ಉತ್ತರಪ್ರದೇಶ: ಸಚಿವ ಸಂಪುಟದಿಂದ ಸಚಿವ ಒಪಿ ರಾಜ್ಬರ್​ ವಜಾಗೊಳಿಸಿದ ಸಿಎಂ ಯೋಗಿ

ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರು ಸಿಎಂ ಯೋಗಿ ಆದಿತ್ಯನಾಥ್ ಮನವಿಯನ್ನು ಅಂಗೀಕರಿಸಿದ್ದು, ಸುಹೆಲ್​ದೇವ್​ ಭಾರತೀಯ ಸಮಾಜ ಪಕ್ಷದ ನಾಯಕ ಹಾಗೂ ಸಚಿವ ಓಂ ಪ್ರಕಾಶ್ ರಾಜ್ಬರ್ ಅವರನ್ನು ಈ ಕ್ಷಣದಿಂದಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

Last Updated : May 20, 2019, 01:34 PM IST
ಉತ್ತರಪ್ರದೇಶ: ಸಚಿವ ಸಂಪುಟದಿಂದ ಸಚಿವ ಒಪಿ ರಾಜ್ಬರ್​ ವಜಾಗೊಳಿಸಿದ ಸಿಎಂ ಯೋಗಿ  title=

ಲಕ್ನೌ: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ಸ್ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದುಳಿದ ವರ್ಗ ಮತ್ತು ಅಂಗವಿಕಲರ ಕಲ್ಯಾಣ ಸಚಿವ ಓಂ ಪ್ರಕಾಶ್ ರಾಜ್ಬರ್ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ. 

ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರು ಸಿಎಂ ಯೋಗಿ ಆದಿತ್ಯನಾಥ್ ಮನವಿಯನ್ನು ಅಂಗೀಕರಿಸಿದ್ದು, ಸುಹೆಲ್​ದೇವ್​ ಭಾರತೀಯ ಸಮಾಜ ಪಕ್ಷದ ನಾಯಕ ಹಾಗೂ ಸಚಿವ ಓಂ ಪ್ರಕಾಶ್ ರಾಜ್ಬರ್ ಅವರನ್ನು ಈ ಕ್ಷಣದಿಂದಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಓಂ ಪ್ರಕಾಶ್ ರಾಜ್ಬರ್ ಅವರ ಸುಹೆಲ್​ದೇವ್​ ಭಾರತೀಯ ಸಮಾಜ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಯೋಗಿ ಆದಿತ್ಯನಾಥ್​ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ರಾಜ್ಬರ್ ಗೆ ಸಚಿವ ಸ್ಥಾನ ನೀಡಲಾಗಿತ್ತು.

ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಘೋಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ್ಬರ್ ಟಿಕೆಟ್ ದೊರೆಯದ ಕಾರಣ ಏಪ್ರಿಲ್ 13ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಬಳಿಕ ರಾಜ್ಬರ್ ತನ್ನ ಪಕ್ಷದಿಂದ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಉಳಿದ ಮೂರು ಕ್ಷೇತ್ರಗಳಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಅಲ್ಲದೆ, ಮಿರ್ಜಾಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಲಲಿತೇಶ್ ತ್ರಿಪಾಟಿಗೆ ರಾಜ್ಬರ್ ನೇತೃತ್ವದ ಸುಹೆಲ್​ದೇವ್​ ಭಾರತೀಯ ಸಮಾಜ ಪಕ್ಷ ಬೆಂಬಲ ಸೂಚಿಸಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷ ಅಪ್ನ ದಳ್ ಸಂಚಾಲಕ ಮತ್ತು ಕೇಂದ್ರ ಸಚಿವರಾದ ಅನುಪ್ರಿಯ ಪಾಟೀಲ್ ಸ್ಪರ್ಧಿಸಿದ್ದರು.

ಈ ಬೆನ್ನಲ್ಲೇ ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳ ಮತದಾನ ಮುಗಿದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ರಾಜ್ಬರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Trending News