ಔರಂಗಬಾದ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಪ್ರೀತಿ-ಪ್ರೇಮದ ಹಿಂದೆ ಬೀಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರನ್ನೋ ಇಷ್ಟಪಟ್ಟು, ಎರಡೇ ದಿನದಲ್ಲಿ ಲವ್ ಎಂಬ ಕೂಪದಲ್ಲಿ ಬಿದ್ದು, ಕುಟುಂಬದವರನ್ನೇ ಮರೆತುಬಿಡುತ್ತಾರೆ. ಪ್ರೀತಿ ತಪ್ಪಲ್ಲ, ಆದರೆ ಚಿಕ್ಕ ವಯಸ್ಸಿನಲ್ಲಿ ಅದರಿಂದಾಗುವ ದುಷ್ಪರಿಣಾಮಗಳು ಜೀವನದ ಮೇಲೆಯೇ ಪ್ರಭಾವ ಬೀರುತ್ತವೆ. ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಕ್ಲಾಸ್ ಟೀಚರ್ಗೆ ಸಿಕ್ಕಿದ ಲವ್ ಲೆಟರ್
ಯಾರೋ ಹುಡುಗ ತನ್ನ ಗರ್ಲ್ ಫ್ರೆಂಡ್'ಗೆ ಬರೆದಿದ್ದ ಲವ್ ಲೆಟರ್ ಕ್ಲಾಸ್ ಟೀಚರ್ ಕೈಗೆ ಸಿಕ್ಕಿತ್ತು. ಕೂಡಲೇ ಕ್ಲಾಸ್ ಟೀಚರ್ ಆ ವಿದ್ಯಾರ್ಥಿನಿಗೆ ಬುದ್ಧಿವಾದ ಹೇಳಿದರಷ್ಟೇ ಅಲ್ಲದೆ, ಪೋಷಕರನ್ನು ಶಾಲೆಗೆ ಕರೆಸಿದ್ದಾರೆ. ಬಳಿಕ ಪೋಷಕರೂ ಸಹ ಬುದ್ಧಿವಾದ ಹೇಳಿ ಮತ್ತೆ ಈ ರೀತಿ ಮಾಡದಂತೆ ತಿಳಿಸಿದ್ದಾರೆ.
ಆದರೆ, ಮನೆಗೆ ತೆರಳಿದ ಕೂಡಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕ್ಲಾಸ್ ಟೀಚರ್ ಮತ್ತು ಪೋಷಕರು ಬೈದಿದ್ದಕ್ಕೆ, ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಆ ಲವ್ ಲೆಟರ್ ಅನ್ನು ಮತ್ಯಾರೋ ಬರೆದಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿಯ ತಂದೆ, "ಶಾಲೆಯಿಂದ ಕರೆ ಬಂದ ಕೂಡಲೇ ಶಾಲೆಗೆ ಹೋದಾಗ ಅಲ್ಲಿ ಮಗಳು ಅಳುತ್ತಾ ನಿಂತಿದ್ದಳು. ಆಗ ಕ್ಲಾಸ್ ಟೀಚರ್ ನಿಮ್ಮ ಮಗಳ ಬಳಿ ಲವ್ ಲೆಟರ್ ಸಿಕ್ಕಿದೆ ಅಂತ ಹೇಳಿದ್ರು. ಆದರೆ ವಿದ್ಯಾರ್ಥಿನಿ ತನಗೆ ಯಾರೂ ಬಾಯ್ ಫ್ರೆಂಡ್ ಇಲ್ಲ, ನಂಗೆ ಯಾರು ಪತ್ರ ಬರೆದಿದ್ದಾರೆ ಅನ್ನೋದೂ ಗೊತ್ತಿಲ್ಲ ಎಂದು ಹೇಳಿದ್ದಳು. ಅಲ್ಲಿಂದ ಮನೆಗ ಬಂದಾಗಲೂ ಬೇಸರದಿಂದಲೇ ಇದ್ದಳು. ಆದರೆ, ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಪಡರ್ಪುರ್ ಪೋಲಿಸ್ ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದ್ದು, ಪ್ರೇಮಪತ್ರ ಬರೆದವರನ್ನು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.