NCP ಎಂದಿಗೂ BJP ಜೊತೆ ಕೈಜೋಡಿಸುವುದಿಲ್ಲ: ಠಾಕ್ರೆ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್!

ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಸತತ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.  

Last Updated : Nov 23, 2019, 01:42 PM IST
NCP ಎಂದಿಗೂ BJP ಜೊತೆ ಕೈಜೋಡಿಸುವುದಿಲ್ಲ: ಠಾಕ್ರೆ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್! title=
Photo courtesy: ANI

ನವದೆಹಲಿ: ಇಂದು ಬೆಳಿಗ್ಗೆ ಮಹಾರಾಷ್ಟ್ರ(Maharashtra)ದಲ್ಲಿ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಸತತ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಅಜಿತ್ ಪವಾರ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬೆಳಿಗ್ಗೆ 8 ಗಂಟೆಗೆ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಕೆಲವು ಬಿಜೆಪಿ ಮತ್ತು ಎನ್‌ಸಿಪಿ ಮುಖಂಡರು ಮತ್ತು ಇತರ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಶೀಘ್ರದಲ್ಲೇ, ದೇವೇಂದ್ರ ಫಡ್ನವೀಸ್ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸಜ್ಜಾಗುತ್ತಿದ್ದಾರೆ.

ಎನ್‌ಸಿಪಿ,  ಕಾಂಗ್ರೆಸ್(Congress) ಮತ್ತು ಶಿವಸೇನೆ(Shiv Sena) ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಒಪ್ಪಂದವನ್ನು ಬಹುತೇಕ ಅಂತಿಮಗೊಳಿಸಿದ್ದ ಸಮಯದಲ್ಲಿ ಅಜಿತ್ ಪವಾರ್ ಅವರು ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮುಂಬೈನಲ್ಲಿ NCP ಮುಖ್ಯಸ್ಥ ಶರದ್ ಪವಾರ್(Sharad Pawar) ಮತ್ತು ಶಿವಸೇನ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav thackeray) ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಶಾಸಕರನ್ನು ನಂಬಿರಿ, ಪ್ರಾಮಾಣಿಕ ಎನ್‌ಸಿಪಿ ಕಾರ್ಯಕರ್ತ ಬಿಜೆಪಿಯೊಂದಿಗೆ ಎಂದಿಗೂ ಕೈಜೋಡಿಸುವುದಿಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಶರದ್ ಪವಾರ್, ಬೆಳಿಗ್ಗೆ 6.30 ರ ಸುಮಾರಿಗೆ ಈ ಬೆಳವಣಿಗೆಗಳ ಬಗ್ಗೆ ನನಗೆ ಮಾಹಿತಿ ಲಭ್ಯವಾಯಿತು ನಾನು ಈಗಲೂ ಶಿವಸೇನೆಯೊಂದಿಗೆ ಇದ್ದೇನೆ ಎಂದು ಪುನರುಚ್ಚರಿಸಿದರು. ಶಿವಸೇನೆ ಮತ್ತು ಎನ್‌ಸಿಪಿ ಮುಖಂಡರು ಸರ್ಕಾರ ರಚನೆಗಾಗಿ ಒಗ್ಗೂಡಿದರು. ನಾವು ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಗಳನ್ನು ಹೊಂದಿದ್ದೇವೆ. ನಮ್ಮ ಅಧಿಕೃತ ಸಂಖ್ಯೆಗಳು - 44, 56 ಮತ್ತು 54 ಶಾಸಕರು ನಮ್ಮೊಂದಿಗೆ ಸರ್ಕಾರವನ್ನು ಬೆಂಬಲಿಸಿದ್ದರು. ಹಲವಾರು ಸ್ವತಂತ್ರರು ಸಹ ನಮ್ಮೊಂದಿಗಿದ್ದರು ಮತ್ತು ನಮ್ಮಲ್ಲಿ 170 ರಷ್ಟು ಸಂಖ್ಯಾಬಲವಿದೆ ಎಂದು ಪವಾರ್ ತಿಳಿಸಿದರು.

ಕೆಲವು ಶಾಸಕರು ಅಜಿತ್ ಪವಾರ್ ಅವರನ್ನು ತಮ್ಮೊಂದಿಗೆ ಕರೆದೊಯ್ದರು ಎಂದು ಹೇಳಿದರು. ಹಾಗೆ ಹೋಗುತ್ತಿರುವ ಎಲ್ಲ ಶಾಸಕರು ಪಕ್ಷಾಂತರ ವಿರೋಧಿ ಕಾನೂನು ಇದೆ ಮತ್ತು ಅವರು ತಮ್ಮ ವಿಧಾನಸಭಾ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದಿರಬೇಕು ಎಂದು ಶರದ್ ಪವಾರ್ ಎಚ್ಚರಿಸಿದರು.

ಅಜಿತ್ ಪವಾರ್ ಅವರ ನಿರ್ಧಾರವು ಪಕ್ಷದ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಇದು ವಿವೇಚನೆಯಿಲ್ಲದ ನಿರ್ಧಾರ. ಯಾವುದೇ ಎನ್‌ಸಿಪಿ ನಾಯಕ ಅಥವಾ ಕಾರ್ಯಕರ್ತ ಎನ್‌ಸಿಪಿ-ಬಿಜೆಪಿ ಸರ್ಕಾರದ ಪರವಾಗಿಲ್ಲ ಎಂದು ಶರದ್ ಪವಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಬಹುಮತವನ್ನು ಸಾಬೀತುಪಡಿಸಲು ರಾಜ್ಯಪಾಲರು ಅವರಿಗೆ ಸಮಯ ನೀಡಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದರೆ ಅದನ್ನು ಸಾಬೀತುಪಡಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಅದರ ನಂತರ ನಾವು ಮೊದಲೇ ನಿರ್ಧರಿಸಿದಂತೆ ನಮ್ಮ ಮೂರು ಪಕ್ಷಗಳು ಸರ್ಕಾರ ರಚಿಸುತ್ತವೆ ಎಂದು ಶರದ್ ಪವಾರ್ ತಿಳಿಸಿದರು.

NCP-ಕಾಂಗ್ರೆಸ್- ಶಿವಸೇನೆ ಮೈತ್ರಿ ಸರ್ಕಾರ ರಚನೆಗೆ ಪಕ್ಷದ ಎಲ್ಲಾ ಶಾಸಕರು ಸಹಿ ಮಾಡಿದ್ದರು. ಅಜಿತ್ ಪವಾರ್ ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದರಿಂದ ಇದೇ ರೀತಿಯ ಪಟ್ಟಿಯು ಅಜಿತ್ ಪವಾರ್ ಅವರ ಬಳಿಯೂ ಇತ್ತು. ಬಿಜೆಪಿ ಜೊತೆಗಿನ ಸರ್ಕಾರ ರಚನೆಗೆ ರಾಜ್ಯಪಾಲರಿಗೆ ನೀಡಿರುವುದು ಅದೇ ಪಟ್ಟಿ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಖಚಿತ ಮಾಹಿತಿಯಿಲ್ಲ. ಹೀಗೂ ಆಗಿರಬಹುದು ಎಂಬುದು ನನ್ನ ಊಹೆ ಅಷ್ಟೇ. ಈ ಬಗ್ಗೆ ನಾನು ಮಾಹಿತಿ ಪಡೆಯುತ್ತೇನೆ. ರಾಜ್ಯಪಾಲರೊಂದಿಗೂ ಚರ್ಚಿಸುತ್ತೇನೆ. ಕಾನೂನಿನ ಪ್ರಕಾರ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶರದ್ ಪವಾರ್ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ತನಿಖಾ ಸಂಸ್ಥೆಗಳಿಗೆ ಹೆದರಿ ಈ ರೀತಿ ಮಾಡಿರುವರೋ ಇಲ್ಲವೋ ನನಗೆ ತಿಳಿದಿಲ್ಲ ಎಂದ ಶರದ್ ಪವಾರ್, ಮೂಲದ ಪ್ರಕಾರ ಬೆಳಿಗ್ಗೆ ಅಜಿತ್ ಪವಾರ್ ಪದಗ್ರಹಣದ ವೇಳೆ ನಮ್ಮ 10-11 ಶಾಸಕರು ರಾಜ್ ಭವನದಲ್ಲಿದ್ದರು ಮತ್ತು ಆ ಪೈಕಿ 3 ಮಂದಿ ಈಗಾಗಲೇ ನನ್ನೊಂದಿಗೆ ಕುಳಿತಿದ್ದಾರೆ ಎಂದರು.

ಫಡ್ನವೀಸ್ ಸರ್ಕಾರದ ಮೇಲೆ ದಾಳಿ ಮಾಡಿದ ಶರದ್ ಪವಾರ್, "ಬಿಜೆಪಿಯೊಂದಿಗೆ ಸರ್ಕಾರ ರಚಿಸುವುದಕ್ಕೆ ಸಾರ್ವಜನಿಕರ ಸಮ್ಮತಿಯಿಲ್ಲ. ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಇಂತಹ ಕ್ರಮಗಳನ್ನು ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಅವರ ಕ್ಷೇತ್ರದ ಜನರೂ ಕೂಡ ಅವರನ್ನು ಬೆಂಬಲಿಸುವುದಿಲ್ಲ. ಅವರು ರಾಜೀನಾಮೆ ನೀಡಿ ಮರು ಚುನಾವಣೆಗೆ ಹೋದರೆ, ನಮ್ಮ ಮೂರೂ ಪಕ್ಷಗಳು ಸೇರಿ ಅವರನ್ನು ಮನಿಸುತ್ತೇವೆ" ಎಂದು ಶರದ್ ಪವಾರ್ ಸವಾಲು ಹಾಕಿದರು.

ಬಳಿಕ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಈ ಮೊದಲು ಇವಿಎಂ ಆಟ ನಡೆಯುತ್ತಿತ್ತು ಮತ್ತು ಈಗ ಇದು ಹೊಸ ಆಟ ಆರಂಭವಾಗಿದೆ. ಇನ್ನು ಮುಂದೆ ಚುನಾವಣೆಗಳು ಸಹ ಅಗತ್ಯವೆಂದು ನಾನು ಭಾವಿಸುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜ್ ದ್ರೋಹ ಮತ್ತು ಹಿಂಭಾಗದಿಂದ ಹಲ್ಲೆ ಮಾಡಿದಾಗ ಏನು ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.

ಇದೇ ವೇಳೆ ಶಿವಸೇನೆ ಶಾಸಕರ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸಲಿ ಎಂದು ಸವಾಲು ಹಾಕಿದ ಉದ್ಧವ್ ಠಾಕ್ರೆ, ನಾವು ಅಲ್ಲಿಯವರೆಗೂ ನಿದ್ರಿಸುತ್ತಿರುವುದಿಲ್ಲ ಎಂದಿದ್ದಾರೆ.
 

Trending News