‘ಭಾರತ್ ಜೋಡೊ ಯಾತ್ರೆ’ಯ ಯಶಸ್ಸು ಬಿಜೆಪಿಯ ನಿದ್ದೆಗೆಡಿಸಿದೆ: ಸಿದ್ದರಾಮಯ್ಯ

Bharat Jodo Yatra: ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರಿಗೆ ಪ್ರಧಾನಿ ಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

Written by - Puttaraj K Alur | Last Updated : Mar 20, 2023, 02:02 PM IST
  • ‘ಭಾರತ್ ಜೋಡೊ ಯಾತ್ರೆ’ಯ ಯಶಸ್ಸು ಆಡಳಿತಾರೂಢ ಬಿಜೆಪಿ ಸರ್ಕಾರದ ನಿದ್ದೆಗೆಡಿಸಿದೆ
  • ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ
  • ಇದಕ್ಕೆ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ
‘ಭಾರತ್ ಜೋಡೊ ಯಾತ್ರೆ’ಯ ಯಶಸ್ಸು ಬಿಜೆಪಿಯ ನಿದ್ದೆಗೆಡಿಸಿದೆ: ಸಿದ್ದರಾಮಯ್ಯ   title=
ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕಾಂಗ್ರೆಸ್‍ನ ‘ಭಾರತ್ ಜೋಡೊ ಯಾತ್ರೆ’ಯ ಯಶಸ್ಸು  ಆಡಳಿತಾರೂಢ ಬಿಜೆಪಿ ಸರ್ಕಾರದ ನಿದ್ದೆಗೆಡಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರ ಭೇಟಿ ವಿಚಾರವಾಗಿ ಸೋಮವಾರ ಟ್ವೀಟ್ ಮಾಡಿರುವ ಅವರು, ‘ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರಿಗೆ ಪ್ರಧಾನಿ ಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಶಾಸಕ ಮಹೇಶ್ ವಿರುದ್ಧ ತಿರುಗಿಬಿದ್ದ ನಗರಸಭೆ ಸದಸ್ಯರು!!

‘ಕಾಶ್ಮೀರದಲ್ಲಿ ಮಹಿಳೆಯರೆಲ್ಲರೂ ಸುರಕ್ಷಿತರಾಗಿದ್ದಾರೆಯೇ? ಅವರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲವೇ? ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲಿಗೆ ದೂರುದಾರರ ಬೆನ್ನು ಹತ್ತಿರುವ ಸರ್ಕಾರದ ದುರುದ್ದೇಶ ಅರ್ಥವಾಗದಷ್ಟು ದೇಶದ ಜನ ಮೂರ್ಖರಲ್ಲ’ವೆಂದು ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉದ್ಯಮಿ ಗೌತಮ್ ಅದಾನಿ ಹಗರಣಗಳ ಬಗ್ಗೆ ದನಿ ಎತ್ತಿದ ದಿನದಿಂದ ಪ್ರಧಾನಿ ಮೋದಿಯವರ ಬಿಜೆಪಿ ಸರ್ಕಾರ ರಾಹುಲ್ ಗಾಂಧಿಯವರ ಬೆನ್ನು ಹತ್ತಿದೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಅಲ್ಲವೇ? ಕಳ್ಳರ ಮನಸ್ಸು ಹುಳ್ಳಗೆ. ಬಿಜೆಪಿಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ-ಗೌರವ ಇರುವುದಾಗಿದ್ದರೆ ಮೊದಲು ತಮ್ಮ ಪಕ್ಷದಲ್ಲಿ ಮಹಿಳಾ ಪೀಡನೆಯ ಆರೋಪ ಹೊತ್ತಿರುವವರ ಬಗ್ಗೆ ತನಿಖೆ ನಡೆಸಲು‌ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ. ಆರೋಪಿಗಳ ಪಟ್ಟಿ ಉದ್ದ ಇದೆ ಅಮಿತ್ ಮತ್ತು ಪ್ರಧಾನಿ ಮೋದಿಯವರೇ’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಇದನ್ನೂ ಓದಿ: Muniratna : ಉರಿಗೌಡ ದೊಡ್ಡನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಮುನಿರತ್ನ!

‘ಭಾರತ್ ಜೋಡೊ ಯಾತ್ರೆಯ ಯಶಸ್ಸು  ಆಡಳಿತಾರೂಢ ಬಿಜೆಪಿ ಸರ್ಕಾರ ನಿದ್ದೆಗೆಡಿಸಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಜನಪ್ರಿಯತೆ ಅವರಲ್ಲಿ ಅಸೂಯೆ ಹುಟ್ಟಿಸಿದೆ. ಇವರಿಗೆಲ್ಲ ನನ್ನ ಸಂತಾಪಗಳು. ರಾಹುಲ್ ಗಾಂಧಿಯವರ ಹೋರಾಟ ನಿಲ್ಲದು, ಇಡೀ ದೇಶ ಅವರ ಜೊತೆಗಿದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News