Gulbarga Assembly Election 2023: ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಗೆಲುವು ಯಾರಿಗೆ?

Gulbarga Assembly Election Results 2023: ಕಲಬುರಗಿ ಜಿಲ್ಲೆ ಇಬ್ಬರು ಮುಖ್ಯಮಂತ್ರಿಗಳನ್ನು ಈ ನಾಡಿಗೆ ನೀಡಿದೆ. ಒಬ್ಬರು ದಿವಂಗತ ವೀರೇಂದ್ರ ಪಾಟೀಲ್ ಹಾಗೂ ದಿವಂಗತ ಎನ್ ಧರ್ಮಸಿಂಗ್. ಈ ಇಬ್ಬರು ಮುಖ್ಯಮಂತ್ರಿಗಳು ಇಲ್ಲಿಂದ ಆಯ್ಕೆಯಾದರೂ ಅಭಿವೃದ್ಧಿ ಎನ್ನುವುದು ಈ ಪ್ರದೇಶಕ್ಕೆ ಮರಿಚಿಕೆಯಾಗಿದೆ.

Written by - Puttaraj K Alur | Last Updated : May 12, 2023, 10:40 PM IST
  • ತೊಗರಿ ಕಣಜದಲ್ಲಿ ಗೆದ್ದು ಬೀಗೋದು ಯಾರು? ಈ ಸಲವೂ ಖರ್ಗೆಗೆ ಪ್ರತಿಷ್ಠೆ.. ಗೆಲ್ಲಬೇಕಿದೆ ಕಾಂಗ್ರೆಸ್!
  • ದಲಿತ, ಕೋಲಿ, ಲಿಂಗಾಯತ ಮತಗಳೇ ನಿರ್ಣಾಯಕ, ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಯಾರ ಬಾವುಟ?
  • ಕಲಬುರಗಿಯ 9 ಕ್ಷೇತ್ರಗಳಲ್ಲಿ ಯಾರಿಗೆ ಅಧಿಕಾರ?, ಮತದಾರ ಪ್ರಭುವಿನ ಮನಸಿನಲ್ಲಿ ಇರೋದೇನು?
Gulbarga Assembly Election 2023: ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಗೆಲುವು ಯಾರಿಗೆ?  title=
ಕಲಬುರಗಿಯ 9 ಕ್ಷೇತ್ರಗಳಲ್ಲಿ ಯಾರಿಗೆ ಅಧಿಕಾರ?

Kalaburagi Assembly Election Result 2023: ಕಲಬುರಗಿ ಜಿಲ್ಲೆಯದ್ದು ರಕ್ತಸಿಕ್ತ ಇತಿಹಾಸ. ವಾರಂಗಲ್‍ನ ಕಾಕತೀಯರ ಆಳ್ವಿಕೆ ಕಾಲದಲ್ಲಿ ಬೆಳಕಿಗೆ ಬಂದ ಈ ಪ್ರದೇಶ ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರವಾಗಿದೆ. ಈ ಪ್ರದೇಶವನ್ನು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಹೊಯ್ಸಳರು, ದೇಹಲಿ ಸುಲ್ತಾನರು, ಬಹಮನಿಯರು, ನಾಯಕ ದೊರೆಗಳು ಹಾಗೂ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ವಿಜ್ಷಾನೇಶ್ವರರ ಮಿತಾಕ್ಷರ, ನೃಪತುಂಗನ ಕವಿರಾಜಮಾರ್ಗದಂತಹ ಶ್ರೇಷ್ಠ ಸಾಹಿತ್ಯ ಕೃತಿಗಳು ಹಾಗೂ ಶರಣರ ಮತ್ತು ಸೂಫಿ ಸಂತರ ಸಾಮಾಜಿಕ ಚಳವಳಿಗಳು ಈ ನಾಡಿನಲ್ಲಿ ನಡೆದಿವೆ. 14 & 15ನೇ ಶತಮಾನದಲ್ಲಿ ಕಲಬುರಗಿ ಬಹಮನಿ ರಾಜಾಧಾನಿಯಾಗಿಯೂ ವಿಜೃಂಭಿಸಿತ್ತು. ಇದು ಔರಂಗಜೇಬನ ನೆಚ್ಚಿನ ತಾಣಗಳಲ್ಲೊಂದು.

ಈ ಜಿಲ್ಲೆ ಇಬ್ಬರು ಮುಖ್ಯಮಂತ್ರಿಗಳನ್ನು ಈ ನಾಡಿಗೆ ನೀಡಿದೆ. ಒಬ್ಬರು ದಿವಂಗತ ವೀರೇಂದ್ರ ಪಾಟೀಲ್ ಹಾಗೂ ದಿವಂಗತ ಎನ್ ಧರ್ಮಸಿಂಗ್. ಈ ಇಬ್ಬರು ಮುಖ್ಯಮಂತ್ರಿಗಳು ಇಲ್ಲಿಂದ ಆಯ್ಕೆಯಾದರೂ ಅಭಿವೃದ್ಧಿ ಎನ್ನುವುದು ಈ ಪ್ರದೇಶಕ್ಕೆ ಮರಿಚಿಕೆಯಾಗಿದೆ. ಕಲಬುರಗಿಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಬಿಜೆಪಿ 5 ಕ್ಷೇತ್ರಗಳನ್ನು ಕಬ್ಜ ಮಾಡಿಕೊಂಡಿದ್ದರೆ, ಕಾಂಗ್ರೆಸ್ 4 ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದೆ.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ:

Gulbarga Dakshin Assembly Election Results 2023: ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ದತ್ತಾತ್ರೇಯ ಪಾಟಿಲ್ ರೇವೂರ್ ಶಾಸಕ. ಇದು ಪ್ರಾರಂಭದಿಂದಲೂ ಬಿಜೆಪಿಯ ಭದ್ರಕೋಟೆ. ಕ್ಷೇತ್ರ ವಿಂಗಡನೆಯಾದಾಗ ಮೊದಲ ಬಾರಿಗೆ 2008ರಲ್ಲಿ ಈ ಕ್ಷೇತ್ರದಿಂದ ದಿ.ಚಂದ್ರಶೇಖರ ಪಾಟೀಲ್ ರೇವೂರ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಅವರ ನಿಧನದ ಬಳಿಕ 2010ರಲ್ಲಿ ನಡೆದ ಉಪಚುನಾವಣೆಯಲ್ಲಿ ರೇವೂರವರ ಪತ್ನಿ ಶ್ರೀಮತಿ ಅರುಣಾ ಚಂದ್ರಶೇಖರ ಪಾಟೀಲ್ ರೇವೂರ ಅವರಿಗೆ ಟಿಕೇಟ್ ನೀಡದ ಕಾರಣ ಬಿಜೆಪಿಯಿಂದ ಈ ಕ್ಷೇತ್ರ ಕೈತಪ್ಪಿ, ಜೆಡಿಎಸ್ ಪಾಲಾಯಿತು. ಆಗ ನಡೆದ ಉಪಚುನಾವಣೆಯಲ್ಲಿ ಅರುಣಾ ಚಂದ್ರಶೇಖರ ಪಾಟೀಲ್ ಜೆಡಿಎಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ ವೀಕ್ ಕ್ಯಾಂಡಿಡೆಟ್ ನಿಲ್ಲಿಸಿದ ಪರಿಣಾಮ ರೇವೂರ ಕುಟುಂಬಕ್ಕೆ ಗೆಲುವು ತಾನಾಗಿಯೇ ಒಲಿದು ಬಂದಿದೆ. 2013ರಲ್ಲಿ ದಿವಂಗತ ಚಂದ್ರಶೇಖರ ಪಾಟೀಲ್ ರೇವೂರ್ ಪುತ್ರ ದತ್ತಾತ್ರೇಯ ಪಾಟೀಲ್ ರೇವೂರ್ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

2018ರ ಫಲಿತಾಂಶ:

2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ದತ್ತಾತ್ರೇಯ ಪಾಟೀಲ್ ರೇವೂರ್ 64,788 ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಅವರು 59.357 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 5,431 ಮತಗಳಾಗಿತ್ತು. 

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ದತ್ತಾತ್ರೇಯ ಪಾಟೀಲ್‌ ರೇವೂರ - ಬಿಜೆಪಿ

ಅಲ್ಲಮಪ್ರಭು ಪಾಟೀಲ್ - ಕಾಂಗ್ರೆಸ್

ಕೃಷ್ಣಾ ರೆಡ್ಡಿ - ಜೆಡಿಎಸ್ 

ಸಿದ್ದು ಪಾಟೀಲ್ - AAP 

ಶರಣಬಸಪ್ಪ ಪಪ್ಪಾ - ಪಕ್ಷೇತರ

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ:   

Gulbarga Uttar Assembly Election Results 2023: ಕಲಬುರಗಿ ಉತ್ತರ ಮತಕ್ಷೇತ್ರ ಇದು ಕಾಂಗ್ರೆಸ್‍ನ ಭದ್ರಕೋಟೆ. ಈ ಕ್ಷೇತ್ರ ಅತ್ಯಧಿಕ ಮುಸ್ಲಿಂ ಮತದಾರರನ್ನು ಹೊಂದಿರುವ ಕ್ಷೇತ್ರ. ಕ್ಷೇತ್ರ ಪುನರ್ ವಿಂಗಡನೆಯಾದಾಗಿನಿಂದ 2008ರಿಂದ ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಖಮರುಲ್ ಇಸ್ಲಾಂ ಅವರೇ ಗೆಲುವು ಸಾಧಿಸಿದ್ದಾರೆ.

2018ರ ಫಲಿತಾಂಶ:

ಖಮರುಲ್ ಇಸ್ಲಾಂ ನಿಧನ ಹೊಂದಿದ ಬಳಿಕ 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಕನೀಜ್ ಪಾತೀಮಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲ್ಲಿಸಲಾಗಿತ್ತು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ್ ತೀವ್ರ ಪೈಪೋಟಿ ನೀಡಿದ್ದರು. ಕನೀಜ್ ಫಾತೀಮಾ ಅವರು 64,311 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅವರ ಪ್ರತಿಸ್ಪರ್ಧಿ ಚಂದ್ರಕಾಂತ ಪಾಟೀಲ್ 58,371 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 5,940 ಮತಗಳಾಗಿತ್ತು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಕನೀಜ್‌ ಫಾತಿಮಾ - ಕಾಂಗ್ರೆಸ್

ಚಂದ್ರಕಾಂತ ಪಾಟೀಲ್‌ - ಬಿಜೆಪಿ

ನಾಸಿರ್‌ ಹುಸೇನ್‌ - ಜೆಡಿಎಸ್

ಕಲಬುರಗಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ:   

Gulbarga Rural Assembly Election Results 2023: ಕಲಬುರಗಿ ಗ್ರಾಮೀಣ ಕ್ಷೇತ್ರ ಪುನರ್ ವಿಂಗಡನೆಯಾದಾಗಿನಿಂದ 2008ರಲ್ಲಿ ಬಿಜೆಪಿಯ ರೇವುನಾಯಕ ಬೆಳಮಗಿ, 2013ರಲ್ಲಿ ಬಿಜೆಪಿ-ಕೆಜೆಪಿ ಸ್ಪರ್ಧೆಯ ನಡುವೆ ಕಾಂಗ್ರೇಸ್ ಅಭ್ಯರ್ಥಿ ಜಿ.ರಾಮಕೃಷ್ಣ ಗೆಲುವು ಸಾಧಿಸಿದ್ದರು.

2018ರ ಫಲಿತಾಂಶ:

2018ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಜಿ.ರಾಮಕೃಷ್ಣರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಬಸವರಾಜ ಮತ್ತಿಮೂಡ್ 61,750 ಮತಗಳನ್ನು ಪಡೆದು ಗೆದಿದ್ದರು. ಕಾಂಗ್ರೆಸ್‍ನ ವಿಜಯಕುಮಾರ್ ಜಿ.ರಾಮಕೃಷ್ಣ 49,364 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 12,386 ಮತಗಳಾಗಿದ್ದವು.

ಚಿತ್ತಾಪೂರ ವಿಧಾನಸಭಾ ಕ್ಷೇತ್ರ: 

Chittapur Assembly Election Results 2023: ಚಿತ್ತಾಪೂರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು 2008ರಲ್ಲಿ 9ನೇ ಬಾರಿಗೆ ಗೆಲುವು ಸಾಧಿಸಿದ್ದರು. ಅವರು 2009ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಷ್ಟ್ರ ರಾಜ್ಯಕಾರಣಕ್ಕೆ ಹೋದ ಕಾರಣ ತೆರವಾದ ಸ್ಥಾನಕ್ಕೆ ನಡೆದ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರೀಯಾಂಕ ಖರ್ಗೆ ವಿರುದ್ಧ ಬಿಜೆಪಿಯ ವಾಲ್ಮಿಕಿ ನಾಯಕ ಗೆಲುವು ಸಾಧಿಸಿದ್ದರು. 2013, 2018ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಪ್ರೀಯಾಂಕ ಖರ್ಗೆ ಗೆಲುವು ಸಾಧಿಸಿದ್ದರು.

2018ರ ಫಲಿತಾಂಶ:

2018ರಲ್ಲಿ ನಡೆದ ಚುನಾವಣೆಯಲ್ಲಿ ಪ್ರೀಯಾಂಕ ಖರ್ಗೆ ಅವರು 69,700 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ವಾಲ್ಮೀಕಿ ನಾಯಕ ಅವರು 65,307 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 4,393 ಮತಗಳಾಗಿದ್ದವು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಪ್ರಿಯಾಂಕ್ ಖರ್ಗೆ  - ಕಾಂಗ್ರೆಸ್

ಮಣಿಕಂಠ ರಾಥೋಡ್ - ಬಿಜೆಪಿ      

ಶರಣು ಪಿ ಸುಗೂರ್ – ಬಿಎಸ್‍ಪಿ     

ಡಾ ಸುಭಾಶ್‌ ಚಂದ್ರ ರಾಥೋಡ್- ಜೆಡಿಎಸ್

ಜಗದೀಶ್ ಎಸ್‌.ಸಾಗರ್ - AAP    

ಮಲ್ಲಿಕಾರ್ಜುನ್ ಎಸ್‌.ಎಚ್.ಪೂಜಾರಿ - ಕೆಆರ್‍ಎಸ್‍್   

ರಾಜು ಹಾದನೂರು - ಪಕ್ಷೇತರ

ಇದನ್ನೂ ಓದಿ: "ಕಪ್ಪು ಹಾಗೂ ಟೋಪಿ ಎಲ್ಲವನ್ನೂ ಅವರೇ ಇಟ್ಟುಕೊಳ್ಳಲಿ"

ಚಿಂಚೋಳಿ ವಿಧಾನಸಭಾ ಕ್ಷೇತ್ರ:

Chincholi Assembly Election Results 2023: ಚಿಂಚೋಳಿ ವಿಧಾನಸಭಾ ಕ್ಷೇತ್ರ ಮಾಜಿ ಸಿಎಂ ದಿವಂಗತ ವೀರೇಂದ್ರ ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371ಜೆ ವಿಧಿ ತಿದ್ದುಪಡಿಗೆ ಹೋರಾಟ ನಡೆಸಿದ ಮಾಜಿ ಸಚಿವ ದಿವಂಗತ ವೈಜನಾಥ ಪಾಟೀಲ್‍ರನ್ನು ನಾಡಿಗೆ ಕೊಟ್ಟಿರುವ ಕ್ಷೇತ್ರ. ಈ ಹಿಂದೆ ಸಾಮಾನ್ಯ ಕ್ಷೇತ್ರವಾಗಿದ್ದ ಚಿಂಚೋಳಿ ಕ್ಷೇತ್ರ ಪುನರ್ ವಿಂಗಡನೆ ನಂತರ ಎಸ್ಸಿ ಮೀಸಲು ಕ್ಷೇತ್ರವಾಯಿತು. ನಂತರ 2008ರಲ್ಲಿ ಮೊದಲ ಬಾರಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸುನೀಲ್ ವಲ್ಯಾಪೂರೆ ಶಾಸಕರಾಗಿ ಆಯ್ಕೆಯಾದರು. 2013 ಹಾಗೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಾ.ಉಮೇಶ ಜಾಧವ್ ಬಿಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪೂರೆರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

2018ರ ಫಲಿತಾಂಶ:

ಈ ಚುನಾವಣೆಯಲ್ಲಿ ಡಾ.ಉಮೇಶ್ ಜಾಧವ್ ಅವರು 73,905 ಮತಗಳನ್ನು  ಪಡೆದರೆ, ಬಿಜೆಪಿಯ ಸುನೀಲ್ ವಲ್ಯಾಪೂರ್ 54,693 ಮತಗಳನ್ನು ಪಡೆದು ಸೋತಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 19,212 ಮತಗಳಾಗಿವೆ.

2018ರ ಉಪ-ಚುನಾವಣೆ ಫಲಿತಾಂಶ:

2018ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ 69,109 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ 61,079 ಮತಗಳನ್ನು ಪಡೆದು ಸೋಲನ್ನಪ್ಪಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 8,030 ಮತಗಳಾಗಿದ್ದವು.

ಅಳಂದ ವಿಧಾನಸಭಾ ಕ್ಷೇತ್ರ:  

Aland Assembly Election Results 2023: ಆಳಂದ ವಿಧಾನಸಭಾ ಮತಕ್ಷೇತ್ರ ಎಲ್ಲಾ ಕ್ಷೇತ್ರಗಳಿಗಿಂತಲೂ ಭಿನ್ನ. ಇಲ್ಲಿ ಒಂದು ಬಾರಿ ಬಿ.ಆರ್.ಪಾಟೀಲ್ ಗೆದ್ದರೆ, ಮತ್ತೊಂದು ಬಾರಿ ಸುಭಾಷ್ ಗುತ್ತೇದಾರ್ ಗೆಲುವು ಸಾಧಿಸುತ್ತಾರೆ. 2013ರಲ್ಲಿ ಬಿ.ಆರ್.ಪಾಟೀಲ್ ಕೆಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಕೇವಲ 5 ಸಾವಿರ ಮತ ಪಡೆದು ಅತ್ಯಂತ ಕಳಪೆ ಸಾಧನೆ ಮಾಡಿದ್ದರು.

2018ರ ಫಲಿತಾಂಶ

2018ರಲ್ಲಿ ಬಿ.ಆರ್.ಪಾಟೀಲ್ ಕಾಂಗ್ರೆಸ್ ಸೇರುವ ಮೂಲಕ ಸ್ಪರ್ಧಿಸಿದ್ದರು. ಸುಭಾಷ್ ಗುತ್ತೇದಾರ್ ಬಿಜೆಪಿ ಸೇರಿ ಅಲ್ಪ ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಸುಭಾಷ್ ಗುತ್ತೇದಾರ್ 76,815 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಬಿ.ಆರ್.ಪಾಟೀಲ್ 76,118 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ 697 ಮತಗಳಾಗಿತ್ತು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಸುಭಾಷ್ ಆರ್.ಗುತ್ತೇದಾರ್ – ಬಿಜೆಪಿ

ಬಿ.ಆರ್.ಪಾಟೀಲ್ - ಕಾಂಗ್ರೆಸ್

ಮಹೇಶ್ವರಿ.ಎಸ್.ವಾಲೆ – ಜೆಡಿಎಸ್

ಶಿವಕುಮಾರ ಖೆಡ್ - ಎಎಪಿ

ಮುದಗಲೆ ರಾಜಕುಮಾರ - ಬಿಎಸ್ಪಿ

ಮೌಲಾ ಮುಲ್ಲಾ - ಸಿಪಿಐ

ಅಪ್ಪಾರಾವ ಎಂ.ಪಾಟೀಲ - ಪಕ್ಷೇತರ

ರತ್ನಪ್ಪ ರಾಮಚಂದ್ರ ಕುಂಬಾರ - ಪಕ್ಷೇತರ

ಅಫಜಲಪೂರ ವಿಧಾನಸಭಾ ಕ್ಷೇತ್ರ:  

Afzalpur Assembly Election Results 2023: ಅಫಜಲಪೂರ ವಿಧಾನಸಭೆ ಕ್ಷೇತ್ರ ಗುತ್ತೇದಾರ ಕುಟುಂಬದ ಭದ್ರಕೋಟೆ. ಇಲ್ಲಿ ಅವರು ಯಾವ ಪಕ್ಷದಿಂದ ನಿಲ್ತಾರೋ ಅವರದ್ದೆ ಗೆಲುವು. ಈ ಕ್ಷೇತ್ರದಿಂದ ಕಾಂಗ್ರೆಸ್ & ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಲಿಕಯ್ಯಾ ಗುತ್ತೇದಾರ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2018ರ ಫಲಿತಾಂಶ:

2018ರಲ್ಲಿ ಕಾಂಗ್ರೆಸ್ ಪಕ್ಷದ ಎಂ.ವಾಯ್.ಪಾಟೀಲ್ ಅವರು 71,735 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಮಾಲೀಕಯ್ಯಾ ಗುತ್ತೇದಾರ್ ಅವರು 61,141 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ 10,594 ಮತಗಳಾಗಿದ್ದವು.

2023ರಲ್ಲಿ ಅದೃಷ್ಟ ಪರೀಕ್ಷೆ ಇಳಿದವರು

ಎಂ.ವಾಯ್.ಪಾಟೀಲ್ – ಕಾಂಗ್ರೆಸ್

ಮಾಲೀಕಯ್ಯಾ ಗುತ್ತೇದಾರ್ - ಬಿಜೆಪಿ

ಶಿವಕುಮಾರ್ ನಾಟೀಕಾರ್ – ಜೆಡಿಎಸ್

ಆರ್.ಡಿ.ಪಾಟೀಲ್ - ಸಮಾಜವಾದಿ ಪಕ್ಷ

ಜೇವರ್ಗಿ ವಿಧಾನಸಭಾ ಕ್ಷೇತ್ರ:

Jevargi Assembly Election Results 2023: ಜೇವರ್ಗಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆ. ಈ ಕ್ಷೇತ್ರದಿಂದ 1972ರಿಂದ ಮಾಜಿ ಸಿಎಂ ದಿವಂಗತ ಧರ್ಮಸಿಂಗ್ 8 ಬಾರಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಈ ಕ್ಷೇತ್ರದಲ್ಲಿ ಕೆಲವೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013 ಹಾಗೂ 2018 ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‍ನ ದಿ.ಧರ್ಮಸಿಂಗ್ ಪುತ್ರ ಡಾ.ಅಜಯಸಿಂಗ್ ಗೆಲುವು ಸಾಧಸಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಬಾರಿಸಲು ಸಜ್ಜಾಗಿದ್ದಾರೆ.

2018ರ ಫಲಿತಾಂಶ:

2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯಸಿಂಗ್ ಅವರು 68,508 ಮಗಳನ್ನು ಪಡೆದು ಗೆಲುವು ಸಾಧಸಿದರೆ, ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ 52,452 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ 16,056 ಮತಗಳಾಗಿದ್ದವು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಡಾ.ಅಜಯ್ ಸಿಂಗ್ – ಕಾಂಗ್ರೆಸ್

ಶಿವರಾಜ್ ಪಾಟೀಲ್ ರದ್ದೇವಾಡಗಿ – ಬಿಜೆಪಿ

ದೊಡ್ಡಪ್ಪಗೌಡ ಪಾಟೀಲ್ ನರಿಬೋಳ - ಜೆಡಿಎಸ್

ಸೇಡಂ ವಿಧಾನಸಬಾ ಕ್ಷೇತ್ರ:  

Sedam Assembly Election Results 2023: ಸೇಡಂ ವಿಧಾನಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯ ರಾಜಕುಮಾರ ಪಾಟೀಲ್ ತೇಲ್ಕೂರ್ ಈ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಸೋಲಿಸಿದ್ದರು. ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಶ್ರೀರಕ್ಷೆ ಹೊಂದಿರುವ ಡಾ.ಶರಣ ಪ್ರಕಾಶ ಪಾಟೀಲ್ ನಿರಂತರವಾಗಿ ಈ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆದರೆ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಯ ರಾಜಕುಮಾರ ಪಾಟೀಲ್ ತೇಲ್ಕೂರ್ ವಿರುದ್ಧ ಸೋಲಬೇಕಾಯಿತು.

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ರಾಜುಕುಮಾರ ಪಾಟೀಲ್ ತೇಲ್ಕೂರ್ 80,668 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಡಾ.ಶರಣ ಪ್ರಕಾಶ ಪಾಟೀಲ್ 73,468 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ 7,200 ಮತಗಳಾಗಿವೆ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ರಾಜಕುಮಾರ ಪಾಟೀಲ್ ತೇಲ್ಕೂರ್ - ಬಿಜೆಪಿ

ಡಾ.ಶರಣಪ್ರಕಾಶ ಪಾಟೀಲ್ – ಕಾಂಗ್ರೆಸ್

ಬಾಲರಾಜ ಗುತ್ತೇದಾರ್ - ಜೆಡಿಎಸ್

ಗಾಲಿ ಲಲ್ಲೇಶ್ ರೆಡ್ಡಿ- KRPP

ಇದನ್ನೂ ಓದಿ: Koppal Assembly Election 2023: ಕೊಪ್ಪಳ ಜಿಲ್ಲೆಯ ‘ಕುರುಕ್ಷೇತ್ರ’ದಲ್ಲಿ ಯಾರಿಗೆ ಗೆಲುವು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News