DK Shivakumar: ಮೋದಿ ಅವರು ತಮ್ಮ ವಿರುದ್ಧದ ಟೀಕೆಗಳ ಲೆಕ್ಕ ನೀಡುವ ಬದಲು ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಲೆಕ್ಕ ನೀಡಲಿ- ಡಿ.ಕೆ.ಶಿವಕುಮಾರ್

Karnataka Election 2023: ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಲೆಕ್ಕ ನೀಡುತ್ತಿದ್ದಾರೆ. ಅದರ ಬದಲು ಅವರ ಡಬಲ್ ಇಂಜಿನ್ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಲೆಕ್ಕ ಹೇಳಬೇಕಿತ್ತು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Written by - Prashobh Devanahalli | Edited by - Chetana Devarmani | Last Updated : Apr 30, 2023, 05:26 PM IST
  • ಮೋದಿ ಅವರು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ
  • ಅವರಿಗೂ ರಾಜ್ಯ ಚುನಾವಣೆಗೆ ಏನು ಸಂಬಂಧ?
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ
DK Shivakumar: ಮೋದಿ ಅವರು ತಮ್ಮ ವಿರುದ್ಧದ ಟೀಕೆಗಳ ಲೆಕ್ಕ ನೀಡುವ ಬದಲು ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಲೆಕ್ಕ ನೀಡಲಿ- ಡಿ.ಕೆ.ಶಿವಕುಮಾರ್ title=

ಬೆಂಗಳೂರು: ಸದಾಶಿವನಗರ ನಿವಾಸದಲ್ಲಿ ಜೆಡಿಎಸ್, ಬಿಜೆಪಿ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜತೆ ಭಾನುವಾರ ಮಾತನಾಡಿದ ಶಿವಕುಮಾರ್, ರಾಜ್ಯಕ್ಕೆ ಪ್ರಧಾನಿಗಳು, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಂದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ವಿಶ್ವಗುರು ಎಂದೇ ಕರೆದುಕೊಳ್ಳುವ ಮೋದಿ ಅವರು ಅಷ್ಟು ದೊಡ್ಡ ಸ್ಥಾನದಲ್ಲಿದ್ದು, ಅವರು ರಾಜ್ಯಕ್ಕೆ ಬಂದು ಅವರ ವಿರುದ್ಧದ ಟೀಕೆಗಳ ಲೆಕ್ಕ ಹೇಳುತ್ತಿದ್ದಾರೆ. ಆದರೆ ರಾಜ್ಯದ ಜನ ಅವರ ಸಾಧನೆ, ಅಭಿವೃದ್ಧಿ ಕಾರ್ಯಕ್ರಮಗಳ ಲೆಕ್ಕ ಹೇಳುತ್ತಾರೆ ಎಂದು ಕಾಯುತ್ತಿದ್ದಾರೆ ಎಂದು ಹೇಳಿದರು.

ಮೋದಿ ಅವರು ಕೋವಿಡ್ ಸಂದರ್ಭದಲ್ಲಿ 20 ಲಕ್ಷ ಕೋಟಿ ಪ್ಯಾಕೆಜ್ ಘೋಷಣೆ ಮಾಡಿದ್ದು ಯಾವ ವರ್ಗದವರಿಗೆ ಎಷ್ಟು ಪರಿಹಾರ ನೀಡಲಾಗಿದೆ, ಕೋವಿಡ್ ಮೃತರಿಗೆ, ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಎಷ್ಟು ಪರಿಹಾರ ನೀಡಿದ್ದಾರೆ ಎಂಬ ಲೆಕ್ಕ ನೀಡಲೇ ಇಲ್ಲ. ಈ ವಿಚಾರವಾಗಿ ಮಾತನಾಡಿದ್ದಾರೆ ಅವರಿಗೆ ಗೌರವ ಇರುತ್ತಿತ್ತು  ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸದ್ಯದಲ್ಲೇ ಧೂಳೀಪಟವಾಗಲಿದೆ : ಪ್ರಹ್ಲಾದ್ ಜೋಶಿ ಭವಿಷ್ಯ

ಮೋದಿ ಅವರು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಅವರಿಗೂ ರಾಜ್ಯ ಚುನಾವಣೆಗೆ ಏನು ಸಂಬಂಧ? ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಅವರ ಮುಖ ನೋಡಿ ಮತ ನೀಡಬೇಕು. ಬೊಮ್ಮಾಯಿ, ಯಡಿಯೂರಪ್ಪ, ಅವರ ಮಂತ್ರಿಗಳ ಸಾಧನೆ ಬಗ್ಗೆ ಮಾತನಾಡುತ್ತಿಲ್ಲ. ದಕ್ಷ ಆಡಳಿತಕ್ಕೆ ಹೆಸರಾಗಿರುವ ಕರ್ನಾಟಕ ರಾಜ್ಯದಲ್ಲಿ ಇವರು ತಮ್ಮ ಆಡಳಿತ ಹೇಗಿತ್ತು ಎಂಬುದನ್ನು ಹೇಳುತ್ತಿಲ್ಲ.  ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಆದರೆ ರಾಜ್ಯದಲ್ಲಿ ನಾಯಕತ್ವವನ್ನು ಬಿಂಬಿಸಬೇಕಲ್ಲವೆ. ಬಿಜೆಪಿ ಇಂತಹ ದುಸ್ಥಿತಿಗೆ ಬಂದಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಪ್ರಧಾನಿ, ನಡ್ಡಾ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ.  200 ಯೂನಿಟ್ ವಿದ್ಯುತ್ ಉಚಿತ, 2 ಸಾವಿರ ಖಚಿತ, 10 ಕೆ.ಜಿ ಅಕ್ಕಿ ನಿಶ್ಚಿತ, ಎಲ್ಲಾ ಮಹಿಳೆಯರಿಗೆ ಸಾರ್ವಜನಿಕ ಬಸ್ ಪ್ರಯಾಣ ಉಚಿತ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ. ಈ ಐದು ಯೋಜನೆಗಳನ್ನು ಸರ್ಕಾರ ಬಂದ ಮೊದಲ ಸಂಪುಟದಲ್ಲಿ ಜಾರಿ ಮಾಡಿ ಜೂನ್ ತಿಂಗಳಿಂದ ಜಾರಿ ಮಾಡುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಎಲ್ಲಾ ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಹಳೆ  ಪಿಂಚಣಿ ಬಗ್ಗೆ ಆಲೋಚನೆ ಮಾಡಿದ್ದು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶ, ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲಾಗುವುದು  ಎಂದು ಹೇಳಿದರು.

ಸಂಪನ್ಮೂಲ ಕ್ರೋಢೀಕರಣ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಬಿಜೆಪಿ ಭ್ರಷ್ಟಾಚಾರ ನಿಲ್ಲಿಸಿದರು ಈ ಯೋಜನೆಗಳಿಗೆ ಹಣ ಸಂಗ್ರಹ ಮಾಡಬಹುದು. ನಾನು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ತವರು ಮಂಡ್ಯ ಹಾಗೂ ಹಾಸನ ಜಿಲ್ಲೆ ಪ್ರವಾಸ ಮಾಡಿದ್ದೆವು. ಅಲ್ಲಿ ಜನ ತೋರಿದ ವಿಶ್ವಾಸ ಪ್ರೀತಿ, ಮೇ 10ರಂದು ಬದಲಾವಣೆ ಗಾಳಿ ಬೀಸಲಿದೆ ಎಂದು ಸಾಬೀತು ಮಾಡಿತ್ತು. ನನ್ನ ಮೇಲೆ, ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಮೇಲೆ ವಿಶೇಷ ಪ್ರೀತಿ ತೋರಿ ನಮಗೆ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿ ನಮ್ಮನ್ನು ಹರಸಿ ಕಳುಹಿಸಿದ್ದಾರೆ  ಎಂದು ಹೇಳಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಯಾರ ಕೈ ಹಿಡಿಯಲಿದ್ದಾನೆ ಮತದಾರ ಪ್ರಭು?

ಗ್ಯಾರಂಟಿ ಯೋಜನೆ ಜಾರಿ ಅಸಾಧ್ಯ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ' ರಾಜ್ಯದ ಜನರಿಗೆ ಅಸಾಧ್ಯವನ್ನು ಸಾಧ್ಯ ಮಾಡುವುದೇ ಮುಖ್ಯ. ಇಂಧನ ಸಚಿವ ಆದಾಗ 10 ಸಾವಿರ ಮೆಗಾ ವ್ಯಾಟ್ ಇದ್ದ ವಿದ್ಯುತ್ ಉತ್ಪಾದನೆ 20 ಸಾವಿರ ಮೆ.ವ್ಯಾಟ್ ಗೆ ಏರಿಕೆ ಮಾಡಲಾಯಿತು. ಅಲ್ಲದೆ ಒಬ್ಬ ರೈತನ ಜಮೀನನ್ನು ವಶಪಡಿಸಿಕೊಳ್ಳದೇ ಈ ಸಾಧನೆ ಮಾಡಲಾಗಿದೆ. ಇದು ಹೇಗೆ ಸಾಧ್ಯ ಆಯಿತು? ನಾವು ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದಾಗ ಬಿಜೆಪಿ ಸರ್ಕಾರ ಅದೇ ಮಾದರಿಯಲ್ಲಿ ಗೃಹಿಣಿ ಶಕ್ತಿ ಯೋಜನೆ ಬಗ್ಗೆ ಜಾಹೀರಾತು ನೀಡಿದರು. ನೀವು ಹೇಗೆ ಘೋಷಣೆ ಮಾಡಿದಿರಿ. ರೈತರಿಗೆ 10 ತಾಸು ವಿದ್ಯುತ್ ನೀಡುತ್ತೇವೆ ಎಂದು ಹೇಗೆ ಹೇಳಿದಿರಿ? ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದು ನೀವೇ ಅಲ್ಲವೇ? ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಡೀಸೆಲ್  ಬೆಲೆ ಯಾಕೆ ಹೆಚ್ಚಳ ಮಾಡುತ್ತಿದ್ದೀರಿ' ಎಂದು ತಿಳಿಸಿದರು.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂಬ ಪ್ರಧಾನಿ ಹೇಳಿಕೆ ಬಗ್ಗೆ ಕೇಳಿದಾಗ, ' ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಗೆ ನೇಮಿಸಿತು. ಬಿಜೆಪಿ ನಾಯಕರು ಅವರ ಪಕ್ಷ ಕಟ್ಟಿ ಬೆಳೆಸಿದ ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಯಡಿಯೂರಪ್ಪ ಅವರಿಗೆ ಮಾಡಿರುವ ಅಪಮಾನ ಬಗ್ಗೆ ಯೋಚಿಸಿ. ನಿಮ್ಮ ಮನೆ ನೀವು ಸರಿ ಮಾಡಿಕೊಳ್ಳಿ. ಅಂಬೇಡ್ಕರ್ ಅವರ ಫೋಟೋ ನಾವು ಇಟ್ಟುಕೊಂಡಿದ್ದೇವೆ. ನೀವು ರಾಷ್ಟ್ರಧ್ವಜ ಕೂಡ ಹಾರಿಸಿರಲಿಲ್ಲ. ವಾಜಪೇಯಿ ಹೇಳಿದ ನಂತರ ಹಾರಿಸಿದ್ದೀರಿ' ಎಂದು ತಿಳಿಸಿದರು.

ಪರಮೇಶ್ವರ್ ಅವರ ಮೇಲಿನ ದಾಳಿ ನಾಟಕ ಎಂದಿರುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ' ನಾನಾಗಲಿ ಪರಮೇಶ್ವರ್ ಅವರಾಗಲಿ ನಿರ್ದೇಶಕರೂ ಅಲ್ಲ, ನಿರ್ಮಾಪಕರು ಅಲ್ಲ. ಕುಮಾರಣ್ಣ ಏನಾದರೂ ಮಾಡಿಕೊಳ್ಳಲಿ. ಅವರು ದೊಡ್ಡ ನಿರ್ಮಾಪಕರು ಏನಾದರೂ ಹೇಳಲಿ. ಪರಮೇಶ್ವರ್ ಅವರು ಸರಳ ವ್ಯಕ್ತಿ. ಅವರು ವಿದ್ಯಾವಂತ, ಪ್ರಜ್ಞಾವಂತರು. ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ನಾವು ದಿನ ನಿತ್ಯ ಬಣ್ಣ ಹಚ್ಚಿ ನಾಟಕ ಮಾಡುತ್ತಿಲ್ಲ ಎಂದು ತಿಳಿಸಿದರು. 

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲಿದೆ ಎಂದು ಕೇಳಿದಾಗ, 'ಇಡೀ ರಾಜ್ಯದಲ್ಲಿ ಕಾಂಗ್ರೆಸ್ ದಾಳಿ ಬೀಸಿದ್ದು, ಹಾಸನ ಮತ್ತು ಮಂಡ್ಯದಲ್ಲಿ ಉತ್ತಮ ಗೆಲುವು ಸಾಧಿಸುತ್ತೇವೆ' ಎಂದು ತಿಳಿಸಿದರು.

ಇದನ್ನೂ ಓದಿ: ಮಾನ್ಯ ನರೇಂದ್ರ ಮೋದಿ ಅವರೇ ಈಗಲಾದರೂ ‘‘ಜನ್ ಕಿ ಬಾತ್” ಕೇಳುತ್ತಿರಾ? : ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News