ನವದೆಹಲಿ: ಜುಲೈ ಮೊದಲ ವಾರದಲ್ಲಿ ಪೂರ್ಣಾವಧಿ ಕೇಂದ್ರ ಬಜೆಟ್ ಮಂಡನೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಮಂಡಿಸಲಾಗುವ ಪೂರ್ಣಾವಧಿ ಬಜೆಟ್ ನಲ್ಲಿ ಕೃಷಿ, ಉದ್ಯೋಗ ಸಂಬಂಧಿತ ವಿಷಯಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುವುದು ಎನ್ನಲಾಗಿದೆ . ಇದಕ್ಕೂ ಮೊದಲು ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವು ಫೆಬ್ರುವರಿ ೧ ರಂದು ಮಧ್ಯಂತರ ಬಜೆಟ್ ನ್ನು ಮಂಡಿಸಿತ್ತು.ಇದರಲ್ಲಿ ಮಧ್ಯಮ ವರ್ಗ ಹಾಗೂ ರೈತರನ್ನು ಆಧ್ಯತೆಯಾಗಿ ಪರಿಗಣಿಸಲಾಗಿತ್ತು.ಆಗ ಈ ಕೇಂದ್ರದ ಬಜೆಟ್ ನ್ನು ಹಂಗಾಮಿ ಹಣಕಾಸು ಸಚಿವರಾಗಿ ಪಿಯುಶ್ ಗೋಯಲ್ ಅವರು ಮಂಡಿಸಿದ್ದರು.
ಈ ಬಾರಿ ಪೂರ್ಣಾವಧಿ ಬಜೆಟ್ ನಲ್ಲಿ ಪ್ರಮುಖವಾಗಿ ರಿಯಲ್ ಎಸ್ಟೇಟ್, ಮೂಲಭೂತ ಸೌಕರ್ಯ ಮತ್ತು ಉದ್ಯೋಗದ ಸೃಷ್ಟಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎನ್ನಲಾಗಿದೆ.ಇದರ ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು,ತೆರಿಗೆ ವ್ಯವಸ್ಥೆ, ಮೆಕ್ ಇನ್ ಇಂಡಿಯಾ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಅಲ್ಲದೆ ಎಫ್ಡಿಐಯಲ್ಲಿ ಹಲವಾರು ಸುಧಾರಣೆ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಇಂದು ಸಾಯಂಕಾಲ ಮೋದಿ ನೂತನ ಸಚಿವ ಸಂಪುಟದೊಂದಿಗೆ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಬುಧವಾರದಂದು ಅನಾರೋಗ್ಯದ ಹಿನ್ನಲೆಯಲ್ಲಿ ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ವಿನಂತಿಸಿಕೊಂಡು ಪತ್ರ ಬರೆದಿದ್ದರು. ಈಗ ಜೈಟ್ಲಿ ಅನುಪಸ್ಥಿತಿ ಹಿನ್ನಲೆಯಲ್ಲಿ ಅವರ ಹುದ್ದೆಯನ್ನು ಪಿಯುಶ್ ಗೋಯಲ್ ವಯಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.