ಅತೃಪ್ತರ ರಾಜೀನಾಮೆ: ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಲು ಶಾಸಕರಿಗೆ ಸುಪ್ರೀಂ‌ ನಿರ್ದೇಶನ

ಶಾಸಕರ ರಾಜೀನಾಮೆ ವಿಷಯವನ್ನು ಇಂದೇ ನಿರ್ಧರಿಸಿ: ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ಆದೇಶ.

Last Updated : Jul 11, 2019, 12:08 PM IST
ಅತೃಪ್ತರ ರಾಜೀನಾಮೆ: ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಲು ಶಾಸಕರಿಗೆ ಸುಪ್ರೀಂ‌ ನಿರ್ದೇಶನ title=

ನವದೆಹಲಿ: ಕರ್ನಾಟಕದ  ಕಾಂಗ್ರೆಸ್-ಜೆಡಿಎಸ್ ನ 10 ಬಂಡಾಯ ಶಾಸಕರನ್ನು "ಇಂದು ಸಂಜೆ 6 ಗಂಟೆ ಒಳಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದೆ ಖುದ್ದು ಹಾಜರಾಗುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಈ ವೇಳೆ ಸ್ಪೀಕರ್ ಬಯಸಿದರೆ ಖುದ್ದಾಗಿ ರಾಜೀನಾಮೆ ಸಲ್ಲಿಸುವಂತೆ" ಶಾಸಕರಿಗೆ ಸೂಚಿಸಿದೆ.

ಅತೃಪ್ತ ಶಾಸಕರು ಇಂದು ಸಂಜೆ ಸ್ಪೀಕರ್ ಮುಂದೆ ಹಾಜರಾಗುವಂತೆ ಆದೇಶ ನೀಡಿದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ಕಚೇರಿಯಲ್ಲೇ ಇರುವಂತೆ ಸ್ಪೀಕರ್​ ರಮೇಶ್ ಕುಮಾರ್​ಗೆ ಸೂಚನೆ ನೀಡಿದೆ. ಅಲ್ಲದೆ ಶಾಸಕರ ರಾಜೀನಾಮೆ ವಿಷಯವನ್ನು ಇಂದೇ ನಿರ್ಧರಿಸಿ ಎಂದೂ ಕೂಡ ಆದೇಶಿಸಿದೆ. ಸ್ಪೀಕರ್ ಭೇಟಿ ವೇಳೆ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಲು ತಿಳಿಸಿರುವ ಸರ್ವೋಚ್ಚ ನ್ಯಾಯಾಲಯ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ತಮ್ಮ ನಿರ್ಧಾರವನ್ನು ನಾಳೆಯ ವಿಚಾರಣೆ ವೇಳೆ ಸ್ಪೀಕರ್ ಸುಪ್ರೀಂಕೋರ್ಟ್​ಗೆ ತಿಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಸ್ಪೀಕರ್ ಭೇಟಿಗೆ ತೆರಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು:
ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಬಳಿಕವೇ ನಾವು ಬೆಂಗಳೂರಿಗೆ ವಾಪಸ್ ಆಗುತ್ತೇವೆ ಎಂದು ಪಟ್ಟು ಹಿಡಿದು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ತೀರ್ಪಿನಿಂದ ಕಕ್ಕಾಬಿಕ್ಕಿ ಆಗಿದ್ದಾರೆ. 

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಬಂಡಾಯ ಶಾಸಕರಿಗೆ ಸ್ಪೀಕರ್ ರಮೇಶ್​ ಕುಮಾರ್ ಮುಂದೆ ಖುದ್ದು ಹಾಜರಾಗುವ ಅನಿವಾರ್ಯತೆ ಎದುರಾಗಿದ್ದು, ಬೆಂಗಳೂರಿಗೆ ತೆರಳಲು ಸಜ್ಜಾಗುತ್ತಿದ್ದಾರೆ.

ಕರ್ನಾಟಕ ವಿಧಾನಸಭಾ ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸದೇ ಮುಂದೂಡುತ್ತಿದ್ದಾರೆಂದು ಆರೋಪಿಸಿ 10 ಶಾಸಕರು ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 

ಕೆಲವರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಅತೃಪ್ತರ ಪರವಾಗಿ ನ್ಯಾ. ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.

Trending News