿಸಿದ್ದರು.