"ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ.ಆತನೇ ರಾಜೇಂದ್ರ ಪ್ರಸಾದ್” ಎಂದು ಮಹಾತ್ಮ ಗಾಂಧೀಜಿಯವರು ರಾಜೇಂದ್ರ ಪ್ರಸಾದ್ ಅವರ ಬಗ್ಗೆ ಹೇಳಿದ್ದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂತಹ ವ್ಯಕ್ತಿ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದರು.ಮುಂದೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಅವರು ಕಾರ್ಯನಿರ್ವಹಿಸಿದರು.ವಿಶೇಷವೆಂದರೆ ಎರಡು ಅವಧಿಯವರೆಗೆ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು.ಮೂಲತಃ ಗಾಂಧಿವಾದಿಯಾಗಿದ್ದ ಅವರು ಅಹಿಂಸೆಯ ಮೇಲೆ ಹೆಚ್ಚಿನ ನಂಬಿಕೆಯನ್ನಿಟ್ಟಿದ್ದರು.
ಇಂತಹ ವ್ಯಕ್ತಿ 1884 ಡಿಸೆಂಬರ್ 3ನೇ ತಾರೀಖಿನಂದು ಬಿಹಾರದ ಜೆರಡಿ ಎನ್ನುವ ಹಳ್ಳಿಯಲ್ಲಿ ಅವರು ಜನಿಸಿದರು. ತಂದೆ ಮಹದೇವ್ ಸಹಾಯ್ ಸಂಸ್ಕೃತ ವಿದ್ವಾಂಸರಾಗಿದ್ದರು. ತಾಯಿ ಕಮಲೆಶ್ವರಿ ದೇವಿ ಮಗನಿಗೆ ಪ್ರತಿದಿನ ರಾಮಾಯಣದ ಕಥೆಗಳನ್ನು ಹೇಳುತ್ತಿದ್ದರು.ಗ್ರಾಮೀಣ ಭಾಗದಿಂದ ಬಂದಂತಹ ರಾಜೇಂದ್ರ ಪ್ರಸಾದ್ ಪ್ರಾರಂಭದಲ್ಲಿ ಉತ್ತಮ ಸಂಸ್ಕಾರವನ್ನು ಪಡೆದರು.ಇದಾದ ನಂತರ ಮುಂದೆ ಬಾಲ್ಯದಲ್ಲಿಯೇ 12ನೇ ವಯಸ್ಸಿನಲ್ಲೇ ರಾಜ ಬನ್ಸಿದೇವಿಯವರೊಂದಿಗೆ ವಿವಾಹವಾದರು.
ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಬಿ.ಎ. ಎಂ.ಎ. ಹಾಗೂ ಕಾನೂನಿನಲ್ಲಿ ಪದವಿಯನ್ನು ಪಡೆದರು. ಪ್ರಸಾದರ ಸಮಾಜ ಸೇವಾ ಕಾರ್ಯಗಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಅಡಿಪಾಯ ಹಾಕಲಾಗಿತ್ತು ತಮ್ಮ ಅಣ್ಣ ಮಹೇಂದ್ರ ಪ್ರಸಾದರಿಂದ “ಸ್ವದೇಶಿ”ಯ ಪಾಠ ಕಲಿತಿದ್ದ ಪ್ರಸಾದರು ಸೋದರಿ ನಿವೇದಿತಾ, ಸುರೇಂದ್ರನಾಥ ಬ್ಯಾನರ್ಜಿ ಮುಂತಾದ ದೇಶ ಪ್ರೇಮಿಗಳ ಭಾಷಣಗಳಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ವೃಂದದಲ್ಲಿ ಇವರು ಜನಪ್ರಿಯ ನಾಯಕ. 1906ರಲ್ಲಿ ಬಿಹಾರಿ ವಿದ್ಯಾರ್ಥಿಗಳನ್ನು ಒಂದು ಗೂಡಿಸಿ ಬಿಹಾರಿ ವಿದ್ಯಾರ್ಥಿ ಸಮ್ಮೇಳನ ಎನ್ನುವ” ಎಂಬ ಸಂಘವನ್ನು ಸ್ಥಾಪನೆ ಮಾಡಿದ್ದರು.
ಪ್ರಾರಂಭದಲ್ಲಿ ಕಲ್ಕತ್ತಾ ವಿವಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಪ್ರಸಾದ್ ಅವರು ಮುಂದೆ ವಕೀಲಿ ವೃತ್ತಿಯನ್ನು ಸಹ ನಿರ್ವಹಿಸಿದರು. ಮುಂದೆ ಭಾರತಕ್ಕೆ ಸ್ವಾತಂತ್ರ ದೊರೆತ ನಂತರ ಅವರು 1950 ಜನವರಿ 26 ರಂದು ಮೊದಲ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು.ಮುಂದೆ ರಾಷ್ಟ್ರಪತಿ ಪದವಿಯನ್ನು ತ್ಯಜಿಸಿದ ನಂತರ ಪಾಟ್ನಾದಲ್ಲಿನ ತಮ್ಮ ಸದಾಕತ್ ಆಶ್ರಮದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು. ಮುಂದೆ 1963 ಫೆಬ್ರುವರಿ 28 ರಂದು ಕೊನೆಯುಸಿರೆಳೆದರು.