ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ರಾಮ್‍ತೆಕ್ ಕಟಾರಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಉತ್ತರಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮೇ 31ರಂದು ಮಧ್ಯಾಹ್ನ 12.30ಕ್ಕೆ ಗೌತಮ್ ಬುದ್ಧನಗರ್ ಜಿಲ್ಲೆಯ ಸಮಾಜವಾದಿ ಪಕ್ಷದ ದಾದ್ರಿ ಅಸೆಂಬ್ಲಿ ವಿಭಾಗದ ಅಧ್ಯಕ್ಷರಾಗಿದ್ದ ರಾಮ್‍ತೆಕ್ ಕಟಾರಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಆರು ಮಂದಿಯ ಮೇಲೆ ಶಂಕೆ ವ್ಯಕ್ತಪಡಿಸಿ ದಾದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಬಲೇಸರ್, ನೀಟೂ, ಕಪಿಲ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಕೊಲೆಗೆ ಬಳಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. 2019ರ ಜನವರಿಯಲ್ಲಿ ಅಲೀಗಢದ ರೈಲ್ವೆ ಹಳಿಯ ಮೇಲೆ ಈ ಪ್ರಕರಣ ಪ್ರಮುಖ ಆರೋಪಿ ಬಲೇಸರ್ ನ ತಮ್ಮ ರಮೇಶನ ಶವ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಮ್‍ತೆಕ್ ಕಟಾರಿಯಾ ಮತ್ತು ಆತನ ಪರಿವಾರದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದ. ಆದರೆ ಪೊಲೀಸರು ಈ ಸಾವನ್ನು ಅಪಘಾತ ಎಂದು ಹೇಳಿ ಅಂತ್ಯಗೊಳಿಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ತನ್ನ ತಮ್ಮನ ಕೊಲೆ ಸೇಡು ತೀರಿಸಿಕೊಳ್ಳಲು ಬಲೇಸರ್, ರಾಮ್ತೆಕ್ ಕಟಾರಿಯಾ ಅವರನ್ನು ಹತ್ಯೆ ಮಾಡಲು ಉದ್ದೇಶಪೂರ್ವಕವಾಗಿ ಯೋಜಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.