ಕೆಎಂಎಫ್ ಆಪೋಷನಕ್ಕೆ 2008 ರಲ್ಲೇ ಪ್ರಯತ್ನಿಸಿದ್ದ ಬಿಜೆಪಿ- ಎಚ್ಡಿಕೆ ಗಂಭೀರ ಆರೋಪ

ಕೆಎಂಎಫ್ ಆಪೋಷನಕ್ಕೆ ಕೇಂದ್ರ ಬಿಜೆಪಿ ಸರಕಾರ ಮೂರನೇ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; 2008ರಲ್ಲಿಯೇ ನಂದಿನಿಯನ್ನು ಮುಗಿಸಲು ಬಿಜೆಪಿ ಹೊರಟಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

Written by - Prashobh Devanahalli | Edited by - Manjunath N | Last Updated : Apr 10, 2023, 06:24 PM IST
  • ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ
  • ಕರ್ನಾಟಕವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದೇ ಬಿಜೆಪಿ ದುರುದ್ದೇಶ
  • ಇಂದು ಕರ್ನಾಟಕ; ನಾಳೆ ತಮಿಳುನಾಡು, ನಾಡಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಆಚೆ ನಾಡಿದ್ದು ಕೇರಳ
 ಕೆಎಂಎಫ್ ಆಪೋಷನಕ್ಕೆ 2008 ರಲ್ಲೇ ಪ್ರಯತ್ನಿಸಿದ್ದ ಬಿಜೆಪಿ- ಎಚ್ಡಿಕೆ ಗಂಭೀರ ಆರೋಪ title=
file photo

ಬೆಂಗಳೂರು: ಕೆಎಂಎಫ್ ಆಪೋಷನಕ್ಕೆ ಕೇಂದ್ರ ಬಿಜೆಪಿ ಸರಕಾರ ಮೂರನೇ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; 2008ರಲ್ಲಿಯೇ ನಂದಿನಿಯನ್ನು ಮುಗಿಸಲು ಬಿಜೆಪಿ ಹೊರಟಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 2008ರಲ್ಲಿಯೇ ರಾಜ್ಯದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಮುಲ್ ಮಾರುಕಟ್ಟೆ ವಿಸ್ತರಣೆಗೆ ಬೆಂಬಲ ನೀಡಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: CRPF Exam: ಕನ್ನಡ ನಿರ್ಲಕ್ಷ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ, ಮರು ಪರೀಕ್ಷೆಗೆ ಆಗ್ರಹ

ಸ್ವಯಂ ಘೋಷಿತ ದೇಶೋದ್ಧಾರಕ ಪಕ್ಷ ರಾಷ್ಟ್ರ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ಪಕ್ಷಗಳ ರಾಜಕಾರಣವೇ ಅನುಮಾನಾಸ್ಪದ. ಒಂದೆಡೆ ಉದ್ಧರಿಸುವ  ಮಾತು, ಇನ್ನೊಂದೆಡೆ ಕತ್ತರಿಸುವ ಕೆಲಸ. ಮಾತು ಒಂದು, ಕೃತಿ ಇನ್ನೊಂದು!! ಇದು ಬಿಜೆಪಿಯ (ಭರ)ವರಸೆ!! ಎಂದಿರುವ ಅವರು ಬಿಜೆಪಿಯೇ ಭರವಸೆ ಎನ್ನುವ ಆ ಪಕ್ಷದ ಘೋಷ ವಾಕ್ಯವನ್ನು ಬಿಜೆಪಿಯ ವರಸೆ ಎಂದು ಮೂದಲಿಸಿ, ಅದನ್ನೇ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ಒಂದು ಕಡೆ ಸಫಾರಿ! ಇನ್ನೊಂದು ಕಡೆ ಸುಪಾರಿ!! ಇದು ಬಿಜೆಪಿಯು ಆದಿಯಿಂದ ನಡೆದುಕೊಂಡು ಬಂದ ದಾರಿ. ಕೆಎಂಎಫ್ ಮತ್ತು ನಂದಿನಿ ವಿಷಯದಲ್ಲೂ ಆ ಪಕ್ಷದ್ದು ಅದೇ ವರಸೆ. ಸ್ಲೋಗನ್ ನಲ್ಲಿ ಮಾತ್ರ  'ಬಿಜೆಪಿಯೇ ಭರವಸೆ', ಇದೇ ನೋಡಿ ಅದರ ಅಸಲಿ ವರಸೆ!! ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ತಮ್ಮೆಲ್ಲ ಅಗಾಧ ಕಾರ್ಯಭಾರ ಬದಿಗಿಟ್ಟು ಸಫಾರಿ ಮಾಡಿಹೋಗಿದ್ದಾರೆ. ಸ್ಥಳಕ್ಕೊಂದು ಪೋಷಾಕು ಧರಿಸುವ ಅವರ ಬಗ್ಗೆ ಮಾತಾಡಿದರೆ, ನನಗೆ ಅವರ ಧಿರಿಸಿನ ಬಗ್ಗೆ ಗೊತ್ತೇ ಇಲ್ಲ ಎನ್ನುವುದು ಸಚಿವ ಅಶ್ವತ್ಥನಾರಾಯಣ ಅವರ ಕುಹಕದ ಮಾತು ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು; ಸಿಟಿ ರವಿ. ಈ ಮಹಾಶಯರು, ಮೋದಿ ಅವರ ಬಗ್ಗೆ ಟೀಕೆ ಮಾಡಿದರೆ ಅವರ ಎತರಕ್ಕೆ ಏರಲು ಸಾಧ್ಯವಿಲ್ಲ ಎಂದು ಆಣಿಮುತ್ತು ಉದುರಿಸಿದ್ದಾರೆ. ನಾವು ಅವರ ಮಟ್ಟಕ್ಕೆ ಏರುವುದೂ ಇಲ್ಲ, ಸಿ.ಟಿ.ರವಿ ಅವರ ಮಟ್ಟಕ್ಕೆ ಇಳಿಯುವುದೂ ಇಲ್ಲ. ಆದರೆ, ಕರ್ನಾಟಕವನ್ನು ಗುಜರಾತಿಗಳಿಗೆ ಒತ್ತೆ ಇಡುವ ಪಾಪದ ಕೆಲಸವನ್ನಂತು ನಾವು ಮಾಡುತ್ತಿಲ್ಲ ಎಂದು ಕಾಲೆಳೆದಿದ್ದಾರೆ.

ಅಸಲಿ ವಿಷಯ ಅದಲ್ಲ! ಈಗಲ್ಲ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಕೆಎಂಎಫ್ ಅನ್ನು ಮುಗಿಸಲು ಸುಪಾರಿ ಕೊಡಲಾಗಿತ್ತು!! ಅಂದರೆ 2008ರಲ್ಲೇ ಕನ್ನಡಿಗರ ಮೇಲೆ ಅಮುಲ್ ಅನ್ನು ಹೇರಿ, ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು. ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ ಬಿಜೆಪಿ ಸರಕಾರ. ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು,  ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!! ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: "ನಾಯಕರನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ಬಿಜೆಪಿಯಿಂದ ಪಟ್ಟಿ ಬಿಡುಗಡೆ ವಿಳಂಬ"

ಅಂದು ಅಮುಲ್‌ ಘಟಕದ ಬಗ್ಗೆ ಜೆಡಿಎಸ್ ಪಕ್ಷವು ಭಾರೀ ವಿರೋಧ ವ್ಯಕ್ತಪಡಿಸಿತ್ತು, ಕೆಎಂಎಫ್ʼನ ಅಂದಿನ ಅಧ್ಯಕ್ಷರಾಗಿದ್ದ ಹೆಚ್.ಡಿ.ರೇವಣ್ಣ ಅವರು, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಮುಲ್ ಹಾಲು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು.ಅಂದು ಬಿಜೆಪಿಗರು ಮೋದಿ ಅವರನ್ನು ಮೆಚ್ಚಿಸಲು ಅಮುಲ್ ಪರ ವಕಾಲತ್ತು ವಹಿಸಿ,ನಂದಿನಿಯನ್ನು ಮುಗಿಸಲು ಹೊರಟಿದ್ದರು. ಅಂದಿನ ಮುಖ್ಯಮಂತ್ರಿಗಳೂ ಸೇರಿ ಬಿಜೆಪಿ ಮುಂಚೂಣಿ ನಾಯಕರು ಅಮುಲ್ ಪರ ಬ್ಯಾಟ್ ಬೀಸಿದ್ದರು.ಈಗ ಪಾತ್ರಗಳು ಬದಲಾಗಿವೆ. ಸಿಟಿ ರವಿ, ಸಚಿವರಾದ ಸುಧಾಕರ್, ಅಶ್ವತ್ಥನಾರಾಯಣ ಇತರರು ರಂಗದ ಮೇಲಿದ್ದಾರಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಅವರು ಟಾಂಗ್ ನೀಡಿದ್ದಾರೆ.

ಕರ್ನಾಟಕವನ್ನು ಗುಜರಾತಿನ ವಸಾಹತು ಮಾಡುವ ಬಿಜೆಪಿಯ ಹುನ್ನಾರ ಇಂದು ನಿನ್ನೆಯದಲ್ಲ. ವೈಬ್ರೆಂಟ್ ಗುಜರಾತಿನ ಮಹತ್ವಾಕಾಂಕ್ಷೆಯ ಹಿಂದೆಯೇ ಕರ್ನಾಟಕವನ್ನು ಕೆಳಕ್ಕೆ ಕೆಡಹುವ ಬಿಜೆಪಿಯ ಧೂರ್ತ ಅಜೆಂಡಾ ಈ ಚುನಾವಣೆ ಹೊತ್ತಿನಲ್ಲಿ ಬಟಾ ಬಯಲಾಗಿದೆ. 15 ವರ್ಷಗಳ ಹಳೆಯ ಸಂಚಿಗೆ ಮತ್ತೆ ಜೀವ ನೀಡಲಾಗಿದೆ. ಕರ್ನಾಟಕದ ಬ್ಯಾಂಕುಗಳು ಹೋದವು, ಭದ್ರಾವತಿಯ ವಿಎಸ್ ಎನ್ ಎಲ್ ಇನ್ನೇನು ಯಾರೋ ಗುಜರಾತಿ ಉದ್ದಿಮೆದಾರನ ಪಾಲಾಗುವ ಹಂತದಲ್ಲಿದೆ. ಈಗ ನಂದಿನಿ... ಲಾಭದಾಯಕವಾಗಿರುವ ರಾಜ್ಯದ ಒಂದೊಂದೇ ಉದ್ಯಮವನ್ನು ಮುಗಿಸಲು ಬಿಜೆಪಿ ಹೊಂಚು ಹಾಕಿರುವುದು ಸ್ಪಷ್ಟ ಎಂದು ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೈಗಾರಿಕೆ,ಐಟಿಬಿಟಿ,ವಿಜ್ಞಾನ,ಆವಿಷ್ಕಾರ,ಉದ್ಯೋಗ ಸೃಷ್ಟಿ ಸೇರಿ ಜಿಎಸ್ ಟಿ ಕಟ್ಟುವುದರಲ್ಲಿಯೂ ಮುಂಚೂಣಿಯಲ್ಲಿರುವ ಕರ್ನಾಟಕವು, ಭಾರತವೇ ಹೆಮ್ಮೆಪಡುವ ರಾಜ್ಯ. ಇಂಥ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯೆಬ್ಬಿಸಿ ಶಾಶ್ವತವಾಗಿ ದಿಲ್ಲಿಯ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡುವುದೇ ಬಿಜೆಪಿಯ ಕುಟಿಲ ನೀತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದನ್ನೂ ಪ್ರಶ್ನಿಸುವ, ನ್ಯಾಯ ಕೇಳುವ ಕನ್ನಡಿಗರನ್ನು ದುರ್ಬಲಗೊಳಿಸುವುದೂ ಎಂದರೆ, ಆರ್ಥಿಕವಾಗಿ ಕರ್ನಾಟಕದ ಬೆನ್ನುಮೂಳೆ ಮುರಿಯುವುದು. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಎಂಬ ನೀತಿ ಅನುಸರಿಸುವ ಬಿಜೆಪಿ ಡಬಲ್ ಎಂಜಿನ್ ಸರಕಾರವು, ದಕ್ಷಿಣದ ರಾಜ್ಯಗಳ ಜತೆ ಡಬಲ್ ಗೇಮ್ ಆಡುತ್ತಿದೆ. ಇಂದು ಕರ್ನಾಟಕ; ನಾಳೆ ತಮಿಳುನಾಡು, ನಾಡಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಆಚೆ ನಾಡಿದ್ದು ಕೇರಳ!! ಬಿಜೆಪಿಯ ಸುಪಾರಿ ಆಟ ಶುರುವಾಗಿದೆ!!! ಎಂದು. ಹೆಚ್ಡಿಕೆ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News