ನವದೆಹಲಿ: ಉತ್ತರಖಂಡ್ ಸರ್ಕಾರವು ಪಾನ್ ಮಸಾಲಾ ಮತ್ತು ಗುಟ್ಕಾಗಳ ಸಂಗ್ರಹಣೆ, ವಿತರಣೆ, ತಯಾರಿಕೆ ಮತ್ತು ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದೆ.
ಆಹಾರ ಸುರಕ್ಷತಾ ಆಯುಕ್ತ ನಿತೇಶ್ ಕುಮಾರ್ ಜಾ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. ಈ ನಿಷೇಧವು ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಒಂದು ವರ್ಷದ ಅವಧಿಗೆ ಇದನ್ನು ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಂಬಾಕು ಮತ್ತು ನಿಕೋಟಿನ್ ಆಧಾರಿತ ಉತ್ಪನ್ನಗಳನ್ನು ಸೇವನೆ ಮಾಡುವ ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಾರಣ, ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಆದೇಶವನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ, ಇದು ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಆಹಾರ ಉತ್ಪನ್ನವನ್ನು ಒಂದು ವರ್ಷ ನಿಷೇಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ. ಮಾನವನ ಬಳಕೆಗೆ ಉದ್ದೇಶಿಸಿರುವ ಯಾವುದೇ ಉತ್ಪನ್ನದಲ್ಲಿ ತಂಬಾಕು ಮತ್ತು ನಿಕೋಟಿನ್ ಅನ್ನು ಒಂದು ಘಟಕಾಂಶವಾಗಿ ಬಳಸುವುದನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ನಿಷೇಧಿಸಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಇಂತಹ ಕ್ರಮ ಕೈಗೊಳ್ಳುವ ಕಾರಣವನ್ನು ವಿವರಿಸಿದೆ.