ಪಂಪಾ: ಮಹಿಳಾ ಪತ್ರಕರ್ತೆ ಕವಿತಾ ಹಾಗೂ ಮತ್ತೊಬ್ಬ ಮಹಿಳಾ ಭಕ್ತೆಯೋಬ್ಬರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೆಲವೇ ಕ್ಷಣಗಳಲ್ಲಿ ಅಯ್ಯಪ್ಪನ ಸಾನಿಧ್ಯ ತಲುಪಲಿದ್ದಾರೆ.
ದೇವಾಲಯದತ್ತ ಸಾಗುತ್ತಿರುವ ಇಬ್ಬರು ಮಹಿಳೆಯರಿಗೆ 250 ಪೊಲೀಸರು, ಕಮಾಂಡೋಗಳ ರಕ್ಷಣೆ ನೀಡಲಾಗಿದ್ದು, ಪ್ರತಿಭಟನಾಕಾರರು ಇವರನ್ನು ಹಿಂಬಾಲಿಸುತ್ತಿದ್ದಾರೆ ಎನ್ನಲಾಗಿದೆ.
ಶಬರಿಮಲೆಯಲ್ಲಿ ಐತಿಹಾಸಿಕ ಪೊಲೀಸ್ ಸರ್ಪಗಾವಲು:
ಕೆಲವೇ ಕ್ಷಣಗಳಲ್ಲಿ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಲಿರುವ ಶಬರಿಮಲೆಯಲ್ಲಿ ಕೇರಳ ಡಿಐಜಿ ನೇತೃತ್ವದಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ಪೊಲೀಸ್ ಬಿಗಿಭದ್ರತೆ ನೀಡಲಾಗಿದೆ. ಅಯ್ಯಪ್ಪ ಭಕ್ತರನ್ನು ಸಮಾಧಾನಿಸುತ್ತಿರುವ ಕೇರಳ ಐಜಿ, ನಾವೂ ಅಯ್ಯಪ್ಪನ ಭಕ್ತರು, ಆದರೆ ನಮಗೆ ಕಾನೂನು ಜಾರಿಗೊಳಿಸಬೇಕಾದ ಅನಿವಾರ್ಯತೆಯಿದೆ ಎನ್ನುತ್ತಾ ಅಯ್ಯಪ್ಪ ಭಕ್ತರನ್ನು ಸಮಾಧಾನಿಸುತ್ತಿದ್ದಾರೆ.
ಸನ್ನಿಧಾನದ ಪಾವಿತ್ರ್ಯ ಕೆಡಿಸುವ ಉದ್ದೇಶ ನಮಗಿಲ್ಲ:
ನಿಮ್ಮ ನಂಬಿಕೆ ಮತ್ತು ಕಾನೂನು ರಕ್ಷಿಸಲು ನಾವಿಲ್ಲಿ ಬಂದಿದ್ದೇವೆ, ಸನ್ನಿಧಾನದ ಪಾವಿತ್ರ್ಯವನ್ನು ಕೆಡಿಸುವ ಉದ್ದೇಶ ನಮಗಿಲ್ಲ ಎಂದು ಕೇರಳ ಐಜಿ ತಿಳಿಸಿದ್ದಾರೆ.
ಏತನ್ಮಧ್ಯೆ, ಶಬರಿಮಲೆಗೆ ತೆರಳಿದ ಕೊಚ್ಚಿಯ ಸಾಮಾಜಿಕ ಕಾರ್ಯಕರ್ತೆಯ ಮನೆಯ ಮೇಲೆ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದಾರೆ.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ವಿರೋಧಿಸಿ 2006ರ ಜನವರಿಯಲ್ಲಿ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧಿಸಿದಂತೆ ವಿಚಾರಣೆ ನಡೆಸಲು 2017ರ ಅಕ್ಟೋಬರ್ 13ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ರಚಿಸಿತ್ತು. ಅರ್ಜಿ ವಿಚಾರಣೆ ಸಂದರ್ಭದಲ್ಲೂ ಮಹಿಳೆಯರ ನಿಷೇಧ ಕ್ರಮವನ್ನು ಪ್ರಶ್ನಿಸಿದ್ದ ಸಂವಿಧಾನ ಪೀಠ, ಮಹಿಳೆಯರ ಧಾರ್ವಿುಕ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿತ್ತು. ಸೆ. 28ರಂದು ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು. ಧಾರ್ಮಿಕ ಆಚರಣೆ ಹೆಸರಿನಲ್ಲಿ ಲಿಂಗತಾರತಮ್ಯ ಮಾಡಬಾರದೆಂದು ಹೇಳಿದೆ. ಜೊತೆಗೆ ಪುರುಷರಿಗಿಂತ ಮಹಿಳೆಯರೇನೂ ಕಡಿಮೆ ಅಲ್ಲ ಎಂದೂ ಹೇಳಿತ್ತು.
ಸುಪ್ರೀಂಕೋರ್ಟ್ ನ ತೀರ್ಪಿಗೆ ತಲೆ ಭಾಗಿದ ಕೇರಳ ಸರ್ಕಾರ ತಾನು ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದಿಲ್ಲ ಮತ್ತು ದೇವಸ್ಥಾನಕ್ಕೆ ತೆರಳುವ ಮಹಿಳಾ ಭಕ್ತರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿತ್ತು.