ನವದೆಹಲಿ: ಇಂದು ಎಲ್ಲರ ಚಿತ್ತ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಇರಲಿದೆ. ಒಂದೂವರೆ ತಿಂಗಳಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಮೇ 19 ರಂದು ಅಂತಿಮಗೊಂಡಿತ್ತು. ಈಗ ಮೇ 23 ರಂದು ಅಂತಿಮ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
2019 ಲೋಕಸಭಾ ಚುನಾವಣೆ ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಗಮನ ಸೆಳೆದ ಚುನಾವಣೆಗಳಲ್ಲೊಂದು.ಬಿಜೆಪಿ 2014 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷವಾಗಿ ಮೋದಿ ನೇತೃತ್ವದಲ್ಲಿ ಪೂರ್ಣ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿತು. ಆದರೆ ಈ ಬಾರಿ ಬಿಜೆಪಿಗೆ ಮತ್ತೆ ಅಧಿಕಾರ ಲಭಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಜಿಎಸ್ಟಿ, ನೋಟು ನಿಷೇಧ ಕ್ರಮಗಳ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಾದ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕೂಡ ವಿಫಲವಾಗಿರುವುದು. ಪ್ರಾರಂಭದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಬಿಜೆಪಿ ಕಾಲಾಂತರದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಯಿತು.ಈ ಹಿನ್ನಲೆಯಲ್ಲಿ ಬಿಜೆಪಿ ಪ್ರಾಬಲ್ಯದ ರಾಜ್ಯಗಳಾದ ಮಧ್ಯಪ್ರದೇಶ, ಚತ್ತೀಸ್ ಗಡ್, ರಾಜಸ್ತಾನದಲ್ಲಿ ಸೋಲನ್ನು ಅನುಭವಿಸಿತು.
ಈ ಎಲ್ಲ ಹಿನ್ನಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಈಗ ಬಿಜೆಪಿಗೂ ಮತ್ತು ಪ್ರತಿಪಕ್ಷಗಳಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಈಗ ಅವು ಮೈತ್ರಿ ಮೂಲಕ ಚುನಾವಣೆಯನ್ನು ಎದುರಿಸಿವೆ. ಇದಕ್ಕೆ ದೊಡ್ಡ ನಿದರ್ಶನ ಎನ್ನುವಂತೆ ಉತ್ತರ ಪ್ರದೇಶದಲ್ಲಿನ ಬಿಎಸ್ಪಿ-ಎಸ್ಪಿ-ಆರ್ಎಲ್ಡಿ ಮೈತ್ರಿ. ಹೌದು, ಕಳೆದ ಎರಡು ದಶಕಗಳಿಂದ ಹಾವು-ಮುಂಗುಸಿಯಂತಿದ್ದ ಈ ಪಕ್ಷಗಳು ಈಗ ಉತ್ತರಪ್ರದೇಶದಲ್ಲಿ ಜಾತಿ ಸಮೀಕರಣದ ಆಧಾರದ ಮೇಲೆ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ. ಒಂದು ಕಡೆ ಬಿಜೆಪಿ 2014 ರಲ್ಲಿ ಯುಪಿಎ ಸರ್ಕಾರದ ಆಡಳಿತ ವಿರೋಧಿ ಆಲೆ ಹಾಗೂ ಮೋದಿ ಜನಪ್ರಿಯತೆ ಆಧಾರ ಹಿನ್ನಲೆಯಲ್ಲಿ ಪೂರ್ಣ ಬಹುಮತವನ್ನು ಗಳಿಸಿತ್ತು. ಆದರೆ ಈ ಭಾರಿ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಬಿಜೆಪಿ ಪ್ರಾಬಲ್ಯಕ್ಕೆ ಅಡ್ಡಗಾಲಾಗಿದೆ. ಈ ಹಿನ್ನಲೆಯಲ್ಲಿ ಈ ನಿರೀಕ್ಷಿತ ಸಂಖ್ಯೆಯಲ್ಲಿ ಸ್ಥಾನಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತದೆ.
ಇತ್ತೀಚಿಗಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದಿ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ, ಚತ್ತೀಸ್ ಗಡ್ ದಲ್ಲಿ ಹಿನ್ನಡೆ ಅನುಭವಿಸಿದ ನಂತರ ಆಡಳಿತ ವಿರೋಧಿ ಅಲೆಯನ್ನು ಮನಗಂಡ ಬಿಜೆಪಿ, ನಂತರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಭದ್ರತೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿತು. ಇದಕ್ಕೆ ಪೂರಕವೆನ್ನುವಂತೆ ಪುಲ್ವಾಮಾ ಉಗ್ರರ ದಾಳಿಯ ನಂತರ ಪ್ರತಿಕಾರವಾಗಿ ಪಾಕಿಸ್ತಾನದ ಬಾಲಾಕೊಟ್ ಮೇಲೆ ಮಾಡಿದ ವಾಯುದಾಳಿ ಸೋಲಿನಿಂದ ಭಯಭೀತಿಗೊಂಡಿದ್ದ ಬಿಜೆಪಿಗೆ ಚುನಾವಣಾ ಅಸ್ತ್ರವಾಯಿತು. ಈ ಹಿನ್ನಲೆಯಲ್ಲಿ ರಾಷ್ಟ್ರೀಯತೆ, ದೇಶದ ರಕ್ಷಣೆಯನ್ನೇ ಕೇಂದ್ರಿಕರಿಸಿ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಮುಂದಾಯಿತು.ಇನ್ನೊಂದೆಡೆಗೆ ಕಾಂಗ್ರೆಸ್ ಉದ್ಯೋಗ ಸೃಷ್ಟಿ ,ನ್ಯಾಯ ನಂತಹ ಯೋಜನೆಗಳ ಮೂಲಕ ಮತದಾರ ಗಮನ ಸೆಳೆಯಲು ಮುಂದಾಯಿತು. ಈಗ ಚುನಾವಣಾ ಪ್ರಚಾರ, ಮತದಾನ ಎಲ್ಲವು ಮುಗಿದಿದ್ದು ನಾಳೆ ಜನತಾ ಜನಾರ್ಧನ ಆದೇಶ ಯಾರ ಪರವಾಗಲಿದೆ ಎನ್ನುವುದು ಸ್ಪಷ್ಟವಾಗಲಿದೆ.